ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರು ಹಾಗೂ ಮರಳು ಸಮಸ್ಯೆಗೆ ತುರ್ತಾಗಿ ಬಗೆಹರಿಸುವ ಅಗತ್ಯವಿದ್ದು, ಅಧಿಕಾರಿಗಳು ವಿಳಂಬ ಮಾಡದೇ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಎಲ್ಲಾ ಗ್ರಾಮಗಳಿಗೂ ತಕ್ಷಣ ಟ್ಯಾಂಕರ್ ನೀರು ಪೂರೈಕೆ ಹಾಗೂ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳು ದಿಬ್ಬ ತೆರಳುಗೊಳಿಸಲು ಅವಕಾಶ ಮಾಡಕೊಡಲು ಕ್ರಮವಹಿಸುವಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಬುಧವಾರ ಕೊಲ್ಲೂರು ಮೂಕಾಂಬಿಕಾ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಕೋವಿಡ್-೧೯ ಸ್ಥಿತಿಗತಿ ಹಾಗೂ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಶಂಕುಸ್ಥಾಪನೆ ಮಾಡಿದ್ದರು. ಆ ಎಲ್ಲಾ ಕಾಮಗಾರಿಗಳು ವೇಗ ಕಂಡುಕೊಳ್ಳಬೇಕಿದೆ. ಕೋರೋನಾ ಕಾರಣದಿಂದ ಕೆಲವೊಂದು ಕಾಮಗಾರಿಗಳು ವಿಳಂಬ ಕಂಡಿದೆ. ಆದರೆ ಈಗ ಜಿಲ್ಲೆ ಹಸಿರು ವಲಯದಲ್ಲಿರುವುದರಿಂದ ಕಾಮಗಾರಿಗಳು ಶೀಘ್ರ ಆರಂಭಿಸಿ ಎಂದರು.
ಉಡುಪಿ ಜಿಲ್ಲೆಯ ಕೋವಿಡ್-19 ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲಾ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಿರುವುದರಿಂದ ಕೋವಿಡ್ ಪಾಸಿಟಿವ್ ಕೇಸ್‌ಗಳು ದಾಖಲಾಗಿಲ್ಲ. ಇದರಲ್ಲಿ ಆರೋಗ್ಯ, ಪೊಲೀಸ್, ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಶ್ರಮ ದೊಡ್ಡದಿದೆ ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಡಿಯುವ ನೀರು, ಮರಳು ಸಮಸ್ಯೆ ತಕ್ಷಣದ ಆದ್ಯತೆ:
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ತೊಂದರೆ ಇರುವುದು ಅರಿವಿದ್ದು, ಈಗಾಗಲೇ ಸೌಕೂರು ಏತ ನೀರಾವರಿ ಯೋಜನೆ ಹಾಗೂ ಬೈಂದೂರು ಸುಬ್ಬರಾಡಿ ಕಿಂಡಿ ಅಣೆಕಟ್ಟಿಗೆ ಈಗಾಗಲೇ ಅನುಮೋದನೆ ದೊರೆತಿದೆ. ಕೆಲಸ ಶೀಘ್ರ ಆರಂಭಿಸುವಂತೆ ತಿಳಿಸಿದರು. ಈ ನಡುವೆ ತಾತ್ಕಾಲಿಕವಾಗಿ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಕುಡಿಯುವ ನೀರು ಟ್ಯಾಂಕರ್ ಮೂಲಕ ಪೂರೈಸಬೇಕು. ತಾಲೂಕು ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ವಿಳಂಬವಾದರೆ, ಶಾಸಕರೊಂದಿಗೆ ಸಮಾಲೋಚಿಸಿ ತುರ್ತಾಗಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದರು. ಸಿಆರ್‌ಝಡ್ ವ್ಯಾಪ್ತಿಯನ್ನು ಬಿಟ್ಟು ಉಳಿದೆಡೆ ಮರಳು ದೊರೆಯುವ ವ್ಯವಸ್ಥೆ ಶೀಘ್ರ ಮಾಡಬೇಕು. ಗಣಿ ಇಲಾಖೆಯಿಂದ ಈವರೆಗೂ ಮರಳು ದಿಬ್ಬಗಳನ್ನು ಗುರುತಿಸುವ ಕೆಲಸವಾಗಿಲ್ಲ. ಕೂಡಲೇ ಇಲಾಖೆಯ ಅಧಿಕಾರಿಗೂ ಕ್ಷೇತ್ರದಲ್ಲಿಯೇ ಮರಳು ದೊರೆಯುವಂತೆ ತುರ್ತು ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ತಾಲೂಕು ಕೇಂದ್ರದಲ್ಲಿ ಎಲ್ಲಾ ಕಛೇರಿ ಆರಂಭಿಸಿ:
ಬೈಂದೂರು ತಾಲೂಕು ಕೇಂದ್ರವಾಗಿ ಹಲವು ದಿನಗಳಾದರೂ ಸರಕಾರಿ ಕಛೇರಿಗಳು ಇನ್ನೂ ತಾಲೂಕು ಕೇಂದ್ರದಲ್ಲಿ ಕಾರ್ಯಾರಂಭವಾಗಿಲ್ಲ. ಬಾಡಿಕೆ ಕಟ್ಟಡದಲ್ಲಾರೂ ಮೊದಲು ಕಛೇರಿ ಆರಂಭವಾಗಲಿ. ಸಾರ್ವಜನಿಕರು ಒಂದು ರೇಷನ್ ಕಾರ್ಡಿಗಾಗಿ ತಾಲೂಕು ಆದ ಮೇಲು ಕುಂದಾಪುರಕ್ಕೆ ತೆರಳಬೇಕಾ. ಕೂಡಲೇ ಬೈಂದೂರು ತಾಲೂಕು ಕಛೇರಿಗಳು ಆರಂಭವಾಗಲು ಕ್ರಮ ಕೈಗೊಳ್ಳಿ ಎಂದರು.
ಈ ಸಂದರ್ಭ ಮೆಸ್ಕಾಂ, ಪೊಲೀಸ್ ಇಲಾಖೆ, ಕೃಷಿ ಮತ್ತು ತೋಟಗಾರಿಕೆ, ಎಪಿಎಂಸಿ, ಶಿಕ್ಷಣ ಇಲಾಖೆ, ಸಣ್ಣ ನೀರಾವರಿ, ನಿರ್ಮಿತಿ ಕೇಂದ್ರ ಮೊದಲಾದ ಇಲಾಖಾ ಅಧಿಕಾರಿಗಳ ಜೊತೆ ಚರ್ಚಿಸಿದರು.
ನೀರು ಪೂರೈಸದಿದ್ದರೆ ಜನರಿಗೆ ಉತ್ತರಿಸಲು ಕಷ್ಟವಾಗುತ್ತೆ: ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ
ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ಬೈಂದೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮಗಳ ವ್ಯಾಪ್ತಿಯಲ್ಲಿಯೂ ನೀರಿನ ಸಮಸ್ಯೆ ಇದೆ. ಅಧಿಕಾರಿಗಳು ತಾಲೂಕು ಮಟ್ಟದ ಟೆಂಡರ್ ಕಾರಣವೊಡ್ಡಿ ವಿಳಂಬ ಮಾಡುತ್ತಿದ್ದಾರೆ. ಸಾವಿರಾರು ಮಂದಿ ಕೊರೋನಾ ಕಾರಣದಿಂದ ಊರಿಗೆ ಬಂದಿದ್ದಾರೆ. ಈಗ ನೀರಿನ ಅವಶ್ಯಕತೆ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ವಿಳಂಬ ಮಾಡದೇ ಕೂಡಲೇ ಟ್ಯಾಂಕರ್ ನೀರು ಪೂರೈಸಲು ಅಧಿಕಾರಿಗಳು ಕ್ರಮ ಕೈಗೊಳ್ಳಿ ಎಂದರು.
ಸಭೆಯಲ್ಲಿ ರಾಜ್ಯ ಮುಖ್ಯಮಂತ್ರಿಯವರ ಡೆಪ್ಯೂಟಿ ಸೆಕ್ರೆಟರಿ ರವಿ, ಸಿಎಂ ಕಛೇರಿಯ ಪ್ರಸನ್ನ, ಎಡಿಸಿ ಸದಾಶಿವ ಪ್ರಭು, ಎಸಿ ರಾಜು ಕೆ., ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ಶ್ಯಾಮಲಾ ಕುಂದರ್, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಧಿಕಾರಿ ಪ್ರೇಮಾನಂದ, ಮೊದಲಾದವರು ಇದ್ದರು./ಕುಂದಾಪ್ರ ಡಾಟ್ ಕಾಂ ಸುದ್ದಿ/