ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ರಾಜ್ಯ ಸರಕಾರ ಕೊರೋನಾ ಸಂಕಷ್ಟದಲ್ಲಿರುವವರಿಗೆ 1,250 ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದೆ. ಸಾಲ ಮರುಪಾವತಿದಾರರಿಗೂ ಬಿಗ್ ರಿಲೀಫ್ ದೊರೆತಿದೆ.
ಸಹಕಾರಿ ಸಂಘಗಳಲ್ಲಿ ಸಾಲ ಪಡೆದ ರೈತರು ಹಾಗೂ ಸ್ವಸಹಾಯ ಸಂಘಗಳಿಗೆ ಸಾಲದ ಕಂತುಗಳ ಮರುಪಾವತಿ ಮಾಡಲು ಮೂರು ತಿಂಗಳ ವಿನಾಯಿತಿ ನೀಡಲಾಗಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಜುಲೈ ಅಂತ್ಯದ ವರೆಗೆ ಸಾಲದ ಕಂತುಗಳನ್ನು ಮರುಪಾವತಿ ಮಾಡುವಂತಿಲ್ಲ. ಇದರಿಂದ 4.25 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ಸುಮಾರು 135 ಕೋಟಿ ರೂ. ವೆಚ್ಚವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದಿರುವ ಸಾಲದ ಕಂತುಗಳು ಇದರಲ್ಲಿ ಅನ್ವಯವಾಗುವುದಿಲ್ಲ. ಅಲ್ಲದೇ ರಾಷ್ಟ್ರೀಕೃತ ಬ್ಯಾಂಕುಗಳ ಸಾಲದ ಕುರಿತು ಆರ್.ಬಿ.ಐ ನಿರ್ಧಾರ ಮಾಡಲಿದೆ ಎಂದು ಸಿಎಂ ತಿಳಿಸಿದ್ದಾರೆ.
1, 250 ಕೋಟಿ ಪ್ಯಾಕೇಜ್ ಘೋಷಣೆ:
1, 250 ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ ಸಿಎಂ ಬಿ. ಎಸ್. ಯಡಿಯೂರಪ್ಪ, ಹೂ ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಗೆ 10 ಸಾವಿರ ಸಹಾಯಧನ, ಹಣ್ಣು, ತರಕಾರಿ ನಷ್ಟಕ್ಕೆ ಪ್ರತಿ ಹೆಕ್ಟೇರ್ 10 ಸಾವಿರ, ಹಣ್ಣು ತರಕಾರಿ ಬೆಳೆಗೆ ಒಂದು ಹೆಕ್ಟೇರ್ ಗೆ ಕನಿಷ್ಠ 10 ಸಾವಿರ ಸಹಾಯಧನ, ಆಟೋ, ಕ್ಯಾಬ್ ಚಾಲಕ 3 ಸಾವಿರ, ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ, ಅಗಸ, ಚಮ್ಮಾರ, ಕಮ್ಮಾರ ಸೇರಿದಂತೆ ಅಸಂಘಟಿತರಿಗೆ 2 ಸಾವಿರ, ರಸ್ತೆಬದಿ ವ್ಯಾಪಾರಿಗಳಿಗೆ 2 ಸಾವಿರ, ರಸ್ತೆ ಬದಿಯ ವ್ಯಾಪಾರಿಗಳಿಗೆ 2 ಸಾವಿರ, ಕಲಾವಿದರು, ಕಲಾ ತಂಡಕ್ಕೆ 3 ಸಾವಿರ ಹಾಗೂ ಸಾಲ ಮರುಪಾವತಿಗೆ 3 ತಿಂಗಳ ಅವಕಾಶ ಇದ್ದು, 3 ತಿಂಗಳ ಬಡ್ಡಿ ಸರ್ಕಾರವೇ ಭರಿಸಲಿದೆ ಎಂದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ 5 ಕೆಜಿ ಅಕ್ಕಿ ನೀಡಲಾಗುವುದು. ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ರೇಷನ್ ಕೊಡಲಾಗುತ್ತದೆ. ಅಲ್ಲದೆ ಮೇ, ಜೂನ್ ರೇಷನ್ ಕೊಡಲಾಗುತ್ತೆ. ಪ್ಯಾಕೇಜ್ ನಲ್ಲಿ ಕಳೆದ ವರ್ಷದಂತೆ ಲೋಪ ಆಗದಂತೆ ಕ್ರಮವಹಿಸಲಾಗುತ್ತೆ. ಲಾಕ್ ಡೌನ್ ವಿಸ್ತರಣೆ ಬಗ್ಗೆ 23 ರಂದು ತೀರ್ಮಾನ ಮಾಡ್ತೀವಿ ಎಂದು ಸಿಎಂ ತಿಳಿಸಿದರು.