ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು,ಜೂ.6: ಬೈಂದೂರು ತಾಲೂಕಿನಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚು ವರದಿಯಾದ ಹಿನ್ನೆಲೆಯಲ್ಲಿ ತಾಲೂಕಿನ ಬಿಜೂರು, ಉಪ್ಪುಂದ, ನಂದನವನ ಹಾಗೂ ಕೆರ್ಗಾಲು ಭಾಗದ ವ್ಯಾಪಾರಸ್ಥರು ನಾಳೆಯಿಂದ ಒಂದು ವಾರಗಳ ಕಾಲ ಸ್ವಯಂಪ್ರೇರಿತವಾಗಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಪರ-ವಿರೋಧ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಹೆಚ್ಚಿನ ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಆ ಪೈಕಿ ಬೈಂದೂರು ತಾಲೂಕಿನಲ್ಲಿಯೇ ಗರಿಷ್ಠ ಪ್ರಕರಣಗಳು ದಾಖಲಾಗಿದೆ. ಇದರಿಂದ ಮುಂಜಾಗೃತಾ ಕ್ರಮವಾಗಿ ಜೂನ್7ರಿಂದ ಜೂನ್15ರ ತನಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ನಿರ್ಧಾರಕ್ಕೆ ಬರಲಾಗಿದೆ. ಆಸ್ಪತ್ರೆ ಹಾಗೂ ಮೆಡಿಕಲ್ ಹೊರತುಪಡಿಸಿ, ಈ ಭಾಗದ ವ್ಯಾಪಾರಸ್ಥರು ಎಂಟು ದಿನಗಳ ಕಾಲ ವ್ಯವಹಾರ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆನ್ನಲಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಅಲ್ಲಲ್ಲಿ ಬ್ಯಾನರ್ ಅಳವಡಿಸಿದ್ದು, ರಿಕ್ಷಾದಲ್ಲಿ ಪ್ರಚಾರವನ್ನು ಮಾಡಲಾಗುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸ್ವಯಂ ಪ್ರೇರಿತ ನಿರ್ಧಾರಕ್ಕೆ ಮಿಶ್ರ ಪ್ರತಿಕ್ರಿಯೆ. ಬ್ಯಾಂಕ್, ಸೊಸೈಟಿ, ಆಸ್ಪತ್ರೆ ಎಂದಿನಂತೆ ತೆರೆದಿರಲಿದೆ:
ಈ ಭಾಗದ ಆಸ್ಪತ್ರೆ,ಮೆಡಿಕಲ್, ಬ್ಯಾಂಕುಗಳು ಹಾಗೂ ಸಹಕಾರಿ ಸಂಸ್ಥೆಗಳು ಎಂದಿನಂತೆ ತೆರೆದಿರಲಿದೆ. ಸ್ವಯಂ ಪ್ರೇರಿತ ಬಂದ್ ಆಗಿರುವುದರಿಂದ ಕೆಲವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದಿಲ್ಲ ಎಂದು ತಿಳಿಸಿದ್ದಾರೆ. ಸರಕಾರದ ಆದೇಶವಿಲ್ಲದೇ ವಾರಗಳ ಕಾಲ ವ್ಯವಹಾರ ಸ್ಥಗಿತಗೊಳಿಸುವುದರಲ್ಲಿ ಅರ್ಥವಿಲ್ಲ. ಈಗಾಗಲೇ ಲಾಕ್‌ಡೌನ್‌ನಿಂದಾಗಿ ತಿಂಗಳುಗಳ ಕಾಲ ವ್ಯವಹಾರವಿಲ್ಲ. ಈಗ ಮತ್ತೆ ಬಂದ್ ಮಾಡುವುದು ಸರಿಯಲ್ಲ ಎಂದು ಒಂದಿಷ್ಟು ಅಂಗಡಿ ಮಾಲಕರು ಅಭಿಪ್ರಾಯ ಪಟ್ಟಿದ್ದಾರೆ.
ಸಂಸ್ಥೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. ಸರಕಾರವೇ ಲಾಕ್‌ಡೌನ್ ಸಡಿಲಿಕರಣ ಮಾಡಿರುವ ಸಂದರ್ಭ ಮತ್ತೆ ಏಕಾಏಕಿಯಾಗಿ ಬಂದ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುವುದಿಲ್ಲ. ಆದರೆ ಸ್ವಯಂಪ್ರೇರಿತವಾಗಿ ಅಂಗಡಿ ಮುಚ್ಚುವವರಿಗೆ ನಮ್ಮ ವಿರೋಧವಿಲ್ಲ ಎಂದು ಸಹಕಾರಿ ಸಂಸ್ಥೆಯೊಂದ ಅಧ್ಯಕ್ಷರು ತಿಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ ಜಿಲ್ಲೆಗೆ ಮಹಾರಾಷ್ಟ್ರ ಇತರೆ ರಾಜ್ಯ ಹಾಗೂ ದುಬೈನಿಂದ 8,500 ಮಂದಿ ಬಂದಿದ್ದು, ಎಲ್ಲರೂ 14ದಿನಗಳ ಕ್ವಾರಂಟೈನ್ ಮುಗಿಸಿಯೇ ಮನೆಗೆ ತೆರಳಿದ್ದರೂ, ಅವರ ವರದಿ ಬರುವುದು ವಿಳಂಬವಾಗಿತ್ತು. ಕಳೆದ ನಾಲ್ಕೈದು ದಿನಗಳಲ್ಲಿ ಬಹುಪಾಲು ವರದಿಗಳು ಕೈಸೇರಿದ್ದು, ಪಾಸಿಟಿವ್ ಬಂದವರನ್ನು ಆಸ್ಪತ್ರೆಗೆ ಕರೆದೊಯ್ಯುವ, ಅಗತ್ಯವಿದ್ದಲ್ಲಿ ಸೀಲ್ ಡೌನ್ ಮಾಡಿ ಕಂಟೈನ್‌ಮೆಂಟ್ ಝೋನ್ ಮಾಡು ಪ್ರಕ್ರಿಯೆ ನಡೆಯುತ್ತಿದೆ. ಬೈಂದೂರು ಠಾಣಾ ವ್ಯಾಪ್ತಿಯಲ್ಲಿ 31 ಕಂಟೈನ್‌ಮೆಂಟ್ ಝೋನ್ ಮಾಡಲಾಗಿದೆ. ಶುಕ್ರವಾರ ಸಂಜೆ ಹೊರರಾಜ್ಯಗಳಿಂದ ಬಂದಿರುವ ಎಲ್ಲರ ವರದಿಗಳು ಉಡುಪಿ ಜಿಲ್ಲಾಡಳಿತದ ಕೈಸೇರಿದೆ. ಶನಿವಾರ ಬಹುಪಾಲು ಕೊರೋನಾ ಪಾಸಿಟಿವ್ ಪ್ರಕರಣಗಳು ಘೋಷಣೆಯಾಗಿದೆ. ಒಂದು ಹಂತದಲ್ಲಿ ಜಿಲ್ಲೆಯಲ್ಲಿ ಏರುತ್ತಿದ್ದ ಪಾಸಿಟಿವ್ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
- ಕೋವಿಡ್ ಪಾಸಿಟಿವ್ ಬರುವ ವ್ಯಕ್ತಿಗಳನ್ನು ಆಸ್ಪತ್ರೆಗೆ ಕರೆದೊಯ್ದು, ಬಳಿಕ ಅವಶ್ಯವಿರುವಲ್ಲಿ ಕಂಟೈನ್‌ಮೆಂಟ್ ಝೋನ್‌ಗಳನ್ನು ಮಾಡಲಾಗುತ್ತಿದೆ. ಜನರು ಹೆದರುವ ಅಗತ್ಯವಿಲ್ಲ. ಅಂಗಡಿ ಮುಂಗಟ್ಟು ಮುಚ್ಚುವುದು ಬಿಡುವುದು ವ್ಯಾಪಾರಸ್ಥರ ವೈಯಕ್ತಿಕ ನಿರ್ಧಾರ. ಸರಕಾರ, ಜಿಲ್ಲಾಡಳಿತದಿಂದ ಈ ಬಗ್ಗೆ ಯಾವುದೇ ನಿರ್ದೇಶನ ಬಂದಿಲ್ಲ. – ಬಸಪ್ಪ ಪಿ. ಪೂಜಾರ್, ತಹಶೀಲ್ದಾರರು, ಬೈಂದೂರು ತಾಲೂಕು
- ಉಪ್ಪುಂದ ಭಾಗದಲ್ಲಿ ಸ್ವಯಂಪ್ರೇರಿತವಾಗಿ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿದರೆ ಯಾವುದೇ ಅಡ್ಡಿಯಿಲ್ಲ. ಆದರೆ ಇನ್ನೊಬ್ಬರಿಗೆ ಮುಚ್ಚುವಂತೆ ಒತ್ತಾಯ ಮಾಡುವಂತಿಲ್ಲ. ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸುವಂತಿಲ್ಲ – ಸಂಗೀತಾ, ಪಿಎಸೈ, ಬೈಂದೂರು ಪೊಲೀಸ್ ಠಾಣೆ
Close down permanently