ಮೋದಿ ಭ್ರಮೆಯಿಂದ ಜನರನ್ನು ಮರಳು ಮಾಡುತ್ತಿದ್ದಾರೆ: ವೈಎಸ್‌ವಿ ದತ್ತಾ

ಸರ್ಜಿಕಲ್ ಸ್ಟೈಕ್ ಆಗಬೇಕಿರುವುದು ನಿರುದ್ಯೋಗ, ಭ್ರಷ್ಟಾಚಾರದ ವಿರುದ್ಧ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶದ ಸೈನಿಕರ ಬಗ್ಗೆ ಎಲ್ಲಾ ಪಕ್ಷಗಳಿಗೂ ಗೌರವವಿದೆ. ಆದರೆ ಪ್ರಧಾನಿ ಮೋದಿಯವರು ಸೈನಿಕರನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದಾರೆ. ದೇಶದಲ್ಲಿನ ನಿರುದ್ಯೋಗ, ಭೃಷ್ಟಾಚಾರ ಹಾಗೂ ಕಪ್ಪುಹಣದ ವಿರುದ್ಧ ಸರ್ಜಿಕಲ್ ಸ್ಟೈಕ್ ಮಾಡಬೇಕಿದ್ದ ಅವರು ಭ್ರಮೆಯಿಂದ ಜನರನ್ನು ಮರಳು ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ವೈಎಸ್‌ವಿ ದತ್ತಾ ಆರೋಪಿಸಿದರು.

ಶನಿವಾರ ಮಧ್ಯಾಹ್ನ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಈ ಹಿಂದೆ ೧೪ ಬಾರಿ ಸರ್ಜಿಕಲ್ ಸ್ಟೈಕ್ ನಡೆದಿತ್ತು, ಅಂದಿನ ಪ್ರಧಾನಿಗಳು ಯಾರೂ ಇದನ್ನು ತಮ್ಮ ಸಾಧನೆ ಎಂಬಂತೆ ಬಿಂಬಿಸಿಕೊಳ್ಳದೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಜಿಎಸ್‌ಟಿ ರೂಪದಲ್ಲಿ ಹಿಂದಿನ ಕಾಲದ ತಲೆ ಕಂದಾಯವನ್ನು ಜನರಿಂದ ವಸೂಲಿ ಮಾಡುತ್ತಿದ್ದಾರೆ ಎಂದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದು, ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾದರೆ, ಮುಂದೆ ಈ ದೇಶದಲ್ಲಿ ಯಾವುದೇ ಚುನಾವಣೆಗಳು ನಡೆಯುವುದಿಲ್ಲ, ಅವರು ಸರ್ವಾಧಿಕಾರಿಯಂತೆ ವರ್ತಿಸಿ ಜನತಂತ್ರ ವ್ಯವಸ್ಥೆಯ ಬಹುತ್ವಕ್ಕೆ ತೀಲಾಂಜಲಿ ನೀಡಿ, ಹಿಂದಿನ ರಾಜ ಪದ್ಧತಿಯಂತೆ ಚಕ್ರವರ್ತಿಯಾಗಿ ಆಡಳಿತ ನಡೆಸುತ್ತಾರೆ, ಇದು ಅಪಾಯಕಾರಿಯಾಗಲಿದೆ ಎಂದರು.

ಈ ಚುನಾವಣೆಯು ವಾಸ್ತವ ಹಾಗೂ ಭ್ರಮೆ, ಬದುಕು ಹಾಗೂ ಭಾವನೆಯ ನಡುವಿನ ಸಂಘರ್ಷವಾಗಿದೆ. ಮೋದಿಯವರು ವಾಸ್ತವಕತೆಯಿಂದ ದೂರವಾಗಿ ಭ್ರಮಾಲೋಕದಲ್ಲಿ ಜನರನ್ನು ಮರಳು ಮಾಡುವ ಪ್ರಚಾರ ತಂತ್ರ ಅನುಸರಿಸುತ್ತಿದ್ದಾರೆ. ಅವರ ಆಡಳಿತದಲ್ಲಿ ವೈಫಲ್ಯ ಕಂಡಿದ್ದು, ಜನರ ಸಂಕಷ್ಟಕ್ಕೆ ಸ್ಪಂಧಿಸದೆ, ಕೇವಲ ಭಾವನೆಯ ಬೆನ್ನೇರಿ ಭ್ರಮೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಟೀಕಿಸಿದರು.

ಈ ಬಾರಿಯ ಚುನಾವಣೆಯು ಐತಿಹಾಸಿಕವಾಗಿದೆ, ೧೯೭೭ರ ತುರ್ತುಪರಿಸ್ಥಿತಿಯ ಸಂದರ್ಭ ಇಂತಹ ಚುನಾವಣೆ ನಡೆದಿದೆ. ಮೋದಿಯವರಂತಹ ಸರ್ವಾಧಿಕಾರಿ ಶಕ್ತಿಯ ವಿರುದ್ಧ ಹೋರಾಟ ನಡೆಸಿ, ನಮ್ಮ ಸಂವಿಧಾನ ರಕ್ಷಣೆಗಾಗಿ ಹಾಗೂ ಸಾಮಾನ್ಯ ಜನರ ಸಂಕಷ್ಟಕ್ಕೆ ಸ್ಪಂಧಿಸುವ ನಿಟ್ಟಿನಲ್ಲಿ ಜಾತ್ಯತೀತ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಾಗಿದೆ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಮೋದಿ ಸರ್ಕಾರ ಕರಾವಳಿಯ ಮೀನುಗಾರರನ್ನು ಸಂಪೂರ್ಣ ನಿರ್ಲಕ್ಷ್ಯಸಿದ್ದಾರೆ, ಇದಕ್ಕೆ ಕರಾವಳಿಯ ನಾಲ್ವರು ಸಂಸದರು ನೇರ ಹೊಣೆಗಾರರಾಗಿದ್ದು, ಹೀಗಾಗಿ ಈ ಚುನಾವಣೆಯಲ್ಲಿ ಅವರು ಮೋದಿಯ ಹೆಸರಿನಲ್ಲಿ ಮತ ಕೇಳುವಂತಾಗಿದೆ ಎಂದು ದೂರಿದರು.

ಇತ್ತೀಚಿಗೆ ನಡೆದ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೀನುಗಾರರ ಬೋಟ್‌ನ್ನು ಐಎನ್‌ಎಸ್ ಕೊಚ್ಚಿನ ನೌಕೆ ಹಿಟ್ ಆಂಡ್ ರನ್ ಮಾಡಿದೆ ಎಂದು ಸಂಶಯ ವ್ಯಕ್ತವಾಗಿದೆ, ಆದರೆ ಈ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದಿಗೂ ಅವರು ಸ್ಪಷ್ಟನೆ ನೀಡುತ್ತಿಲ್ಲ, ಚುನಾವಣೆಯ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣವನ್ನು ಗೌಪ್ಯವಾಗಿಡಲಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ಮೋದಿಯವರು ಪ್ರತ್ಯೇಕ ಮೀನುಗಾರಿಕಾ ಸಚಿವಾಲಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ, ಆದರೆ ಚಿಕ್ಕಾಸು ಅನುದಾನ ನೀಡದೆ, ಕೇವಲ ಸಚಿವಾಲಯ ಮಾಡಿದರೆ, ಏನು ಪ್ರಯೋಜನ? ಅದು ಊಟಕ್ಕಿಲ್ಲದ ಉಪ್ಪಿನ ಕಾಯಿ ಅಂತಾಗುತ್ತದೆ ಎಂದು ಲೇವಡಿ ಮಾಡಿದ ಅವರು ಕೇಂದ್ರ ಸರ್ಕಾರ ಇಡೀ ದೇಶದ ಮೀನುಗಾರಿಕೆಗಾಗಿ ತನ್ನ ಬಜೆಟ್‌ನಲ್ಲಿ ಕೇವಲ ೯೦೦ ಕೋಟಿ ಮೀಸಲಿಟ್ಟರೆ, ರಾಜ್ಯ ಸರ್ಕಾರ ೪೦೦ ಕೋಟಿ ರೂ. ಅನುದಾನ ನೀಡಿದೆ ಎಂದರು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯವರು ವಿಮಾನ ನಿಲ್ದಾಣ, ೫ ನದಿ ಜೋಡಣೆ, ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಮೊದಲಾದ ಭರವಸೆ ನೀಡಿ ಶಾಸಕರಾಗಿ ಆಯ್ಕೆಯಾದರು, ಆದರೆ ಇದುವರೆಗೆ ಯಾವುದೂ ಕಾರ‍್ಯರೂಪಕ್ಕೆ ಬಂದಿಲ್ಲ, ಕೇವಲ ನನ್ನ ಅವಧಿಯಲ್ಲಾದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ, ಅಶೋಕ್ ಕೊಡವೂರು, ಅಬ್ದುಲ್ ಗಫೂರ್, ಮದನಕುಮಾರ, ಎಸ್. ರಾಜು ಪೂಜಾರಿ, ಪ್ರಕಾಶ್ಚಂದ್ರ ಶೆಟ್ಟಿ, ಜೆಡಿಎಸ್ ಮುಖಂಡರಾದ ಯೋಗೀಶ ಶೆಟ್ಟಿ, ಸಂದೇಶ ಭಟ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

13 + 15 =