ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೀಟೂ ಮೂಲಕ ಹೆಣ್ಣಿಗೆ ತನ್ನ ಮೇಲಾಗಿರಬಹುದಾದ ದೌರ್ಜನ್ಯವನ್ನು ಮುಕ್ತವಾಗಿ ಹೇಳಿಕೊಳ್ಳಲು ಸಾಧ್ಯವಾಗುತ್ತಿದೆ. ಅವಳಿಗೆ ಅದರಿಂದ ಬಲ ಬಂದಿದೆ. ಆದರೆ ಮೀಟೂಗೆ ಕಾನೂನಿನ ಬೆಂಬಲ ಸಿಗುವ ವರೆಗೆ ನಿರೀಕ್ಷಿತ ಪರಿಹಾರ ಸಿಗದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಜಯಮಾಲಾ ಅಭಿಪ್ರಾಯಪಟ್ಟರು.
ಬೈಂದೂರು ಕ್ಷೇತ್ರದ ನಾಗೂರಿನಲ್ಲಿ ಗುರುವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ನನಗೆ ತಿಳಿದಿರುವಂತೆ ಅರ್ಜುನ ಸರ್ಜಾ ಒಬ್ಬ ಸಜ್ಜನ ನಟ. ಮಹಿಳೆಯರ ಕೆಲಸದ ಸ್ಥಳದಲ್ಲಿ ಅವರ ವಿರುದ್ಧ ನಡೆಯುವ ಕಿರುಕುಳ, ದೌರ್ಜನ್ಯ ಸಂದರ್ಭಗಳಲ್ಲಿ ಪರಿಹಾರ ಕಂಡುಕೊಳ್ಳಲು ಆಂತರಿಕ ಸಮಿತಿಗಳು ಇರಬೇಕು ಎಂದು ವಿಶಾಕಾ ಪ್ರಕರಣದಲ್ಲಿ ನ್ಯಾಯಾಂಗ ನೀಡಿದ ತೀರ್ಪಿನಂತೆ ಚಲನಚಿತ್ರ ಕ್ಷೇತ್ರದಲ್ಲೂ ಅವು ಇರಬೇಕು. ಅದನ್ನು ನಾನು ಚಲನಚಿತ್ರ ವಾಣಿಜ್ಯ ಮಂಡಳಿಗೂ ತಿಳಿಸುತ್ತೇನೆ ಎಂದರು.
ಇಂತಹ ಅನುಭವ ತಮ್ಮ ವೃತ್ತಿ ಜೀವನದ ಸಂದರ್ಭದಲ್ಲಿ ಆಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮದು ಸುವರ್ಣಯುಗ. ರಾಜಕುಮಾರ್ ಅವರಂತವರ ಕಾಲ ಅದು. ನಾನು ೭೫ ಚಿತ್ರಗಳಲ್ಲಿ ನಟಿಸಿದ್ದೇನೆ; ೫ ಚಿತ್ರಗಳನ್ನು ತಯಾರಿಸಿದ್ದೇನೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಆಗಿಯೂ ಕೆಲಸ ಮಾಡಿದ್ದೇನೆ. ಅಂತಹ ಯಾವ ಅನುಭವವೂ ಆಗಿಲ್ಲ ಎಂದರು. ಉಡುಪಿ ಜಿಲ್ಲೆಯ ಮರಳಿನ ಸಮಸ್ಯೆಯ ಕುರಿತು ಕೇಳಿದ ಪ್ರಶ್ನೆಗೆ ಆ ವಿಚಾರದಲ್ಲಿ ಪರಿಸರಕ್ಕೆ ಸಂಬಂಧಿಸಿದ ಕಾಯಿದೆಗಳ ಪಾಲನೆ ಆಗಬೇಕಾಗಿರುವುದರಿಂದ ಕ್ರಮ ಕೈಗೊಳ್ಳುವುದು ಸ್ವಲ್ಪ ತಡವಾಗುತ್ತಿದೆ. ಎಲ್ಲವೂ ಶೀಘ್ರ ಪರಿಹಾರವಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು.