ಕೊರಗ ಸಮುದಾಯಕ್ಕೆ ಒಳ ಮೀಸಲಾತಿಗಾಗಿ ಕೇಂದ್ರಕ್ಕೆ ಶಿಪಾರಸ್ಸು: ಸಚಿವ ಆಂಜನೇಯ

Call us

ಬೈಂದೂರು ಮುರೂರು ಕೊರಗ ಕಾಲೋನಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಹೇಳಿಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ೫೦ಕ್ಕೂ ಜಾತಿಗಳಿದ್ದು ಆ ಪೈಕಿ ೩೫ಜಾತಿ ಸಮುದಾಯ ನಾಡಿನಲ್ಲಿ, ೧೫ ಜಾತಿ ಸಮುದಾಯದ ಜನರು ಕಾಡಿನಲ್ಲಿ ವಾಸಿಸುತ್ತಿದ್ದಾರೆ. ಅನಾದಿಕಾಲದಿಂದ ಅರಣ್ಯ ತಪ್ಪಲು ಪ್ರದೇಶದಲ್ಲಿ ನೆಲೆಸಿರುವ, ಮೃದು ಸ್ವಭಾವದ ಕಡಿಮೆ ಸಂಖ್ಯೆಯಲ್ಲಿರುವ ಕೊರಗ ಹಾಗೂ ಬುಡಕಟ್ಟು ಸಮುದಾಯಗಳಿಗೆ ಪರಿಶಿಷ್ಟ ಪಂಗಡದ ಇತರೆ ಜಾತಿಯೊಂದಿಗೆ ಸ್ವರ್ಧಿಸಲು ಕಷ್ಟಸಾಧ್ಯವಾಗುತ್ತಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಳ ಮೀಸಲಾತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಸಿಎಂಗೆ ಮನವಿ ಮಾಡಲಾಗುವುದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದೂಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಹೇಳಿದರು.

ಅವರು ಹೊಸ ವರ್ಷದ ಸಂಭ್ರಮಾಚರಣೆಗಾಗಿ ಕಾಲ್ತೋಡು ಗ್ರಾ.ಪಂ ವ್ಯಾಪ್ತಿಯ ಮುರೂರು ಕೊರಗ ಕಾಲೋನಿಯಲ್ಲಿ ವಾಸ್ತವ್ಯಕ್ಕಾಗಿ ಬಂದಿದ್ದ ಅವರು ಆದಿವಾಸಿ ಮನೆ ಬಾಗಿಲಿಗೆ ಸರಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಿಷ್ಠೆಗೆ ಮತ್ತೊಂದು ಹೆಸರು ಕೊರಗರು. ಅವರೊಂದಿಗೆ ಅವರೊಂದಿಗೆ ದಿನಪೂರ್ತಿ ಇದ್ದು ಮಾತನಾಡುವ, ಅವರ ನಿವಾಸದಲ್ಲಿಯೇ ವಾಸ್ತವ್ಯ ಹೂಡುವ, ಕೊರಗರ ಬೇಡಿಕೆಗಳನ್ನು ಆಲಿಸಿ, ಸರಕಾರ ಯೋಜನೆಗಳನ್ನು ಅನುಷ್ಠಾನಗೊಳಿಸುವ ವಿಶಿಷ್ಟ ಕಾರ್ಯಕ್ರಮ ಗ್ರಾಮ ವಾಸ್ತವ್ಯವಾಗಿದ್ದು, ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಪರಿಣಾಮಕಾರಿ ಕಾರ್ಯಕ್ರಮ ಇದಾಗಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಉಡುಪಿ ಜಿಲ್ಲೆಯಲ್ಲಿ ಕೊರಗರ ಶ್ರೇಯಾಭಿವೃದ್ಧಿಗಾಗಿ ಪ್ರಸಕ್ತ ಸಾಲಿನಲ್ಲಿ ೮೨ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ಆ ಪೈಕಿ ೫೪ಕೋಟಿ ರೂ.ಗಳನ್ನು ವಿವಿಧ ಯೋಜನೆಗಳಿಗಾಗಿ ವಿನಿಯೋಗ ಮಾಡಲಾಗಿದೆ. ಉಳಿದ ಹಣದಲ್ಲಿ ಕೊರಗರ ಅತೀ ಅಗತ್ಯತೆಗಳ ನೀಲ ನಕ್ಷೆ ತಯಾರಿಸಿ ಕಾರ್ಯರೂಪಕ್ಕೆ ತರಲಾಗುತ್ತದೆ, ಅಲ್ಲದೇ ಕೊರಗರ ಕಲ್ಯಾಣಕ್ಕಾಗಿ ವಿಶೇಷ ಪ್ಯಾಕೆಜ್ ನೀಡುವುದಕ್ಕಿಂತ ಇರುವ ಅನುದಾನದಲ್ಲಿ ಆಡಳಿತಾತ್ಮಕ ನ್ಯೂನ್ಯತೆಗಳನ್ನು ಸರಿಪಡಿಸಿ ಅನುಷ್ಠಾನಕ್ಕೆ ತರಲು ಯತ್ನಿಸಲಾಗುತ್ತದೆ ಎಂದರು.

ಕಾಡದಾರಿಯನ್ನು ನಾಡ ದಾರಿಯನ್ನಾಗಿ ಮಾಡಿ ಕೊರಗ ವಾಸಿಗಳನ್ನು ನಾಡಿಗೆ ತರುವ ಕಾರ್ಯ ಮಾಡಬೇಕಾಗಿದೆ. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಆದಿವಾಸಿಗಳಿಗೆ ಎಲ್ಲಾ ರೀತಿಯ ಹಕ್ಕುಗಳನ್ನು ನೀಡಲಾಗಿದ್ದರೂ ಅರಣ್ಯ ಇಲಾಖೆ ಅವರನ್ನು ಸ್ವತಂತ್ರವಾಗಿ ಬದುಕಲು ಬಿಡುತ್ತಿಲ್ಲ. ಈವರೆಗೂ ತಮ್ಮ ಪಾಡಿಗೆ ಜೀವಿಸುತ್ತಿರುವ ಅವರಿಗೆ ಹಕ್ಕುಪತ್ರ ನೀಡುವ ಕೆಲಸವಾಗಿಲ್ಲ. ಆದಿವಾಸಿಗಳಿಂದಾಗಿ ಕಾಡು ಉಳಿದಿದೆ ಎಂಬುದುನ್ನು ಮರೆಯಬಾರದು ಎಂದರು.

Call us

ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ಸಂಕಲ್ಪ ಹೊಂದಿರುವ ಸರಕಾರ ಕೊರಗರಿಗಾಗಿ ವಿಶೇಷ ಸೌಲಭ್ಯಗಳನ್ನು ನೀಡಿದೆ ಎಂದ ಸಚಿವರು ಕೊರಗರ ಕಾಲೋನಿಗಳಿಗೆ ತೆರಳುವ ರಸ್ತೆಗಳು ತೀರಾ ಹದಗೆಟ್ಟಿದ್ದು ಅವುಗಳನ್ನು ಕಾಂಕ್ರೀಟಿಕರಣಗೊಳಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮೂಲಕ ನೀಲನಕ್ಷೆ ತಯಾರಿಸಿ ಚಾಲನೆ ನೀಡುವ ಕಾರ್ಯವಾಗಲಿದೆ ಎಂದರು. ಮನೆ ಕಟ್ಟುವವರ ಅನುದಾನ ಹೆಚ್ಚಳ, ಭೂಮಿ ಇಲ್ಲದವರಿಗೆ ಕೃಷಿ ಭೂಮಿಯನ್ನು ನೀಡಿ ಸ್ವಾವಲಂಭಿ ಬದುಕು ನಡೆಸುವ ಕಾರ್ಯಕ್ಕೆ ಪ್ರೋತ್ಸಾಹ ನೀಡಲು ಸರಕಾರ ಬದ್ಧವಾಗಿದೆ ಎಂದು ಭರವಸೆಯಿತ್ತರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕೊರಗರ ಸಂತತಿ ಕ್ಷೀಣಿಸುತ್ತಿದೆ. ಮೂಡನಂಬಿಕೆಗಳಿಗೆ ಬಲಿಯಾಗುತ್ತಿರುವ ಕೊರಗರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅನಾರೋಗ್ಯಕ್ಕೆ ತುತ್ತಾದಾಗ ಭೂತಪ್ಪನ ಬಳಿ ಕೂರಿಸುವ ಬದಲಿಗೆ ಡಾಕ್ಟರ್ ಬಳಿ ಕೂರಿಸಿದರೇ ಆರೋಗ್ಯ ಸುಧಾರಿಸಬಹುದು ಎಂದರು. ಆರೋಗ್ಯ ಸಮಸ್ಯೆ ಇರುವರಿಗೆ ಸರಕಾರದಿಂದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿಯೂ ಉಚಿತ ಚಿಕಿತ್ಸೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಂಡಿದ್ದು, ಆಸ್ಪತ್ರೆಗೆ ದಾಖಲಾದ ಕೊರಗ ವೈದ್ಯಕೀಯ ವೆಚ್ಚ ಸಂಪೂರ್ಣವಾಗಿ ಭರಿಸಲಿದೆ ಎಂದರು.

ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ sಸರಕಾರದ ವಿವಿಧ ಸೌಲಭ್ಯಗಳ ಹೊರತಾಗಿಯೂ ಕೊರಗ ಸಮುದಾಯದ ಬದುಕು ದುಸ್ತರವಾಗಿದ್ದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕಿದೆ. ಸಮಾಜ ಕಲ್ಯಾಣ ಇಲಾಖೆಯ ಮೂಲಕ ಕೊರಗರಿಗೆ ಸುಸಜ್ಜಿತವಾದ ಮನೆ, ರಸ್ತೆ ಹಾಗೂ ಉದ್ಯೋಗ ನೀಡುವ ಕೆಲಸವಾಗಬೇಕಿದೆ ಎಂದರು.

ನಿರಾಶ್ರಿತ ಕೊರಗರಿಗೆ ನೀಡುವ ಅನುದಾನದಲ್ಲಿ ಮನೆ, ಬಾವಿ, ಕರೆಂಟು ಸೌಲಭ್ಯಗಳು ದೊರೆಯುವಂತಾಗಬೇಕು. ಕೊರಗ ಸಮುದಾಯಗಳಿಗೆ ಕೃಷಿ ಭೂಮಿಯನ್ನು ನೀಡಿ ಅವರನ್ನು ಆರ್ಥಿಕ ಸ್ವಾವಲಂಭಿಗಳನ್ನಾಗಿಸುವ ಕೆಲಸ ಇಲಾಖೆಯ ಮೂಲಕ ನಡೆಸಬೇಕಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ಜಿಲ್ಲಾಧಿಕಾರಿ ವೆಂಕಟೇಶ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫೇರ್ನಾಂಡಿಸ್,  ಜಿಲ್ಲಾ ಕೆಡಿಸಿ ಸದಸ್ಯ ಎಸ್. ರಾಜು ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ವಿಜಯ ಶೆಟ್ಟಿ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಕಾಲ್ತೂಡು ಗ್ರಾಪಂ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಸ್ವಾಗತಿಸಿದರು. ಕುಂದಾಪುರ ಬಿಸಿಎಂ ಇಲಾಖಾಧಿಕಾರಿ ನರಸಿಂಹ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

ಸಚಿವರಿಗೆ ಹಾರ ಹಾಕಿ ಕೊರಗರ ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತಿಸಲಾಯಿತು.

Leave a Reply

Your email address will not be published. Required fields are marked *

6 + seventeen =