ಫೆ.26ಕ್ಕೆ ‘ಮಾಡರ್ನ್ ಮಹಾಭಾರತ’ ಸಿನೆಮಾ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಎಸ್.ವಿ.ಫಿಲ್ಮ್ ಪ್ರೋಡಕ್ಷನ್ಸ್‌ವರ ಚೊಚ್ಚಲ ಸಿನಿಮಾ ‘ಮಾಡರ್ನ್ ಮಹಾಭಾರತ’ ಸಿನಿಮಾ ಫೆ.26ರಂದು ಕೋಟೇಶ್ವರದ ಭಾರತ್ ಸಿನಿಮಾಸ್ನಲ್ಲಿ ಬಿಡುಗಡೆಗೊಳ್ಳಲಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೋಟೇಶ್ವರ, ಮಣಿಪಾಲ ಮತ್ತು ಮಂಗಳೂರಿನ ಭಾರತ್ ಸಿನಿಮಾಸ್ನ ಮಲ್ಟಿಪ್ಲೆಕ್ಸ್ ಥಿಯೇಟರ್ಗಳಲ್ಲಿ ಬಿಡುಗಡೆಗೊಳ್ಳಲಿದೆ. ಏಪ್ರಿಲ್ ಮೊದಲ ವಾರದಲ್ಲಿ ರಾಜ್ಯಾದ್ಯಂತ ಬಿಡುಗಡೆಗೊಂಡು ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶ್ರೀಧರ ಉಡುಪ ತಿಳಿಸಿದ್ದಾರೆ.

ಫೆ.23ರಂದು ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾಡರ್ನ್ ಮಹಾಭಾರತ’ ಬಿಡುಗಡೆ ಪೂರ್ವದಲ್ಲೇ ಮೂರು ಅಂತರ್ ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಜಾಲತಾಣಗಳಲ್ಲಿ ಸಿನಿಮಾದ ಟೀಸರ್, ಟ್ರೈಲರ್, ಪ್ರಚಾರ ತಂತ್ರದಿಂದ ಜನ ಸಾಕಷ್ಟು ಕುತೂಹಲಗೊಂಡಿದ್ದಾರೆ ಎಂದರು.

ಮಾಡರ್ನ್ ಮಹಾಭಾರತ ಈ ಹೆಸರನ್ನು ಸಿನಿಮಾ ಹೊಂದಿದ್ದರೂ ಮಹಾಭಾರತಕ್ಕೂ ಇದಕ್ಕೂ ಸಂಬಂಧವಿಲ್ಲ. ಸಾಂಸಾರಿಕ ಗೋಳು, ಜೀವನದ ಜಂಜಾಟಗಳನ್ನು ಮೂರು ಸಂಸಾರಗಳ ವಿಷಯ ಹೊಂದಿರುವ ಈ ಸಿನಿಮಾ ಸೃಜನಶೀಲ ಮನೋರಂಜನಾತ್ಮಕ ಚಿತ್ರ. ಮೂರು ಸಂಸಾರಗಳಲ್ಲೂ ನಡೆಯುವ ಕೌಟುಂಬಿಕ ಕಲಹ, ಹದಿ ಹರೆಯದವರ ಪ್ರೀತಿ – ಪ್ರಣಯ, ಒಳರಾಜಕೀಯ, ಮಕ್ಕಳ ತುಂಟಾಟ, ದೊಡ್ಡವರ ಹೋರಾಟ ಎಲ್ಲವೂ ಇಲ್ಲಿವೆ. ಮೂವರು ಮಕ್ಕಳು ಶಾಲೆಯಲ್ಲಿ ಸ್ನೇಹಿತರೊಂದಿಗೆ ಸೇರಿಕೊಂಡು ಅಧ್ಯಾಪಕರನ್ನು ಗೋಳು ಹೊಯ್ದುಕೊಳ್ಳುವುದು, ಸಿಕ್ಕಿಬೀಳದಂತೆ ನಾನಾ ತಂತ್ರಗಳನ್ನು ಹೆಣೆದು ಸತ್ಯದ ತಲೆಮೇಲೆ ಹೊಡೆದಂತೆ ಸುಳ್ಳು ಪೆÇೀಣಿಸುವುದು, ಒಟ್ಟಿನಲ್ಲಿ ಒಂದು ಒಳ್ಳೆಯ ಸಾಂಸಾರಿಕ ಸಿನಿಮಾದಲ್ಲಿರಬೇಕಾದ ಎಲ್ಲ ಅಂಶಗಳನ್ನು ಹೊಂದಿ ಅಂತಿಮವಾಗಿ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡುವ ಮನರಂಜನಾತ್ಮಕ ಚಿತ್ರವಿದು ಎಂದರು.

‘ಮಾಡರ್ನ್ ಮಹಾಭಾರತ ಸಿನಿಮಾ ಪ್ರತಿಷ್ಠಿತ ಅಂತರ್ ರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ. ಗ್ಲೋಬಲ್ ಇಂಡಿಯಾ ಇಂಟರ್ನ್ಯಾಷನಲ್ ಫೆಸ್ಟಿವಲ್ನಲ್ಲಿ “ಬೆಸ್ಟ್ ಸ್ಟೋರಿ ಅವಾರ್ಡ್”, ಟ್ಯಾಗೋರ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಶಸ್ತಿ, ಎಂಟನೇ ಮುಂಬೈ ಇಂಡಿಯನ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಆಫೀಶಿಯಲ್ ಸೆಲೆಕ್ಷನ್ ಆಗಿದೆ. ಚಿತ್ರದ ಕಲಾ ನಿರ್ದೇಶಕರಾಗಿ ನೀನಾಸಂ ಶಿವಶಂಕರ್, ಛಾಯಾಗ್ರಾಹಕರಾಗಿ ನವೀನ್ ಸೂರ್ಯ, ಸಂಕಲನಕಾರರಾಗಿ ಉಮೇಶ್ ಆರ್. ಬಿ., ಕಾರ್ಯನಿರ್ವಹಿಸಿದ್ದಾರೆ. ಸ್ಯಾ0ಡಲ್ ವುಡ್ ನ ಚಲನಚಿತ್ರ ಹಾಗೂ ಕಿರುತೆರೆಯ ಹಿರಿಯ ನಟ ಮಂಜುನಾಥ್ ಹೆಗಡೆ, ಪ್ರಕಾಶ್ ಹೆಗ್ಗೋಡು, ನಂಜುಂಡ ಮೈಮ್, ತುಳು ಚಿತ್ರನಟಿ ರಂಜಿತಾ ಶೇಟ್, ಡ್ರಾಮಾ ಜೂನಿಯರ್ಸ್ ಖ್ಯಾತಿಯ ಮಾ|ಆದಿತ್ಯ ಮುಂತಾದವರ ತಾರಾಗಣವಿದೆ.

ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರದ ಆದರ್ಶ ಆಸ್ಪತ್ರೆ, ಕುಂಭಾಶಿಯ ವಿಶ್ವ ವಿನಾಯಕ ಆಂಗ್ಲ ಮಾಧ್ಯಮ ಶಾಲೆ, ಈ ಪರಿಸರದ ಸ್ಟಾರ್ ಹೋಟೆಲ್ಗಳಾದ ಹೋಟೆಲ್ ಸಹನಾ, ಯುವ ಮೆರಿಡಿಯನ್ಗಳಲ್ಲಿ, ಉಡುಪಿಯಿಂದ ಬೈಂದೂರುವರೆಗಿನ ಸುಂದರ ಹೊರಾಂಗಣ ಪರಿಸರಗಳಲ್ಲಿ ಶೂಟಿಂಗ್ ನಡೆಸಲಾಗಿತ್ತು.
ಫೆ.28 ರ ಆದಿತ್ಯವಾರ ಮಧ್ಯಾಹ್ನ 3.15 ಕ್ಕೆ ಕೋಟೇಶ್ವರದ ಭಾರತ್ ಸಿನಿಮಾಸ್ನಲ್ಲಿ ಆಹ್ವಾನಿತರಿಗಾಗಿ ಪ್ರೀಮಿಯಂ ಶೋ ಏರ್ಪಡಿಸಲಾಗಿದೆ. ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಉದ್ಘಾಟಿಸುವರು ಎಂದರು.ಸುದ್ಧಿಗೋಷ್ಠಿಯಲ್ಲಿ ನಟರಾದ ಪ್ರಶಾಂತ್ ಕುಮಾರ್ ಶೆಟ್ಟಿ, ನಾಗರಾಜ ಬೀಜಾಡಿ, ಕೆ.ಜಿ ವೈದ್ಯ, ಸುಪ್ರಿತಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

2 × 5 =