ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಜಿಲ್ಲೆಯ ಅಲ್ಬಾಡಿ-ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಮಂಡಿಸಿದ ‘G.S.K (GAS SAVING KIT)’ ಎಂಬ ನೂತನ ಆವಿಷ್ಕಾರದ ಸಾಧನವು ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸುವ ರಾಷ್ಟ್ರಮಟ್ಟದ ‘CSIR INNOVATION AWARD FOR SCHOOL CHILDREN 2021’ ಸ್ಪರ್ಧೆಗೆ ಆಯ್ಕೆಯಾಗಿ, ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಲ್ಲಿನ 10ನೇ ತರಗತಿಯಲ್ಲಿ ಒದುತ್ತಿರುವ ಅನುಷಾ ಹಾಗೂ ರಕ್ಷಿತ ನಾಯ್ಕ ಇಬ್ಬರು ವಿದ್ಯಾರ್ಥಿನಿಯರು ಈ ಸಾಧನೆ ಮಾಡಿದ್ದಾರೆ.
ಕೇವಲ ಕಡಿಮೆ ಬೆಲೆಯಲ್ಲಿ ತಯಾರಿಸಲಾದ ‘G.S.K’ (GAS SAVING KIT) ಉಪಕರಣವನ್ನು, ಗ್ಯಾಸ್ ಸ್ಟೌಗೆ ಅಳವಡಿಸಿದರೆ, ಒಲೆಯ ಮೇಲೆ ಅಡುಗೆ ಆಗುತ್ತಿರುವಾಗಲೇ, ಇಡೀ ಕುಟುಂಬಕ್ಕೆ ಬೇಕಾಗುವಷ್ಟು ಸ್ನಾನದ ಬಿಸಿ ನೀರು ದೊರಕುತ್ತದೆ. ಪ್ರಪಂಚದಾದ್ಯಂತ ಇದನ್ನು ಎಲ್ಲಾ ಮನೆ, ಹೋಟೆಲ್‌ಗಳಲ್ಲಿ ಬಳಸಿದರೆ, ದಿವೊಂದಕ್ಕೆ ಲಕ್ಷಗಟ್ಟಲೆ ಟನ್ ಎಲ್.ಪಿ.ಜಿ. ಉಳಿತಾಯವಾಗುತ್ತದೆ ಎಂಬುದನ್ನು ಈ ಇಬ್ಬರು ವಿದ್ಯಾರ್ಥಿನಿಯರು ತೋರಿಸಿದ್ದಾರೆ. ಈ ಕಿಟ್‌ನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ ಹಾಗೂ ಇದಕ್ಕೆ ಪೇಟೆಂಟ್ ಪಡೆಯಲು ಈಗಾಗಲೇ ತಯಾರಿ ನಡೆಸಲಾಗಿದೆ.
ದೇಶದಿಂದ ಆಯ್ಕೆಯಾಗಿರುವ ಏಕೈಕ ಸರಕಾರಿ ಶಾಲೆ:
ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಸಲ್ಲಿಸಲಾದ ಅರ್ಜಿಗಳಲ್ಲಿ, ಕೊನೆಯ ಹಂತಕ್ಕೆ ಆಯ್ಕೆಯಾದ ಕೇವಲ 14 ಶಾಲೆಗಳಲ್ಲಿ ಈ ವರ್ಷ ವಿಜೇತರಾದ ಶಾಲೆಗಳಲ್ಲಿ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ದೇಶದ ಎಕೈಕ ಶಾಲೆಯಾಗಿದೆ. ಜೊತೆಗೆ ಕರ್ನಾಟಕದಿಂದ ಆಯ್ಕೆಯಾಗಿರುವ ಏಕೈಕ ಶಾಲೆ ಎನ್ನುವುದು ಗಮರ್ನಾಹ ಸಂಗತಿ.
ಹಳ್ಳಿ ಮಕ್ಕಳ ವಿಶೇಷ ಸಾಧನೆ:
ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಹದಿನಾಲ್ಕು ಶಾಲೆಯ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿಯನ್ನು ನೀಡಲಿದ್ದಾರೆ. ಕೋವಿಡ್ ಹಿನ್ನಲೆಯಲ್ಲಿ ಸೆಪ್ಟೆಂಬರ್ 26ರಂದು ನಡೆಯಬೇಕಾಗಿದ್ದ ಈ ಕಾರ್ಯಕ್ರವನ್ನು(ಅಥವಾ ಕೋವಿಡ್‌ನಿಂದ ಕಾರ್ಯಕ್ರಮ ನಡೆಸಲು ಸಾಧ್ಯವಾಗದಿದ್ದಲ್ಲಿ ವೀಡಿಯೋ ಕಾನ್ಪರೆನ್ಸ್ ಮಾಡುವುದಾದಲ್ಲಿ) ಮುಂದೆ ತಿಳಿಸಲಾಗುವುದು ಎಂದು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಈ ಸಾಧನೆಗೆ ಶಾಲೆಯ ಇಡೀ ಶಿಕ್ಷಕ ವೃಂದವೇ ಭಾಗಿ:
ಶಾಲೆಯ ವಿಜ್ಞಾನ ಶಿಕ್ಷಕಿ ವೈಶಾಲಿ ರಾವ್ ಅವರ ಮಾರ್ಗದರ್ಶನದಲ್ಲಿ G.S.K ಕಿಟ್‌ನ್ನು ಸಿದ್ಧಪಡಿಸಲಾಗಿತ್ತು. ಮುಖ್ಯಶಿಕ್ಷಕರಾದ ಶೇಖರ್ ಶೆಟ್ಟಿಗಾರ್ ಇವರ ನೇತೃತ್ವದಲ್ಲಿ ಕಿಟ್ನ ಅಗತ್ಯ ವಸ್ತುಗಳ ಆಯ್ಕೆ ಹಾಗೂ ಸಂಗ್ರಹವನ್ನು ಆಂಗ್ಲ ಶಿಕ್ಷಕರಾದ ಶ್ರೀಕಾಂತ್ ನಾಯಕ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರೇಮನಾಥ್ ತೋಳಾರ್ ಅವರೂ, ಸಾಹಿತ್ಯ ರಚನೆಯಲ್ಲಿ ಹಿಂದಿ ಶಿಕ್ಷಕರಾದ ಉದಯ್ ಶೆಟ್ಟಿ, ಕನ್ನಡ ಶಿಕ್ಷಕಿಯಾದ ಮಾಲತಿ, ಸಮಾಜವಿಜ್ಞಾನ ಶಿಕ್ಷಕಿಯಾದ ಮಾಲಿನಿ ಕೆ.ಆರ್, ಬೋಧಕೇತರ ಸಿಬ್ಬಂದಿಗಳಾದ ಕುಮಾರಿ ಜ್ಯೋತ್ಸ್ನಾ ಉಪಕರಣದ ವೈಜ್ಞಾನಿಕ ಆಯಾಮವನ್ನು ಗಣಿತ ಶಿಕ್ಷಕರಾದ ರಮೇಶ್ ಹಾಗೂ ಸುಮಲತಾ ಜಿ.ಎಸ್.ಕೆ. ಕಿಟ್ನ ವಿನ್ಯಾಸ ಹಾಗೂ ವೆಲ್ಡಿಂಗ್ ಕಾರ್ಯವನ್ನು ಸಮಾಜವಿಜ್ಞಾನ ಶಿಕ್ಷಕರಾದ ಸುರೇಶ್ ಮರಕಾಲ ವಹಿಸಿಕೊಂಡಿದ್ದರು ಈ ಕಾರ್ಯದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಮಾತ್ರವಲ್ಲದೆ ಬೋಧಕೇತರ ಸಿಬ್ಬಂದಿಯವರೂ ಕೂಡಾ ತಮ್ಮ ಕಾರ್ಯಗಳನ್ನು ಹಂಚಿಕೊಂಡು ತೊಡಗಿಸಿಕೊಂಡಿದ್ದಾರೆಊರಿನ ಅಭಿಮಾನದ ಆರು ದಶಕಗಳ ಶಾಲೆ ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆ, ಕಳೆದ ಆರು ದಶಕಗಳಿಂದ ಇಲ್ಲಿನ ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ರೂಪಿಸಿದ ವಿದ್ಯಾದೇಗುಲವಾಗಿದೆ. ಈ ವರ್ಷದ ಪ್ರಧಾನ ಮಂತ್ರಿಯವರ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮಕ್ಕಾಗಿ ರಚಿಸಿದ್ದ ಪ್ರೋಮೋ ವೀಡಿಯೋ ವೀಡಿಯೋ ಕೇಂದ್ತ ಸರಕಾರದಿಂದ ರಾಷ್ಟ್ರಾದ್ಯಂತ ಪ್ರಸಾರವಾಗಿ, ಶಿಕ್ಷಣಾಭಿಮಾನಿಗಳ ಅಪಾರ ಪ್ರಶಂಸೆಗೆ ಪಾತ್ರವಾಗಿದ್ದು ಮಾತ್ರವಲ್ಲದೆ, ಈ ಕಾರ್ಯಕ್ರಮಕ್ಕೆ ಇದೇ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆಯ್ಕೆಯಾಗಿದ್ದನ್ನು ನೆನೆಯಬಹುದಾಗಿದೆ.
ಚಾರಮಕ್ಕಿ ನಾರಾಯಣ ಶೆಟ್ಟಿ ಟ್ರಸ್ಟ್‌ನಿಂದ ಲಕ್ಷಾಂತರ ರೂ.ಗಳ ಲೇಖನ ಸಾಮಗ್ರಿ ಪೂರೈಕೆ:
ಮೂರನೇ ಬಾರಿ ಶಾಲೆಯು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವುದಕ್ಕೆ, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಶಾಲೆಯ ಸಂಸ್ಥಾಪಕರಾದ ಚಾರಮಕ್ಕಿ ನಾರಾಯಣ ಶೆಟ್ಟಿ ಟ್ರಸ್ಟ್ ಅಪಾರ ಪ್ರಶಂಸೆಯನ್ನು ಮಾಡಿದ್ದಾರೆ. ಜೊತೆಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಲಕ್ಷಾಂತರ ರೂಪಾಯಿಗಳ ಲೇಖನ ಸಾಮಗ್ರಿಗಳು, ನೋಟ್ ಪುಸ್ತಕಗಳು, ಅಟ್ಲಾಸ್, ಮೂರೂ ಭಾಷೆಗಳ ಬೇರೆಬೇರೆ ಶಬ್ದಕೋಶ ಪುಸ್ತಕಗಳು, ಸ್ಕೂಲ್ ಬ್ಯಾಗ್, ಐ.ಡಿ. ಕಾರ್ಡ್, ಟ್ರ್ಯಾಕ್ ಸೂಟ್ ನೀಡಿದ್ದು, ಕೆಲವೇ ದಿನಗಳಲ್ಲಿ ವಿತರಣೆ ನಡೆಯಲಿದೆ. ಮುಖ್ಯವಾಗಿ ಅತ್ಯಂತ ಗ್ರಾಮೀಣ ಪ್ರದೇಶದಿಂದ ಬರುತ್ತಿರುವ ಶಾಲೆಯ ಮಕ್ಕಳಿಗಾಗಿ ಹೊಸ ಶಾಲಾ ಬಸ್ ವ್ಯವಸ್ಥೆಯನ್ನೂ ಮಾಡಿದ್ದು, ಕೆಲವೇ ಸಮಯದಲ್ಲಿ ಬಸ್ ಸೇವೆಯೂ ಆರಂಭವಾಗಲಿದೆ.
ವಿದ್ಯಾರ್ಥಿನಿಯರ ಈ ಸಾಧನೆಗೆ ಗಣ್ಯರಿಂದ ಮೆಚ್ಚುಗೆ:
ವಿದ್ಯಾರ್ಥಿಗಳ ಈ ಸಾಧನೆಯನ್ನು ಜನಪ್ರತಿನಿಧಿಗಳು, ಇಲಾಖಾ ಉನ್ನತ ಅಧಿಕಾರಿಗಳು ಶ್ಲಾಘಿಸಿದ್ದಾರೆ. ದೆಹಲಿಯ MHRD ನಿರ್ದೇಶಕರು, ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಡಯಟ್ ಪ್ರಾಂಶುಪಾಲರು, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದಾರೆ. ಊರಿನ ಕೀರ್ತಿಯನ್ನು ಮತ್ತೊಮ್ಮೆ ರಾಷ್ಟ್ರಮಟ್ಟಕ್ಕೆ ತಲುಪಿಸಿದ ಮಕ್ಕಳ ಸಾಧನೆಯನ್ನು ಮುಖ್ಯ ಶಿಕ್ಷಕರು, ಅಧ್ಯಾಪಕ ವೃಂದ, ಬೋಧಕೇತರ ಸಿಬ್ಬಂದಿ, ಎಸ್.ಡಿ.ಎಂ.ಸಿ, ಹಳೆವಿದ್ಯಾರ್ಥಿ ಸಂಘ, ಸ್ಥಳೀಯ ಸಂಸ್ಥೆಗಳು ಅಭಿನಂದಿಸಿದ್ದಾರೆ.