ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮನುಷ್ಯನ ವ್ಯಕ್ತಿಯನ್ನು ಗುರುತಿಸುವುದು ಹಣಬಲ, ಜನಬಲ ಅಥವಾ ಬೇರಾವುದೇ ಬಲಗಳಿಂದಲ್ಲ, ಬದಲಾಗಿ ಆತನಲ್ಲಿರುವ ಸಜ್ಜನಿಕೆ, ಪ್ರಾಮಾಣಿಕತೆ, ಮಮತೆ ಹಾಗೂ ಎಲ್ಲರನ್ನೂ ಗೌರವಿಸುವ ಗುಣಗಳಿಂದ. ಅದಕ್ಕೆ ಅನ್ವರ್ಥವೆಂಬಂತೆ ಬದುಕುತ್ತಿರುವವರು ಹರೇಕಳ ಹಾಜಬ್ಬ ಎಂದು ರಾಜ್ಯ ಮುಜರಾಯಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ವೀಡಿಯೋ ನೋಡಿ
ಅವರು ಸೋಮವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಜರುಗುತ್ತಿರುವ ಮೂರು ದಿನಗಳ ’ಸುರಭಿ ಜೈಸಿರಿ’ ಕಾರ್ಯಕ್ರಮದಲ್ಲಿ ಅಕ್ಷರಸಂತ ಹರೇಕಳ ಹಾಜಬ್ಬ ಅವರಿಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನಿಸಿ ಮಾತನಾಡಿ ಯಾವ ಸ್ವಾರ್ಥ, ದುರಾಲೋಚನೆ, ಫಲಾಪೇಕ್ಷೆ ಇಲ್ಲದೇ ಬದುಕೇ ಕಾಯಕ ಎಂದು ತಿಳಿದು ಬಸ್ ನಿಲ್ದಾಣದಲ್ಲಿ ಕಿತ್ತಲೆ ಮಾರಿ ಬದುಕು ಸಾಗಿಸುತ್ತಿದ್ದ ಒಬ್ಬ ಮನುಷ್ಯ ಶಾಲೆ ಕಟ್ಟಿ ನೂರಾರು ಮಕ್ಕಳ ವಿದ್ಯಾರ್ಜನೆಗೆ ದಾರಿ ಮಾಡಿಕೊಡುತ್ತಾರೆಂದರೆ ಅದಕ್ಕಿಂತ ದೊಡ್ಡ ಸಾಧನೆ ಯಾವುದಿದೆ ಎಂದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪದ್ಮವಿಭೂಷಣ ಪ್ರಶಸ್ತಿ ಪಡೆಯುವ ಸಂದರ್ಭ ಅಂಹಕಾರದಿಂದ ನನ್ನನ್ನು ಮುಕ್ತಗೊಳಿಸುವ ಎಂಬ ಕವನವೊಂದನ್ನು ಹೇಳಿದ್ದರು. ಅದಕ್ಕೆ ಸಮನಾದಂತ ಪದ್ಮಶ್ರೀ ಪ್ರಶಸ್ತಿ ಪಡೆಯಲಿರುವ ಹರೇಕಳ ಹಾಜಬ್ಬ ಅವರಿಗೆ ಅಹಂಕಾರ ಎಂದರೆ ಏನೆಂದೇ ತಿಳಿಯದು. ಮುಗ್ದತೆ, ಪ್ರೀತಿ, ದಿಗ್ಬ್ರಮೆ, ಔದಾರ್ಯ, ಕುತೂಹಲ, ಶಾಲೆಯ ಬಗೆಗಿನ ಕನಸುಗಳು ಬಿಟ್ಟರೆ ಅಹಂಕಾರದ ಲವಲೇಶಗಳು ಅವರಿಗೆ ತಿಳಿದಿಲ್ಲ. ಅಂತವರಿಗೆ ಕೇಂದ್ರ ಸರಕಾರದ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದರ ಹಿಂದಿನ ತಾರ್ಕಿಕತೆಯನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಕಲಾವಿದರ ಸೃಷ್ಠಿ ಸುಲಭವಲ್ಲ:
ಮಾತುಗಾರರು, ರಾಜಕಾರಣಿಗಳನ್ನು ಸೃಷ್ಠಿಸುವುದು ಕಷ್ಟವಲ್ಲ. ಆದರೆ ಕಲಾವಿದರು, ಸಾಹಿತಿಗಳು, ಚಿಂತಕರನ್ನು ಸೃಷ್ಠಿಸುವುದು ಕಠಿಣ ಕೆಲಸ. ಸಾಮಾಜಿಕ ವೈರುಧ್ಯ, ಅಹಂಕಾರ ಮೀರಿ, ಗಜ್ಜೆ ಕಟ್ಟಿ ನಮ್ಮ ಮುಂದೆ ಬಂದು ನಿಂತರೆ ಆತನನ್ನು ರೂಪಿಸಿದ ಸಂಸ್ಥೆಯ ಶ್ರಮ ಸಾರ್ಥಕವಾಗುತ್ತದೆ. ಅಂತಹ ಸೃಜನಶೀಲ ಮನಸ್ಸುಗಳಿಂದ ಆ ಗ್ರಾಮವೂ ನಮ್ಮ ಅರಿವಿಗೆ ಬರುವ ಮೊದಲೇ ಸುಸಂಸ್ಕೃತವಾಗಿ ಬೆಳೆಯುತ್ತದೆ. ಈ ದಿಸೆಯಲ್ಲಿ ಸುರಭಿ ಸಂಸ್ಥೆ ಶ್ಲಾಘನಾರ್ಹ ಕಾರ್ಯ ಮಾಡುತ್ತಿದೆ ಎಂದ ಅವರು, ಸುರಭಿಯ ಕಲಾಗ್ರಾಮಕ್ಕೆ ಸರಕಾರದಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದರು.
ಪ್ರಶಸ್ತಿ ಸ್ವೀಕರಿಸಿದ ಹರೇಕಳ ಹಾಜಬ್ಬ ಮಾತನಾಡಿ, ತನ್ನಂತ ಬಡವನನ್ನು ಬೈಂದೂರಿನ ಜನರು ಗುರುತಿಸಿ ಸನ್ಮಾನಿಸಿದ್ದಕ್ಕೆ ನಾನು ತಲೆಬಾಗಿ ನಮಿಸುತ್ತೇನೆ. ನಾನು ಸಮಾಜದ ಮೂಲೆಯಲ್ಲಿ ಇದ್ದ ಮನುಷ್ಯ ಆದರೆ ನಾನು ಮಾಡಿರುವ ಕೆಲಸಕ್ಕೆ ತಾವು ಗುರುತಿಸಿದ್ದೀರಿ. ಸಚಿವರು ಬೆಂಗಳೂರಿನಿಂದ ಬಂದು ಪ್ರಶಸ್ತಿ ಕೊಟ್ಟದ್ದಕ್ಕೆ ಅವರಿಗೆ ನಮಸ್ಕರಿಸುತ್ತೇನೆ. ಎಲ್ಲರಿಗೂ ದೇವರು ಆಯಸ್ಸು, ಆರೋಗ್ಯ, ಸುಖ ಸಂಪತ್ತು ಕೊಡಲಿ ಎಂದು ಹಾರೈಸಿದರು.
ಹಿರಿಯ ಪತ್ರಕರ್ತ ಎಸ್. ಜನಾರ್ದನ ಮರವಂತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಇಸ್ಮತ್ ಪಜೀರ್ ಮಂಗಳೂರು, ಪತ್ರಕರ್ತ ಅರುಣಕುಮಾರ್ ಶಿರೂರು, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಭಟ್, ಜೆಸಿಐ ಅಧ್ಯಕ್ಷೆ ಪ್ರಿಯದರ್ಶಿನಿ ಕಮಲೇಶ್, ಭರತನಾಟ್ಯ ಗುರು ವಿದ್ವಾನ್ ಚಂದ್ರಶೇಖರ ನಾವಡ, ಸುರಭಿ ನಿರ್ದೇಶಕರುಗಳಾದ ಕೃಷ್ಣಮೂರ್ತಿ ಉಡುಪ, ಸುಧಾಕರ ಪಿ. ಬೈಂದೂರು, ಗಣಪತಿ ಹೋಬಳಿದಾರ್, ಉಪಾಧ್ಯಕ್ಷ ಆನಂದ ಮದ್ದೋಡಿ ವೇದಿಕೆಯಲ್ಲಿದ್ದರು.
ಸುರಭಿ ಕಲಾಗ್ರಾಮ ನಿರ್ಮಾಣಕ್ಕೆ ನಿವೇಶನವನ್ನು ಯುಸ್ಕೋರ್ಡ್ ಟ್ರಸ್ಟ್ಗೆ ದಾನವಾಗಿ ನೀಡಿದ ಕಮಲಮ್ಮ ತಿಮ್ಮಪ್ಪ ಶೇರುಗಾರ್ ಅವರನ್ನು ಸಚಿವರು ಗೌರವಿಸಿದರು. ಭರತನಾಟ್ಯ ಗುರು ವಿದ್ವಾನ್ ಚಂದ್ರಶೇಖರ ನಾವಡ ಅವರಿಗೆ ಭರತನಾಟ್ಯ ವಿದ್ಯಾರ್ಥಿ ಹಾಗೂ ಪೋಷಕರು ಗೌರವ ಸಲ್ಲಿಸಿದರು.
ಸುರಭಿ ಅಧ್ಯಕ್ಷ ಸತ್ಯನಾ ಕೊಡೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ ವಂದಿಸಿದರು. ಜತೆಕಾರ್ಯದರ್ಶಿ ಅಬ್ದುಲ್ ರವೂಫ್ ಕಾರ್ಯಕ್ರಮ ನಿರೂಪಿಸಿದರು. ಸಚಿವರು ಹಾಗೂ ಹರೇಕಳ ಹಾಜಬ್ಬರನ್ನು ಸುರಭಿ ಮಹಿಳಾ ಚಂಡೆ ತಂಡದ ಮೆರವಣಿಗೆ ಮೂಲಕ ಕರೆತರಲಾಯಿತು. ಬಳಿಕ ನೃತ್ಯ ಸಮ್ಮೋಹನ ಹಾಗೂ ಕೃಷ್ಣ ಪಾರಿಜಾತ ನೃತ್ಯರೂಪಕ ನಡೆಯಿತು.