ಕುಂದಾಪ್ರ ಡಾಟ್ ಕಾಂ ಸುದ್ದಿ.
ಮುಂಬೈ: ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಮಾಜಿ ಅಧ್ಯಕ್ಷ, ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೂಲ್ಕಿ ಜಯ ಸಿ. ಸುವರ್ಣ (82) ಬುಧವಾರ ಬೆಳಗ್ಗಿನ ಜಾವ ಮುಂಬೈಯಲ್ಲಿ ನಿಧನರಾಗಿದ್ದಾರೆ.
ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿರುವ ಜಯ ಸಿ.ಸುವರ್ಣ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮುಂಬಯಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ, ಅಭಿವೃದ್ಧಿಯ ರೂವಾರಿಯಾಗಿದ್ದರು. ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರ ನಿಕಟವರ್ತಿ, ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದಂತಹ ಕೊಡುಗೈದಾನಿ, ಬಿಲ್ಲವ ಭವನ ಮುಂಬಯಿ ಮತ್ತು ಮಹಾಮಂಡಲ ಭವನ ಮುಲ್ಕಿ ಇದರ ನಿರ್ಮಾತೃ ಆಗಿದ್ದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಪಾರ ಭಕ್ತರಾಗಿರುವ ಇವರು ಕುದ್ರೋಳಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ರಮ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಮುಂಚೂಣಿಯಲ್ಲಿದ್ದು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಇಂದು (ಅ.21) ಮಧ್ಯಾಹ್ನ 3 ಗಂಟೆಗೆ ಮುಂಬೈಯಲ್ಲಿ ನಡೆಯಲಿದೆ. ಪತ್ನಿ ಮತ್ತು ನಾಲ್ವರು ಪುತ್ರರನ್ನು ಅಗಲಿದ್ದಾರೆ.