ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾಗುವ ಸಂಸದರು ಪ್ರಭುಗಳಲ್ಲ. ಅವರು ಎಂದಿಗೂ ಜನರ ಪ್ರತಿನಿಧಿ ಹಾಗೂ ಉತ್ತರದಾಯಿಗಳು ಎಂಬ ಪ್ರಜ್ಞೆ ಜಾಗೃತಗೊಳ್ಳುವ ಜೊತೆಗೆ ಮತದಾನ ಮಾಡುವ ವಿಧಾನ ಹಾಗೂ ಮತದಾನ ಮಾಡದೇ ಇರುವ ಪ್ರವೃತ್ತಿಯಲ್ಲಿಯೂ ಬದಲಾವಣೆಯಾಗಬೇಕಿದೆ ಎಂದು ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಹೇಳಿದರು.
ಅವರು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ನೇತೃತ್ವದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಜ್ಯಶಾಸ್ತ್ರ ವಿಭಾಗ ಹಾಗೂ ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆಯೋಜಿಸಲಾದ ’ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ’ ಮತದಾನ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಂಬಂಧ, ಜಾತಿ, ಧರ್ಮ, ಆಮಿಷಗಳಿಗೆ ಒಳಗಾಗದೇ ಮತದಾನ ಮಾಡುತ್ತೇನೆ ಎಂಬ ಬದ್ದತೆ ಇದ್ದರೇ, ಮತದಾರ ಸ್ಪಂದನೀಯ ಹಾಗೂ ವಿವೇಚನೀಯನೂ ಆದರೆ ಮತ ಮಾರಾಟಕ್ಕಿಲ್ಲ ಎಂಬುದು ಅರ್ಥ ಕಂಡುಕೊಳ್ಳಲಿದೆ ಎಂದರು.
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸಂಚಾಲಕ ದಾಮೋದರ ಆಚಾರ್ಯ ಮಾತನಾಡಿ ರಾಜಕೀಯ ಪ್ರಜ್ಞೆ ಇಲ್ಲದಿದ್ದರೇ ಪ್ರಜಾಪ್ರಭುತ್ವ ಸವಾಲನ್ನು ಎದುರಿಸುತ್ತದೆ. ಹಣ, ಆಮಿಷಗಳ ಮೂಲಕ ಚುನಾವಣೆ ಎಂಬುದು ನಾಚಿಕೆಯ ಸಂಗತಿಯಾಗಿತ್ತು. ಆದರೆ ಇಂದು ಆ ಚೌಕಟ್ಟು ಕಳಚಿ ಮಾಮೂಲಿ ವಿಷಯದಂತಾಗಿದೆ. ದೇಶದ ಪ್ರತಿ ಪ್ರಜೆಯೂ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕೆಂಬ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಆಮಿಷಗಳಿಂದ ದೂರವಾಗಿ, ನಮ್ಮ ಸುತ್ತಲಿನವರನ್ನು ಎಚ್ಚರಿಸಲು ಸಾಧ್ಯವಾದರೆ ಪ್ರಜಾತಂತ್ರಕ್ಕೆ ಗೆಲುವಿದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಲಾಯಿತು. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ. ಎ. ಮೇಳಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯಶಾಸ್ತ್ರ ಉಪನ್ಯಾಸಕ ಪಿ. ವಿ ಶಿವಕುಮಾರ್ ಪ್ರಸ್ತಾವನೆಗೈದರು. ಪ್ರಾಧ್ಯಾಪಕ ನವೀನ್ ಕಾರ್ಯಕ್ರಮ ನಿರೂಪಿಸಿದರು.