ಕುಂದಾಪುರ ತಾಲೂಕಿನಲ್ಲಿ 4 ಮಂಗಗಳ ಸಾವು. ಆತಂಕದಲ್ಲಿ ಜನತೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜ.9: ಇತ್ತಿಚಿಗೆ ಶಿವಮೊಗ್ಗ ಜಿಲ್ಲೆಯ ಸಾಗರ ಪರಿಸರದಲ್ಲಿ ಮಂಗನ ಕಾಯಿಲೆ ಹಬ್ಬಿರುವ ಬೆನ್ನಲ್ಲೇ ಇದೀಗ ಕುಂದಾಪುರ ತಾಲೂಕಿಗೂ ಖಾಯಿಲೆ ವ್ಯಾಪಿಸುವ ಭೀತಿ ಎದುರಾಗಿದೆ. ತಾಲೂಕಿನ ಸಿದ್ಧಾಪುರ, ಹಳ್ಳಿಹೊಳೆ ಹಾಗೂ ಹೊಸಂಗಡಿ ಪರಿಸರದಲ್ಲಿ ಒಟ್ಟು ನಾಲ್ಕು ಮಂಗಗಳ ಶವ ಪತ್ತೆಯಾಗಿದೆ. ಈ ಮಂಗಗಳ ಸ್ಯಾಂಪಲ್‌ಗಳನ್ನು ಶಿವಮೊಗ್ಗದಲ್ಲಿರುವ ವೈರಸ್ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿಗೆ ಸ್ಪಷ್ಟ ಕಾರಣ ತಿಳಿಯಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ಸಿದ್ಧಾಪುರ ಗ್ರಾಮದ ಶಂಕರ ಯಡಿಯಾಳ ಎಂಬವರ ಮನೆಯ ಸಮೀಪ ನಿನ್ನೆ ಒಂದು ಮಂಗನ ಶವ ಪತ್ತೆಯಾಗಿದ್ದರೆ, ಇಂದು ಸಿದ್ಧಾಪುರ, ಹಳ್ಳಿಹೊಳೆ ಹಾಗೂ ಹೊಸಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ತಲಾ ಒಂದೊಂದು ಮಂಗಗಳ ಶವ ಪತ್ತೆಯಾಗಿದೆ ಎಂದು ಅವರು ವಿವರಿಸಿದರು. ಶಿವಮೊಗ್ಗದಲ್ಲಿರುವ ವಿಡಿಎಲ್ (ವೈರಸ್ ಪರೀಕ್ಷಾ ಪ್ರಯೋಗಾಲಯ)ನಿಂದ ವರದಿ ಬಂದ ಬಳಿಕ ಅವುಗಳ ಸಾವಿನ ನಿಜವಾದ ಕಾರಣಗಳನ್ನು ತಿಳಿಯಬಹುದಾಗಿದೆ ಎಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸಿದ್ಧಾಪುರ, ಹಳ್ಳಿಹೊಳೆ ಹಾಗೂ ಹೊಸಂಗಡಿ ಪರಿಸರದಲ್ಲಿ ಮಂಗಗಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ಪರಿಸರದ ಜನರು ಕಾಡುಗಳಿಗೆ ತೆರಳುವುದನ್ನು ನಿಯಂತ್ರಿಸಬೇಕು. ಅನಗತ್ಯವಾಗಿ ಯಾರೂ ಕಾಡು ಪ್ರದೇಶಗಳಿಗೆ ಹೋಗಬೇಡಿ. ಅನಿವಾರ್ಯವಾದರೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಹೋಗಿ. ಸಾಕು ಪ್ರಾಣಿಗಳನ್ನು ಕಾಡಿನತ್ತ ಬಿಡಬೇಡಿ ಎಂದವರು ಜನರಲ್ಲಿ ಮನವಿ ಮಾಡಿದರು. ಇದಕ್ಕಾಗಿ ಪರಿಸರದಲ್ಲಿ ಕರಪತ್ರಗಳನ್ನು ಹಂಚಲಾಗುತ್ತಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ, ಬೈಂದೂರು ಹಾಗೂ ಕಾರ್ಕಳಗಳ ಪಶ್ಚಿಮ ಘಟ್ಟಗಳ ತಪ್ಪಲು ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರುಗಳ ತುರ್ತು ಸಭೆಯನ್ನು ಕರೆಯಲಾಗಿದೆ. ಅವರಿಗೆ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ವಿವರಿಸಲಾಗುವುದು ಎಂದ ಡಾ.ರೋಹಿಣಿ, ಜ್ವರ ಬಂದರೆ ಕಡೆಗಣಿಸದೇ ತಕ್ಷಣ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

18 − 8 =