ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಹಡಿಯಿಂದ ಬಿದ್ದು ತನ್ನ ಕಾಲಿನ ಬಲ ಕಳೆದುಕೊಂಡು ಮೂರು ವರ್ಷದಿಂದ ಹಾಸಿಗೆಯಲ್ಲಿಯೇ ಮಲಗಿರುವ ಯುವಕನಿಗೆ ನಮ್ಮ ಕುಂದಾಪುರ ವಾಟ್ಸಪ್ ಗ್ರೂಪಿನ ಸದಸ್ಯರು ಆರ್ಥಿಕ ಸಹಾಯ ಮಾಡಿದ್ದಾರೆ.
ಬಡ ಕುಟುಂಬದ ಗುಡ್ಡಮ್ಮಾಡಿಯ ಸುಬ್ರಹ್ಮಣ್ಯ (22) ಮೂರು ವರ್ಷದಿಂದ ಸ್ಪೈನಲ್ ಕೋರ್ಡ್ ಸಮಸ್ಯೆಯಿಂದ ಬಳಲುತ್ತಿದ್ದು ಕಾಲಿನ ಬಲ ಕಳೆದುಕೊಂಡು ಹಾಸಿಗೆಯಲ್ಲಿಯೇ ಮಲಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರೂ ಈವರೆಗೆ ಗುಣಮುಖರಾಗಿಲ್ಲ. ಚಿಕಿತ್ಸಾ ವೆಚ್ಚ ಭರಿಸಲು ಸಂಕಷ್ಟದಲ್ಲಿರುವ ಬಗ್ಗೆ ನಮ್ಮ ಕುಂದಾಪುರ ವಾಟ್ಸಪ್ ಗ್ರೂಪಿನಲ್ಲಿ ಸದಸ್ಯರು ಗಮನ ಸೆಳೆದಾಗ ನಾಲ್ಕೈದು ದಿನದಲ್ಲಿ ಗ್ರೂಪಿನ ಒಂದಿಷ್ಟು ಸದಸ್ಯರು ಒಟ್ಟು 19,000ರೂ ಹಣ ಸಂಗ್ರಹಿಸಿದ್ದಾರೆ. ಯುವಕನ ಮನೆಗೆ ತೆರಳಿದ ಗ್ರೂಪಿನ ಅಡ್ಮಿನ್ ಸಂತೋಷ್ ಖಾರ್ವಿ, ಸದಸ್ಯರುಗಳಾದ ಹುಸೈನ್ ಹೈಕಾಡಿ, ಸುಭಾಷ್ ಗುಡ್ಡಮ್ಮಾಡಿ, ಪ್ರವೀಣ್, ವಿಜಯ ಮೊದಲಾದವರು ಹಣವನ್ನು ಯುವಕನ ತಾಯಿಗೆ ಹಸ್ತಾಂತರಿಸಿದರು.
ಈ ಹಿಂದೆಯೂ ನಮ್ಮ ಕುಂದಾಪುರ ಗ್ರೂಪಿನ ಸದಸ್ಯರು ಶಿರೂರಿನ ರತ್ನಾ ಕೊಠಾರಿ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡಿದ್ದರು. ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುವವರು ಮೊಸಳೆ ಕಣ್ಣೀರು ಸುರುಸುವುದೇ ಜಾಸ್ತಿ ಎನ್ನುವ ಕಾಲಘಟ್ಟದಲ್ಲಿ ಮಾನವೀಯತೆಗೆ ಮಿಡಿಯುವ ಈ ಯುವಕರ ಮಾದರಿ ಕಾರ್ಯ ಶ್ಲಾಘನಾರ್ಯವಾದುದು./ಕುಂದಾಪ್ರ ಡಾಟ್ ಕಾಂ ಸುದ್ದಿ/