ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಶ್ರೀ ಕ್ಷೇತ್ರ ನೀಲಾವರ ಮಹಿಷಮರ್ಧಿನಿ ದಶಾವತಾರ ಯಕ್ಷಗಾನ ಮಂಡಳಿಯು ನೂತನ ಆಡಳಿತದೊಂದಿಗೆ ತಿರುಗಾಟ ಆರಂಭಿಸಿದ್ದು ಜ.04ರಂದು ಪ್ರಥಮ ದೇವರ ಸೇವೆಯಾಟ ನೀಲಾವರ ಕ್ಷೇತ್ರದಲ್ಲಿ ನಡೆಯಲಿದೆ. ಮೇಳದ ವ್ಯವಸ್ಥಾಪಕರಾಗಿ ಆಜ್ರಿ ಚೋನಮನೆ ಶ್ರೀ ಶನೀಶ್ವರ ದೇವಳದ ಧರ್ಮದರ್ಶಿ ಅಶೋಕ ಶೆಟ್ಟಿಯವರ ಮುಂದಿನ ಐದು ವರ್ಷಗಳ ಕಾಲ ಮೇಳವನ್ನು ಮುನ್ನಡೆಸಲಿದ್ದಾರೆ.
35 ವರ್ಷ ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ್ದ ಸುಬ್ರಹ್ಮಣ್ಯ ಧಾರೇಶ್ವರ ಅವರು ಧಾರೇಶ್ವರ ಯಕ್ಷ ಬಳಗ ಚಾರಿಟೇಬಲ್ ಟ್ರಸ್ಟ್ ಮೂಲಕ ಕಲಾವಿದರ ಸಂಯೋಜನೆಯೊಂದಿಗೆ ಮತ್ತೆ ರಂಗಪ್ರವೇಶ ಮಾಡಲಿದ್ದಾರೆ.(ಕುಂದಾಪ್ರ ಡಾಟ್ ಕಾಂ ಸುದ್ದಿ) ಪೌರಾಣಿಕ ಪ್ರಸಂಗಗಳನ್ನು ಮಾತ್ರ ಆಯ್ದುಕೊಂಡು ಖಾಯಂ ಆಟ, ಕಟ್ಟುಕಟ್ಟಳೆ ಆಟ ಹಾಗೂ ಹರಕೆ ಆಟ ಪ್ರದರ್ಶಿಸಲಿದ್ದು ಪ್ರಸಿದ್ಧ ಕಲಾವಿದರಾದ ಗೋಡೆ ನಾರಾಯಣ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ರಾಜು ಶೆಟ್ಟಿ, ಹಳ್ಳಡಿ ಜಯರಾಮ ಶೆಟ್ಟಿ, ಮುರೂರು ರಮೇಶ ಭಂಡಾರಿ, ಶ್ರೀಧರ ಕಾಸರಗೋಡು, ಕಾರ್ತಿಕ್ ಚಿಟ್ಟಾಣಿ, ಸಂಜಯ್ ಬೆಳೆಯೂರು, ಸುಧೀರ್ ಉಪ್ಪೂರು ಹಾಗೂ ಹವ್ಯಾಸಿಗಳಾದ ವಿಘ್ನೇಶ್ವರ ಹಾಲುಗೋಡಿ, ಗುರು ಹಾಲುಗೋಡಿ, ವೀರೇಂದ್ರ ಅಂಕೋಲ, ಶಶಾಂಕ ಹೆಗ್ಗೋಡು, ಪ್ರಶಾಂತ್ ನಾಯ್ಕ್, ನಾಗರಾಜ ಬೀಜಮಕ್ಕಿ ಮೊದಲಾದವರು ರಂಗದ ಮೇಲಿದ್ದರೇ ಹಿಮ್ಮೇಳದಲ್ಲಿ ಪ್ರಸನ್ನ ಭಟ್, ಶ್ರೀಪಾದ ಭಟ್, ಗಜಾನನ ಭಂಡಾರಿ ಬೋಳ್ಗೆರೆ, ಮುರೂರು ಗಜಾನನ ಹೆಗಡೆ, ನಾಗಭೂಷಣ, ಭಾರ್ಗವ ಹೆಗ್ಗೋಡು, ರಾಮಕೃಷ್ಣ ಮಂದಾರ್ತಿ ಮೊದಲಾದವರು ಇರಲಿದ್ದಾರೆ.
ಈ ಹಿಂದೆ ಶ್ರೀ ಶನೀಶ್ವರ ಮೇಳ ಪ್ರಾರಂಭಿಸಿದ್ದ ಚೋನಮನೆ ಅಶೋಕ ಶೆಟ್ಟಿ ಈಗ ನೀಲಾವರ ಮೇಳದ ಸಾರಥ್ಯ ವಹಿಸಿಕೊಂಡಿದ್ದರೇ, ಮೇಳದ ಸಂಚಾಲಕರಾಗಿ ಗೋಪಾಲ ಶೆಟ್ಟಿ ವಂಡ್ಸೆ ಹಾಗೂ ಸಂತೋಷಕುಮಾರ್ ಶೆಟ್ಟಿ ಹೆಬ್ಬಾಡಿ ಜೊತೆಗಿದ್ದಾರೆ.
– ಜನನಿ