ಮೀನು ಮಾರಾಟ ಮಾಡಿದ್ರೆ ಜೀವನ ಸಾಗುತ್ತೆ. ಮತ ಮಾರಾಟ ಮಾರಿಕೊಂಡ್ರೆ ಎಷ್ಟ್ ದಿನ ಬರುತ್ತೆ!

ಕುಂದಾಪ್ರ ಡಾಟ್ ಕಾಂ ಸುದ್ದಿ. 
ದಿ ಕನ್ಸರ‍್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ (ನಮ್ಮಭೂಮಿ) ಹಾಗೂ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮಲ್ಪೆ ಬಂದರಿನಲ್ಲಿ ಮೀನುಗಾರರೊಂದಿಗೆ ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಮತದಾರರ ಸ್ವಾಭಿಮಾನಿ ಆಂದೋಲನ ನಡೆಯಿತು.

ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ, ನನ್ನ ಮತ – ನನ್ನ ಹಕ್ಕು ಮುಂತಾದ ಸ್ಟಿಕ್ಕರ್‌ಗಳನ್ನು, ಬ್ಯಾಡ್ಜ್‌ಗಳನ್ನು ಹಾಗೂ ಮತದಾನದ ಮಹತ್ವವನ್ನು ಸಾರುವ ಪೋಸ್ಟರ್‌ಗಳೊಂದಿಗೆ ಮೀನುಗಾರರನ್ನು ಭೇಟಿಯಾಗಿ ಅವರೊಂದಿಗೆ ಮತದಾನದ ಪಾವಿತ್ರ್ಯತೆ, ಅದರ ಮಹತ್ವ ಹಾಗೂ ಮತದಾನ ಹೇಗಿರಬೇಕು ಎನ್ನುವ ವಿಷಯದ ಕುರಿತು ಮಾತುಕತೆ ನಡೆಸಿದರು. ಸುಮಾರು 400ಕ್ಕೂ ಹೆಚ್ಚು ಮೀನುಗಾರರು ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಎನ್ನುವ ಬ್ಯಾಡ್ಜ್‌ಗಳನ್ನು ಪಡೆದು ಹೆಮ್ಮೆಯಿಂದ ಧರಿಸಿ, ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ ಎಂದರು.

ನಮ್ಮ ವಾಹನ ಬೇರೆ ಬೇರೆ ಕಡೆ ಹೋಗುತ್ತಿರುತ್ತದೆ, ಉಳಿದವರಿಗೂ ಇದರ ಬಗ್ಗೆ ಮಾಹಿತಿ ಹಂಚುತ್ತೇವೆ ಎಂದು 100ಕ್ಕೂ ಹೆಚ್ಚು ವಾಹನದ ಮಾಲೀಕರು, ಚಾಲಕರು ಸ್ಟಿಕ್ಕರ್‌ಗಳನ್ನು ಸಂತೋಷದಿಂದ ಕೇಳಿ ಪಡೆದು ತಮ್ಮ ವಾಹನಗಳಿಗೆ ಅಂಟಿಸಿಕೊಂಡರು. ಮೀನು ವ್ಯಾಪಾರದ ಭರಾಟೆಯಲ್ಲಿಯೂ ಸಹ ವ್ಯಾಪಾರಸ್ಥರು, ಕೆಲಸಗಾರರು ಅಭಿಯಾನದ ಪೋಸ್ಟರ್, ಬ್ಯಾನರ್, ಪ್ಲಕಾರ್ಡ್‌ಗಳನ್ನು ಕುತೂಹಲದಿಂದ ಕಣ್ಣರಳಿಸಿ ನೋಡಿ, ಹೋ.. ಹೀಗೂ ಉಂಟೆ.. ಎನ್ನುತ್ತಾ ಸಾಗುತ್ತಿದ್ದರು.

ಮೀನು ಮಾರುವ ಮಹಿಳೆಯರು, ನಾವು ಇಲ್ಲಿಯವೆರೆಗೂ ಹಣ ಪಡೆದು ವೋಟ್ ಮಾಡಿಲ್ಲ, ಒಮ್ಮೆಯೂ ಮತದಾನವನ್ನು ತಪ್ಪಿಸಿಕೊಂಡಿಲ್ಲ, ಈ ಬಾರಿಯೂ ಏನೇ ಕೆಲಸವಿದ್ದರೂ ಸಹ ವೋಟ್ ಮಾಡುತ್ತೇವೆ, ಬ್ಯಾಡ್ಜ್‌ಗಳನ್ನು ಪಡೆದು ಧರಿಸಿಕೊಂಡು ಎಂದಿನಂತೆ ತಮ್ಮ ಕೆಲಸದಲ್ಲಿ ಮಗ್ನರಾದರು.

ಮತದಾರರ ಹೇಳಿಕೆಗಳು:

೧. ಬಂದರಲ್ಲಿ ಎಲ್ಲವೂ ಮಾರಾಟಕ್ಕಿದೆ, ಇದ್ಯಾವುದು.., ಮಾರಾಟಕ್ಕ್ಕೆ ಇಲ್ಲದಿರುವುದು?!!

೨. ಮತ ಮಾರಾಟ ಮಾಡುದ್ ಹೇಗ್ ಮಾರಾಯ್ರೆ..?

೩. ವೋಟ್ ಮಾರಾಟ ಮಾಡ್ಲಿಕೆ ಅವ್ರೇನು ಕೋಟಿ ರೂಪಾಯ್ ಕೋಡ್ತಾರ..? ನಮ್ಮ ಜೀವನಕ್ಕೆ ಸಾಕಾಗುವಷ್ಟು.

೪. ಒಂದಿನ ಬಂದು ಐನೂರ್ ರೂಪಾಯ್ ಕೊಡ್ತಾರೆ, ನಂತರ ಅವರು ಬರೋದು ಇನ್ನು ಐದು ವರ್ಷದ ನಂತರವೇ, ಅಲ್ಲಿವರೆಗೆ ನಾವ್ ಮೀನ್ ವ್ಯಾಪಾರವೇ ಮಾಡ್ಬೇಕಲ್ಲ.

೫. ನಮ್ಮ ಮಕ್ಕಳು ಮೊಮ್ಮಕ್ಕಳಿಗೆ ದೇಶ ಉಳಿಸಬೇಕಂದ್ರೆ ನಾನು ಪ್ರಜ್ಞಾವಂತರಾಗಿ ಮತದಾನ ಮಾಡಬೇಕು.

೬. ದುಡ್ಡು ಖರ್ಚ್ ಮಾಡಿ ಎಲೆಕ್ಷನ್‌ಗೆ ನಿಂತ್ಕೊಳೋದು ಅವರ ಆಸ್ತಿನ ಡಬ್ಬಲ್ ಮಾಡೊಕೆ, ಯಾರು ದುಡ್ಡು ಖರ್ಚ ಮಾಡದೆ ಎಲೆಕ್ಷನ್‌ಗೆ ನಿಂತುಕೊಳ್ಳುತ್ತಾರೋ ಅವರಿಗೆ ನಾವು ವೋಟ್ ಮಾಡಬೇಕು, ಆಗ ಅವರು ಜನರಿಗೆ ಕೆಲಸ ಮಾಡುತಾರೆ.

೭. ನಮ್ಮ ಮತ ನಮ್ಮ ಹೆಮ್ಮೆ ನಿಜ, ಆದರೆ ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ ಎನ್ನೂ ಹೆಚ್ಚು ಅರ್ಥಪೂರ್ಣಹಾಗೂ ಮನಸ್ಸಿಗೆ ನಾಟುವಂತಾದ್ದು. -ನಮ್ಮ ಮತ ನಮ್ಮ ಹೆಮ್ಮೆ ಹಾಗೂ ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ – ಸ್ಟಿಕ್ಕರ‍್ಸ್ ನೋಡುತ್ತಾ ಹೇಳಿದ್ದು.

Leave a Reply

Your email address will not be published. Required fields are marked *

two × 3 =