ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಮೀನುಗಾರಿಕಾ ಹೊರಬಂದರಿನ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿಲ್ಲ. ಅದನ್ನು ಪೂರ್ಣಗೊಳಿಸಲು ರಾಜ್ಯ ಬಜೆಟ್‌ನಲ್ಲಿ ಮೀಸಲಿರಿಸಿದ ರೂ ೮೬ ಕೋಟಿ ಬಳಸಿಕೊಂಡು ನಡೆಸುವ ಎರಡನೆ ಹಂತದ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಬಂದರು ಪ್ರದೇಶಕ್ಕೆ ಭೇಟಿನೀಡಿ ಅಪೂರ್ಣ ಕಾಮಗಾರಿ ಮತ್ತು ಅಲ್ಲಿ ಕಡಲ್ಕೊರೆತದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದ ಬಳಿಕ ಅವರು ಅಹವಾಲು ಸಲ್ಲಿಸಿದ ಸ್ಥಳೀಯ ಮೀನುಗಾರರಿಗೆ ಈ ಆಶ್ವಾಸನೆ ನೀಡಿದರು.
ಮೀನುಗಾರರ ಶ್ರೀರಾಮ ಮಂದಿರದ ಅಧ್ಯಕ್ಷ ಮೋಹನ ಖಾರ್ವಿ, ಮಾಜಿ ಅಧ್ಯಕ್ಷರಾದ ಸೋಮಯ್ಯ ಖಾರ್ವಿ, ಚಂದ್ರ ಖಾರ್ವಿ, ಮಾರುಕಟ್ಟೆ ವಿಭಾಗದ ಅಧ್ಯಕ್ಷ ಶಂಕರ ಖಾರ್ವಿ, ಕಾರ್ಯದರ್ಶಿ ಕೆ. ಎಂ. ಸತೀಶ ಖಾರ್ವಿ, ಉಪಾಧ್ಯಕ್ಷ ವಾಸು .ಖಾರ್ವಿ ಅಪೂರ್ಣವಾಗಿರುವ ಬಂದರು ಮತ್ತು ಅದರಿಂದ ಪ್ರತಿವರ್ಷ ಸಂಭವಿಸುವ ಕಡಲ್ಕೊರೆತದಿಂದ ಕರಾವಳಿ ರಸ್ತೆ ಹಾಗೂ ಸಮೀಪದ ಜನತಾ ಕಾಲನಿಯ ಮನೆಗಳಿಗೆ ಆಗುತ್ತಿರುವ ಹಾನಿ, ಮಳೆನೀರು ಚರಂಡಿಯಿಲ್ಲದ ಕಾರಣ ಮೀನುಗಾರಿಕೆಗೆ ಮತ್ತು ಮೀನುಗಾರರ ಬದುಕಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದು ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ಒತ್ತಾಯಿಸಿದರು.
ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ, ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಜಿ. ಪುತ್ರನ್ ಮತ್ತಿತರರು ಇದ್ದರು.
ಇದನ್ನೂ ಓದಿ:
► ಕೋಡಿ ಕಡಲ್ಕೋರೆತ ಪ್ರದೇಶಕ್ಕೆ ಉಸ್ತುವಾರಿ ಸಚಿವ ಬೊಮ್ಮಾಯಿ ಭೇಟಿ – https://kundapraa.com/?p=40230 .