ಕುಂದಾಪುರ: ಅ.19-20 ವಿ.ವಿ ಮಟ್ಟದ ರಂಗಭೂಮಿ ಕಲಾ ಸ್ವರ್ಧೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯವು ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯದ ಸಹಯೋಗದೊಂದಿಗೆ ಆಯೋಜಿಸುತ್ತಿರುವ 2019-20ನೇ ಸಾಲಿನ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ವರ್ಧೆಗಳ ಭಾಗವಾಗಿ ಕುಂದಾಪುರದ ಭಂಡಾರ್ಕಾರ‍್ಸ್ ಕಾಲೇಜಿನಲ್ಲಿ ಅಂತರ್ ಕಾಲೇಜು ಮಟ್ಟದ ರಂಗಭೂಮಿ ಆಗಸ್ಟ್ 19 ಮತ್ತು 20 ರಂದು ಜರುಗಲಿದೆ.

ಈ ಬಗ್ಗೆ ಭಂಡಾರ್‌ಕಾರ‍್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ ನಾರಾಯಣ ಶೆಟ್ಟಿ ಅವರು ಮಾಹಿತಿ ನೀಡಿ, ಎರಡು ದಿನದ ಕಾರ್ಯಕ್ರಮದ ಆಯೋಜನೆ ಹಾಗೂ ಆತಿಥ್ಯವನ್ನು ಭಂಡಾರ್‌ಕಾರ‍್ಸ್ ಕಾಲೇಜು ವಹಿಸಲಿದ್ದು ರಂಗಭೂಮಿ ಕಲಾ ಸ್ವರ್ಧೆಯಲ್ಲಿ ಏಕಾಂಕ ನಾಟಕ, ಮೂಕಾಭಿನಯ, ಪ್ರಹಸನ ಹಾಗೂ ಅನುಕರಣೆ ಎಂಬ ನಾಲ್ಕು ವಿಭಾಗಗಳಿರಲಿದ್ದು ಎರಡು ದಿನವೂ ಬೆಳಿಗ್ಗೆ 9:30ರಿಂದ ಸಂಜೆ 6ರ ತನಕ ಪ್ರತ್ಯೇಕ ವೇದಿಕೆಗಳಲ್ಲಿ ಸ್ವರ್ಧೆಗಳು ಜರುಗಲಿದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳಿಗೆ ಸ್ವರ್ಧೆಯ ಬಗ್ಗೆ ಆಮಂತ್ರಣ ಕಳುಹಿಸಲಾಗುತ್ತಿದ್ದು, ಸುಮಾರು ೪೦ಕ್ಕೂ ಹೆಚ್ಚಿನ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ವಿಶ್ವವಿದ್ಯಾನಿಲಯ ಮಟ್ಟದ ಈ ಸ್ವರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳು ಪಾರಿತೋಷಕ ಪಡೆಯುವುದಲ್ಲದೇ ಸೌತ್ ಝೋನ್ ಕಲ್ಚರಲ್ ಮೀಟ್‌ಗೆ ಆಯ್ಕೆಯಾಗಲಿದ್ದಾರೆ. ಅಲ್ಲಿಯೂ ವಿಜೇತರಾಗುವ ವಿದ್ಯಾರ್ಥಿಗಳು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ವರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.

ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಎಲ್ಲಾ ಆಸಕ್ತ ಕಾಲೇಜುಗಳು ಅಗಸ್ಟ್ ೧೦ರ ಒಳಗೆ ತಮ್ಮ ಕಾಲೇಜಿನ ಮನೊಂದಾವಣೆಯನ್ನು ಮಾಡಿಕೊಳ್ಳಲು ತಿಳಿಸಿದ್ದಾರೆ. ಮಾಹಿತಿಗಾಗಿ ಈ ಮೊಬೈಲ್ ಸಂಖ್ಯೆ 9686917625 ಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ರಂಗ ಅಧ್ಯಯನ ಕೇಂದ್ರದ ಮೂಲಕ ನಿರಂತರ ರಂಗ ಚಟುವಟಿಕೆ:
ಭಂಡಾರ್‌ಕಾರ‍್ಸ್ ಕಾಲೇಜಿನ ಅಂಗಸಂಸ್ಥೆ ರಂಗ ಅಧ್ಯಯನ ಕೇಂದ್ರದ ಮೂಲಕ ಕುಂದಾಪುರದಲ್ಲಿ ರಂಗಚಟುವಟಿಕೆಗಳನ್ನು ನಿರಂತರವಾಗಿ ಮುನ್ನಡೆಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಕಾಲೇಜಿನದ್ದು. ರಾಜ್ಯದ ವಿವಿಧ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ರಂಗಶಿಕ್ಷಣ ನೀಡುತ್ತಿರುವುದಲ್ಲದೇ ಸದಭಿರುಚಿಯ ನಾಟಕಗಳನ್ನು ಪ್ರದರ್ಶಿಸುತ್ತಿದೆ. ರಾಷ್ಟ್ರೀಯ ನಾಟಕೋತ್ಸವ, ರಂಗೋತ್ಸವ ಸೇರಿದಂತೆ ನಾಟಕ ಪ್ರದರ್ಶನಗಳು ರಂಗ ಅಧ್ಯಯನ ಕೇಂದ್ರದಲ್ಲಿ ನಿರಂತರವಾಗಿ ನಡೆಯುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಅರ್ಚನಾ ಅರವಿಂದ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥೆ ಸುಮಲತಾ ಇದ್ದರು.

 

Leave a Reply

Your email address will not be published. Required fields are marked *

eighteen − fourteen =