ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮ ಪಂಚಾಯಿತಿ ಪಕ್ಷಾತೀತ ವ್ಯವಸ್ಥೆ. ಹಾಗಿದ್ದರೂ ಅದರ ಚುನಾವಣೆಯಲ್ಲಿ ರಾಜಕೀಯ ಕೆಲಸ ಮಾಡುತ್ತದೆ. ಆಯ್ಕೆಯಾದ ಸದಸ್ಯರು ಪಕ್ಷಬೇಧ ಮರೆತು ಒಂದಾಗಿ ಕೆಲಸ ಮಾಡಿದರೆ ಗ್ರಾಮದ ಅಭಿವೃದ್ಧಿ ಸಾಧಿಸಬಹುದು ಎನ್ನುವುದಕ್ಕೆ ನಾವುಂದ ಗ್ರಾಮ ಪಂಚಾಯಿತಿ ಉದಾಹರಣೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ನಾವುಂದ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡ ಮತ್ತು ಸಮುದಾಯ ಭವನವನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಾವುಂದ ಗ್ರಾಮದ ಅಭಿವೃದ್ಧಿಗೆ ಅಗತ್ಯ ಹಣ ನೀಡಲಾಗುವುದು. ಈಗ ಬೇಡಿಕೆ ಇರುವ ಬಾಂಗ್ ರಸ್ತೆ ದುರಸ್ತಿ ಮತ್ತು ಸಾಲುಬುಡ ವೆಂಟೆಡ್ ಡ್ಯಾಮ್ ನಿರ್ಮಾಣಕ್ಕೆ ಶೀಘ್ರ ಅನುದಾನ ಒದಗಿಸಲಾಗುವುದು. ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಬಂದಾಗ ತೊಂದರೆಗೊಳಗಾಗುವ ಜನ ಮತ್ತು ಜಾನುವಾರು ಉಳಿದುಕೊಳ್ಳಲು ಸೂಕ್ತ ಆಶ್ರಯ ನಿರ್ಮಿಸಲಾಗುವುದು ಎಂದರು.
ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಯಾವುದೇ ಕಚೇರಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕಾದರೆ ಸುಸಜ್ಜಿತ ಕಟ್ಟಡ ಅಗತ್ಯ. ಆಗ ಜನರಿಗೆ ಉತ್ತಮ ಸೇವೇ ನೀಡಬಹುದು. ಮುಂದಿನ ದಿನಗಳಲ್ಲಿ ಈಗ ವಿವಿಧ ಇಲಾಖೆಗಳು ತಮ್ಮ ಕೇಂದ್ರದಲ್ಲಿ ನೀಡುತ್ತಿರುವ ಎಲ್ಲ ಸೇವೆಗಳನ್ನು ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯಿತಿಯಲ್ಲಿಯೇ ನೀಡುವ ಅವಕಾಶ ಕಲ್ಪಿಸುವ ಯೋಚನೆ ಸರ್ಕಾರಕ್ಕಿದೆ ಎಂದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಗ್ರಾಮ ಕರಣಿಕರ ಕಚೇರಿಯನ್ನು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ ಮಳೆನೀರು ಕೊಯ್ಲು ಘಟಕವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಎಸ್. ಕುಂದರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಣೇಶ ಎಂ. ಸ್ವಾಗತಿಸಿದರು. ಸಿಬ್ಬಂದಿ ರಾಘವೇಂದ್ರ ಎಸ್. ವಂದಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ನಿರೂಪಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಬಾಬು ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಜಗದೀಶ ಪೂಜಾರಿ, ಮಹೇಂದ್ರ ಪೂಜಾರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ ಬಿ. ಪುತ್ರನ್, ಅಭಿವೃದ್ಧಿ ಅಧಿಕಾರಿ ರಾಜಬಹದ್ದೂರ್ ಬಾಗವಾನ ಇದ್ದರು.
ನೆರವು ನೀಡಿದ ಉದ್ಯಮಿಗಳಾದ ಜಗದೀಶ ಶೆಟ್ಟಿ, ಎನ್. ಕೆ. ಬಿಲ್ಲವ, ಗುತ್ತಿಗೆದಾರ ಎಂ. ಎಸ್. ಶೇಷ, ಸಾಧಕರಾದ ಸುಬ್ಬಯ್ಯ ದೇವಾಡಿಗ, ಜೀವನ್‌ಕುಮಾರ ಶೆಟ್ಟಿ, ವೆಂಕಟೇಶ ಗಾಣಿಗ ಅವರನ್ನು ಸನ್ಮಾನಿಸಲಾಯಿತು.
ಪಂಚಾಯಿತಿ ಅಧ್ಯಕ್ಷ ನರಸಿಂಹ ದೇವಾಡಿಗ ಅವರ ನೇತೃತ್ವದಲ್ಲಿ ಗ್ರಾಮದ ಬಡ ಮಹಿಳೆ ಇಂದಿರಾ ಆಚಾರ್ಯ ಅವರಿಗಾಗಿ ರೂ 7 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮನೆಯನ್ನು ಅವರಿಗೆ ಹಸ್ತಾಂತರಿಸಲಾಯಿತು.