ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಿಲ್ಲೆಯಲ್ಲಿ ಸುಮಾರು 4,500ಕ್ಕೂ ಅಧಿಕ ಜನರು ಹೊರರಾಜ್ಯದಿಂದ ಆಗಮಿಸಿದ್ದು, ಅವರ ಕ್ವಾರೈಂಟನ್‌ಗಾಗಿ 100 ರಿಂದ 120 ಕೇಂದ್ರಗಳನ್ನು ತೆರೆಯಲಾಗಿದೆ. ಕೆಲವೊಂದು ಕೇಂದ್ರಗಳಲ್ಲಿ ಸಣ್ಣಪುಟ್ಟ ಮೂಲಸೌಕರ್ಯದ ಕೊರತೆ ಕಂಡು ಬಂದಿದ್ದು, ಅದನ್ನು ಸಮರ್ಪಕವಾಗಿ ನಿಭಾಯಿಸುವಂತೆ ಜಿಲ್ಲಾಡಳಿತಕ್ಕೆ ಹಾಗೂ ಸಂಬಂದಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮೀನುಗಾರಿಕಾ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿರುವ ಸರ್ಕಾರಿ ಕ್ವಾರೈಂಟಿನ್ ಕೇಂದ್ರಗಳಿಗೆ ಹಾಗೂ ಶಿರೂರು ಗಡಿಯಲ್ಲಿನ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಕ್ವಾರೈಂಟನ್‌ನಲ್ಲಿರುವವರಿಗೆ ಉಟೋಪಚಾರದ ಸಮಸ್ಯೆಯಾಗದಂತೆ ದೇವಾಲಯಗಳಿಂದ ಭರಿಸಲು ಆದೇಶಿಸಲಾಗಿದೆ ಎಂದರು.
ಹೊರರಾಜ್ಯದಿಂದ ರಾಜ್ಯಕ್ಕೆ ಆಗಮಿಸಿದ ಎಲ್ಲರಿಗೂ 14 ದಿನಗಳ ಸರ್ಕಾರಿ ಕ್ವಾರೈಂಟನ್ ಕಡ್ಡಾಯವಾಗಿದೆ. ಆದರೆ ಚಿಕ್ಕಮಕ್ಕಳು, ಗರ್ಭೀಣಿ ಸ್ತ್ರೀಯರು ಹಾಗೂ ವಯೋವೃದ್ಧರ ಗಂಟಲು ದ್ರವ ಪರೀಕ್ಷೆಯ ಫಲಿತಾಂಶ ನೆಗೆಟಿವ್ ಎಂದು ಕಂಡುಬಂದರೆ ಅವರಿಗೆ ಮಾತ್ರ 14 ದಿನಗಳ ಮುನ್ನವೇ ಸರ್ಕಾರಿ ಕ್ವಾರೈಂಟಿನ್‌ನಿಂದ ಹೋಂಕ್ವಾರೈಂಟಿನ್‌ಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.
ರಾಜ್ಯದಲ್ಲಿರುವ 34 ಸಾವಿರ ದೇವಾಲಯಗಳಲ್ಲಿಯೂ ಕೂಡಾ ನಿತ್ಯ ಪೂಜೆ ನಡೆಯುತ್ತಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾದ ಅನಿವಾರ‍್ಯತೆಯಿರುವುದರಿಂದ ಸದ್ಯ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿಲ್ಲ, ಈ ಬಗ್ಗೆ ಇಲಾಖೆ ಹಾಗೂ ಧಾರ್ಮಿಕ ಪರಿಷತ್ ಸಮಗ್ರ ಚಿಂತನೆ ನಡೆಸುತ್ತಿದ್ದು, ಶೀಘ್ರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಸುರೇಶ ಬಟ್ವಾಡಿ, ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್, ತಾ.ಪಂ. ಸದಸ್ಯ ಮಹೇಂದ್ರ ಪೂಜಾರಿ, ಪುಪ್ಪರಾಜ್ ಶೆಟ್ಟಿ, ದಸ್ತಗೀರ್ ಸಾಹೇಬ್, ಕುಂದಾಪುರ ಸಹಾಯಕ ಕಮೀಷನರ್ ರಾಜು, ಬೈಂದೂರು ತಹಶೀಲ್ದಾರ ಬಿ.ಪಿ. ಪೂಜಾರ್ ಮತ್ತಿತರರು ಉಪಸ್ಥಿತರಿದ್ದರು.