ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಯದ್ವಾತದ್ವ ಕಂಟೈನರ್ ಚಲಾಯಿಸಿ, 4 ಕಿ.ಮೀ ತನಕ ಬ್ಯಾರಿಕೇಡ್ ಎಳೆದೊಯ್ದು ಕೆಲಹೊತ್ತು ಆತಂಕ ಸೃಷ್ಠಿಸಿದ ಘಟನೆ ತಾಲೂಕಿನ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ.
ಕುರುಚಲು ಹುಲ್ಲು ಸಾಗಿಸುತ್ತಿದ್ದ ಛತ್ತೀಸ್ಗಢ್ ನೋಂದಣಿಯ ಕಂಟೇನರ್ ಚಾಲಕ ಮದ್ಯ ಸೇವಿಸಿ ಕಂಟೇನರ್ ಚಲಾಯಿಸಿದ ಪರಿಣಾಮ ಮುಳ್ಳಿಕಟ್ಟೆ ಜಂಕ್ಷನ್ನಲ್ಲಿ ಇದ್ದ ಬ್ಯಾರಿಕೇಡ್ ಅನ್ನು ಬರೋಬ್ಬರಿ ನಾಲ್ಕು ಕಿ.ಮೀ ದೂರದವರೆಗೂ ಎಳೆದು ತಂದಿದ್ದಾನೆ. ಮುಳ್ಳಿಕಟ್ಟೆಯ ರಿಕ್ಷಾ ಚಾಲಕರು ಕಂಟೇನರ್ ನಿಲ್ಲಿಸುವಂತೆ ಸೂಚನೆ ನೀಡಿದರೂ ಮದ್ಯದ ನಶೆಯಲ್ಲಿದ್ದ ಚಾಲಕ ಒಂದೇ ಸಮನೆ ವಾಹನ ಚಲಾಯಿಸಿ ಅರಾಟೆ ಸೇತುವೆಯ ತಡೆಗೋಡೆಗೂ ಢಿಕ್ಕಿ ಹೊಡೆದಿದ್ದಾನೆ.
ಅನಾಹುತ ತಪ್ಪಿಸಿದ ಮುಳ್ಳಿಕಟ್ಟೆ ರಿಕ್ಷಾ ಚಾಲಕರು:
ಲಾರಿ ಯದ್ವಾ ತದ್ವಾ ಚಲಿಸುವುದನ್ನು ಗಮನಿಸಿದ ಮುಳ್ಳಿಕಟ್ಟೆಯ ರಿಕ್ಷಾ ಚಾಲಕರಾದ ಪ್ರದೀಪ್ ಬಿಲ್ಲವ, ಮಾಣಿ, ಶಶಿ ಮುಂತಾದವರು ಕೂಡಲೇ ಹೆಮ್ಮಾಡಿ ರಿಕ್ಷಾ ಚಾಲಕರಿಗೆ ಮಾಹಿತಿ ನೀಡಿ ಕಂಟೇನರ್ ಅನ್ನು ಓವರ್ ಟೇಕ್ ಮಾಡಿಕೊಂಡು ಬಂದಿದ್ದು, ಹೆಮ್ಮಾಡಿಯಲ್ಲೂ ಕಂಟೇನರ್ ನಿಲ್ಲಿಸಲು ಸೂಚನೆ ನೀಡಿದರೂ ನಿಲ್ಲಿಸದ ಕಾರಣ ಕಂಟೇನರ್ ಮುಂಭಾಗದ ಗ್ಲಾಸ್’ಗೆ ಕಲ್ಲೆಸೆದು ವಾಹನವನ್ನು ತಡೆದಿದ್ದಾರೆ. ಚಾಲಕ ಹಾಗೂ ವಾಹನವನ್ನು ಕುಂದಾಪುರ ಸಂಚಾರಿ ಠಾಣೆಯ ಪೊಲೀಸರಿಗೊಪ್ಪಿಸಿದ್ದಾರೆ. ಸಾರ್ವಜನಿಕರು ಪಾದಾಚಾರಿಗಳು, ವಾಹನ ಸವಾರರಿಗೆ ಏನೂ ತೊಂದರೆಗಳಾಗದಂತೆ ಎಚ್ಚರ ವಹಿಸಿದ ಮುಳ್ಳಿಕಟ್ಟೆ ರಿಕ್ಷಾ ಚಾಲಕರು ಹಾಗೂ ಹೆಮ್ಮಾಡಿ ರಿಕ್ಷಾ ಚಾಲಕರ ಸಮಯಪ್ರಜ್ಞೆಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕಂಟೇನರ್ ಚಾಲಕ ಮದ್ಯದ ಜೊತೆಗೆ ಗಾಂಜಾ ಸೇವಿಸಿರುವ ಶಂಕೆಯಿದ್ದು, ಗಂಗೊಳ್ಳಿ ಠಾಣಾಧಿಕಾರಿ ನಂಜಾ ನಾಯ್ಕ್ ಹಾಗೂ ಸಿಬ್ಬಂದಿಗಳು ತನಿಖೆ ನಡೆಸುತ್ತಿದ್ದಾರೆ.
