ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೋಮುವಾದಿ ಪಕ್ಷಗಳನ್ನು ದೂರವಿಡಬೇಕು ನೆಲೆಯಲ್ಲಿ ಜಾತ್ಯಾತೀತ ತತ್ವದಡಿ ಇರುವ ಎಲ್ಲರೂ ಒಂದಾಗಬೇಕು ಎಂಬ ಕಾರಣಕ್ಕೆ ಕರ್ನಾಟಕದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲಾಗಿದೆ. ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಇರಬೇಕು ಎಂಬ ಕಾರಣಕ್ಕೆ ದೇಶದ ಎಲ್ಲಾ ಭಾಗಗಳಲ್ಲಿಯೂ ಜಾತ್ಯಾತೀತರು ಒಂದಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯ ಮೀನುಗಾರಿಕಾ ಸಚಿವ ವೆಂಕಟಗಿರಿ ನಾಡಗೌಡ ಹೇಳಿದರು.
ಅವರು ಗುರುವಾರ ಇಲ್ಲಿನ ಕಾಂಗ್ರೆಸ್ ಕಛೇರಿಯಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿ ಕರಾವಳಿಯಲ್ಲಿ ಮೀನುಗಾರರ ಅಭ್ಯುದಯಕ್ಕೆ ರಾಜ್ಯ ಸರಕಾರ ವಿವಿಧ ಹಂತದಲ್ಲಿ ನೆರವಾಗುತ್ತಿದೆ. ೧೪೭ ಕೋಟಿ ರೂ. ಡಿಸೇಲ್ ಸಬ್ಸಿಡಿ ನೀಡಲಾಗುತ್ತಿದೆ. ಕೇಂದ್ರ ಸರಕಾರ ಸೀಮೆಎಣ್ಣೆ ಕಡಿತಗೊಳಿಸಿದ ಬಳಿಕ ರಾಜ್ಯ ಸರಕಾರವೇ ಬಜೆಟ್ನಲ್ಲಿ ಅನುದಾನವನ್ನು ಮೀಸಲಿರಿಸಿ ಸುಮಾರು ೨೦ ಕೋಟಿಯ ತನಕ ಸಬ್ಸಿಡಿ ನೀಡಲಾಗುತ್ತಿದೆ. ಪ್ರತಿ ಮೀನುಗಾರಿಕಾ ಬೋಟಿಗೆ ಪ್ರತಿ ವರ್ಷ ೮-೯ ಕೋಟಿ ರೂ. ಒಟ್ಟು ಸಬ್ಸಿಡಿ ನೀಡಲಾಗುತ್ತಿದೆ. ಮೀನುಗಾರಿಕಾ ಬೋಟುಗಳ ಟ್ರ್ಯಾಕ್ ಮಾಡಲು ಇಸ್ರೋದಿಂದ ತಯಾರಿಸಿದ ಉಪಕರಣವನ್ನು ೫೦ ಪ್ರತಿಶತ ಸಬ್ಸಿಡಿಯಲ್ಲಿ ಅಳವಡಿಸಲು ಬಜೆಟ್ನಲ್ಲಿ ಘೋಷಿಸಲಾಗಿದೆ. ಆದರೆ ಕರಾವಳಿಯ ಬಿಜೆಪಿ ನಾಯಕರುಗಳು ಮೀನುಗಾರರಿಗೆ ನೀಡಿದ ಕೊಡುಗೆ ಏನು ಎಂಬುದನ್ನು ಉತ್ತರಿಸಿಬೇಕಿದೆ. ಇದರ ನಡುವೆ ಮೋದಿ ಅವರು ಎಲ್ಲಾ ಸಬ್ಸಿಡಿಗಳಲ್ಲಿ ತೆಗೆಯಲು ಹೊರಟಿದ್ದಾರೆ. ಇದನ್ನು ಮೀನುಗಾರರು ಅರ್ಥಮಾಡಿಕೊಳ್ಳಬೇಕಿದೆ.
ಮೋದಿ ಭಾಷಣ ಬಿಟ್ಟರೆ ಬೇರೆನೂ ಮಾಡುವುದಿಲ್ಲ:
ಚುನಾವಣೆಗಳು ತಾನೇನು ಮಾಡಿದ್ದೇನೆ ಮುಂದೇನು ಮಾಡಲಿದ್ದೇನೆ ಎಂಬ ಆಧಾರದಲ್ಲಿ ನಡೆಸಲಾಗುತ್ತಿತ್ತು. ಆದರೆ ಬಿಜೆಪಿ ಭಾಷಣಗಳ ಮೂಲಕ ಚುನಾವಣೆ ಮಾಡಲು ಹೊರಟಿದೆ. ಒಂದು ಚುನಾವಣೆ ಛಾಯ್ ಪೇ ಚರ್ಚಾ ಎಂದರು, ಈಗ ಚೌಕಿದಾರ್ ಎನ್ನುತ್ತಿದ್ದಾರೆ. ಅಧಿಕಾರಕ್ಕೆ ಬರುವ ಮೊದಲು ಪ್ರಣಾಳಿಕೆಯಲ್ಲಿ ಇರುವ ಅಂಶಗಳನ್ನು ಮರೆತುಬಿಟ್ಟಿದ್ದಾರೆ ಎಂದರು.
ಸ್ವಾಮಿನಾಥನ್ ವರದಿ ಜಾರಿಗೆ ಬರಲಿಲ್ಲ. ನದಿಗಳ ಜೋಡಣೆ ನೆನೆಗುದಿಗೆ ಬಿದ್ದಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿಸುತ್ತೇನೆ, ಕಪ್ಪು ಹಣ ತಂದು ಬಡವರ ಅಕೌಂಟಿಗೆ ಹಣ ಹಾಕುತ್ತೇವೆ ಎಂದರು. ಆದರೆ ಇದ್ಯಾವುದನ್ನೂ ಮಾಡಿಲ್ಲ. ದೊಡ್ಡ ಉದ್ಯಮಿಗಳಿಗೆ ಸಾಲಮನ್ನ ಮಾಡಿ ಬಡವರು, ರೈತರು, ಯುವಕರುಗಳಿಗೆ ಕೇಂದ್ರ ಸರಕಾರ ಅನ್ಯಾಯ ಮಾಡುತ್ತಿದೆ ಎಂದರು.
ಕೇವಲ ಧಾರ್ಮಿಕ ಭಾವನೆಗಳನ್ನು ಕೆಣಕಿ ಮತ ಪಡೆಯುತ್ತಿದ್ದ ಬಿಜೆಪಿ ಪ್ರತಿಭಾರಿಯೂ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ. ನೀವೇನು ಮಾಡಿದ್ದಿರಿ ಎಂಬ ಪ್ರಶ್ನೆಯನ್ನು ಜನರೇ ಸಂಸದರ ಬಳಿ ಕೇಳುತ್ತಿದ್ದಾರೆ. ಸಂಸದರು ಅದಕ್ಕೆ ಉತ್ತರ ಕೊಡುವ ಬದಲು ನಮಗಾಗಿ ಅಲ್ಲ ಮೋದಿಗಾಗಿ ಓಟು ಹಾಕಿ ಎಂದು ಹೇಳಿತ್ತಿರುವುದು ದುರಂತ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಕರಾವಳಿ ಓಟು ಕೇಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ನೈತಿಕತೆ ಇದೆ. ಕಳೆದು ಚುನಾವಣೆಗೂ ಪೂರ್ವದಲ್ಲಿ ಸಮಾವೇಶದಲ್ಲಿ ಅಮಿತ್ ಶಾ ನೀಡಿದ ಭರವಸೆ ಈವರೆಗೆ ಈಡೆರಿಸಿಲ್ಲ. ಆದರೆ ರಾಜ್ಯ ಸರಕಾರ ಬಜೆಟ್ನಲ್ಲಿ ಅನುದಾನ ಮೀಸಲಿರಿಸಿದೆ. ಕೇಂದ್ರ ಸರಕಾರ ಮೀನುಗಾರಿಕಾ ಬಂದರುಗಳಿಗೆ ನೀಡುತ್ತಿದ್ದ ಅನುದಾನದಲ್ಲಿಯೂ ಕಡಿತಗೊಳಿಸಿದೆ. ಹಾಗಾಗಿ ಈ ಭಾಗದಲ್ಲಿ ಬದಲಾವಣೆ ಕಾಣುವುದು ಖಂಡಿತ. ಮಧು ಬಂಗಾರಪ್ಪನವರ ಗೆಲುವು ನಿಶ್ಚಿತ.
ಸುದ್ದಿಗೋಷ್ಠಿಯಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್ಕುಮಾರ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಎಸ್. ರಾಜು ಪೂಜಾರಿ, ರಘುರಾಮ ಶೆಟ್ಟಿ, ಗೌರಿ ದೇವಾಡಿಗ, ನಾಗರಾಜ ಗಾಣಿಗ ಬಂಕೇಶ್ವರ, ರಿಯಾಜ್ ಅಹಮ್ಮದ್, ಜೆಡಿಎಸ್ ಅಧ್ಯಕ್ಷ ಸಂದೇಶ್ ಭಟ್, ಮುಖಂಡರಾದ ಶ್ರೀಕಾಂತ ಅಡಿಗ, ರವಿ ಶೆಟ್ಟಿ, ಮನ್ಸೂರ್ ಮರವಂತೆ ಮೊದಲಾದವರು ಇದ್ದರು.