ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಬೈಂದೂರು ಕ್ಷೇತ್ರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದ್ದು ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ನಿಯಂತ್ರಣಕ್ಕೆ ತರಲು ಶ್ರಮಿಸಬೇಕಿದೆ. ಒಂದೊಂದು ಜೀವವು ಮುಖ್ಯವಾಗಿದ್ದು, ಕೋವಿಡ್‌ನಿಂದ ಜನ ಸಾಯುವುದನ್ನು ತಪ್ಪಿಸಬೇಕಾದರೆ ಲಾಕ್‌ಡೌನ್ ಬಿಗಿಗೊಳಿಸುವುದು ಅನಿವಾರ್ಯ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರು ಹೇಳಿದರು.
ಅವರು ಕೊಲ್ಲೂರಿನಲ್ಲಿ ಸೋಮವಾರ ನಡೆದ ಕೋವಿಡ್ ನಿಯಂತ್ರಣಕ್ಕಾಗಿ ಕರೆಯಲಾಗಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ ಮುಂದಿನ ಎರಡು ವಾರದಲ್ಲಿ ದೇಶದಾದ್ಯಂತ ಕೊರೊನಾ ಕಂಟ್ರೋಲ್ ಆಗುವ ಸಾಧ್ಯತೆಯಿದೆ. ಕೋವಿಡ್ ಎರಡನೆ ಅಲೆ ತೀವೃಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅನಿವಾರ‍್ಯವಾಗಿ ಲಾಕ್‌ಡೌನ್ ಘೋಷಿಸಲಾಗಿದ್ದು, ಜನ ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಲಾಕ್‌ಡೌನ್ ಸಂದರ್ಭದಲ್ಲಿ ಅನಗತ್ಯ ಸಂಚಾರಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ ಅವರು ಅನಗತ್ಯವಾಗಿ ಸಂಚರಿಸುತ್ತಿರುವ ವ್ಯಕ್ತಿಗಳ ವಾಹನಗಳನ್ನು ವಶಪಡಿಸಿಕೊಂಡು ಲಾಕ್‌ಡೌನ್ ಬಳಿಕವೇ ಹಿಂದಿರುಗಿಸಿ, ಈ ಬಗ್ಗೆ ನಾನು, ಶಾಸಕರು ಸೇರಿದಂತೆ ಯಾವುದೇ ಜನಪ್ರತಿನಿಗಳು ಹಸ್ತಕ್ಷೇಪ ಮಾಡುವುದಿಲ್ಲ. ಅಲ್ಲದೇ ವಿವಾಹ ಸಮಾರಂಭಗಳಲ್ಲಿ ಹೆಚ್ಚಿನ ಜನ ಸೇರದಂತೆ ನಿಗಾ ವಹಿಸುವಂತೆ ಸೂಚನೆ ನೀಡಿದರು.
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಂಬ್ಯುಲನ್ಸ್ ಸೌಲಭ್ಯವಿಲ್ಲದ ಕಾರಣ ಜನ ಪರದಾಡುವಂತಾಗಿದೆ, ಹೀಗಾಗಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಶೀಘ್ರ ಖಾಸಗಿ ಅಂಬ್ಯುಲನ್ಸ್ ಸೇವೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಪಡಿತರ ಚೀಟಿಯ ಅಕ್ಕಿ ಖರೀದಿಸಲು ಹತ್ತಾರು ಕಿ.ಮೀ. ಸಂಚರಿಸಬೇಕಾದ ಅಗತ್ಯವಿದೆ, ಆದರೆ ಲಾಕ್‌ಡೌನ್‌ನಿಂದಾಗಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿದ ಹಿನ್ನೆಲೆಯಲ್ಲಿ ಜನರಿಗೆ ತುಂಬಾ ತೊಂದರೆಯಾಗುತ್ತಿದ್ದು, ಲಾಕ್‌ಡೌನ್ ಮುಗಿಯುವ ತನಕ ಪಡಿತರ ಅಕ್ಕಿಗಳನ್ನು ಪ್ರತಿ ಮನೆ ಮನೆಗೆ ಕಳುಹಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಕುಂದಾಪುರ ಸಹಾಯಕ ಕಮೀಷನರ್‌ಗ ಸೂಚನೆ ನೀಡಿದರು.
ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ, ಪರಿಶೀಲನೆ ನಡೆಸಲಾಗಿದೆ, ಬಸ್ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದು, ಸಿಬ್ಬಂದಿಗಳಿಗೆ ವಾಹನದ ವ್ಯವಸ್ಥೆ ಕಲ್ಪಿಸುವಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಿದರು.
ಈ ಸಂದರ್ಭ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ ಕೊಡ್ಗಿ, ಕುಂದಾಪುರ ಸಹಾಯಕ ಕಮೀಷನರ್ ರಾಜು ಕೆ, ಡಿವೈಎಸ್‌ಪಿ ಶ್ರೀಕಾಂತ, ಬೈಂದೂರು ತಹಶೀಲ್ದಾರ ಕಿರಣ ಗೌರಯ್ಯ, ವೈದ್ಯಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.