ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಾರವಾರದ ಕೈಗಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 20ಕ್ಕೂ ಹೆಚ್ಚು ಯುವಕರಿಗೆ ವಂಚಿಸಿರುವ ಘಟನೆ ನಡೆದಿದ್ದು, ಪ್ರಮುಖ ಆರೋಪಿ ಎನ್ನಲಾಗಿರುವ ರಿತೇಶ್ ಪಟ್ವಾಲ್ ಎಂಬಾತನನ್ನು ಶುಕ್ರವಾರ ಬೈಂದೂರು ಪೊಲೀಸರು ಶೃಂಗೇರಿಯಲ್ಲಿ ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ರಿತೇಶ್ ಎಂಬಾತ ಒಂದಿಷ್ಟು ಯುವಕರನ್ನು ಸಂಪರ್ಕಿಸಿ ಕೈಗಾದಲ್ಲಿ ಉತ್ತಮ ಕೆಲಸ ಕೊಡಿಸುವ ಆಮಿಷವೊಡ್ಡಿದ್ದ. ತಾನು ಕೂಡ ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿಯೇ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತನ್ನ ಗುರುತಿನ ಚೀಟಿ ತೋರಿಸಿ ನಂಬಿಸಿದ್ದಲ್ಲದೇ, ಆಗಾಗ್ಗೆ ಕಾರವಾರ ಹೋಗಿ ಬರುವ ನಾಟಕವಾಡುತ್ತಿದ್ದ. ಸಂಸ್ಥೆಯಲ್ಲಿ ಕಂಪ್ಯೂಟರ್ ಆಧಾರಿತ ಹುದ್ದೆ ಖಾಲಿ ಇರುವುದಾಗಿ ಹೇಳಿಕೊಂಡು, ಉದ್ಯೋಗಾಕಾಂಕ್ಷಿಗಳಿಂದ ರೆಜ್ಯೂಮ್ ಪಡೆದುಕೊಂಡಿದ್ದ. ನಕಲಿ ನೇಮಕಾತಿ ಪತ್ರವನ್ನು ತಯಾರಿಸಿ ಉದ್ಯೋಗಾಕಾಂಕ್ಷಿಗಳಿಂದ ತಲಾ ರೂ.20,000ಕ್ಕೂ ಹೆಚ್ಚು ಹಣ ಪಡೆದಿದ್ದಲ್ಲದೆ ಅವರೆಲ್ಲರನ್ನೂ ಕೈಗಾಕ್ಕೆ ತೆರಳುವಂತೆಯೂ ಸೂಚಿಸಿದ್ದ. ಆದರೆ ಕೈಗಾದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಒಳಕ್ಕೆ ಬಿಡದೆ, ಅವರ ದಾಖಲಾತಿ ಪರಿಶೀಲಿಸಿದ ಬಳಿಕ ತಾವು ನಕಲಿ ದಾಖಲೆಯಿಂದ ಮೋಸ ಹೋಗಿರುವುದು ತಿಳಿದುಬಂದಿದೆ. ಅಷ್ಟರಲ್ಲೇ ಹಣ ಪಡೆದಿದ್ದ ರಿತೀಶ್ ಪರಾರಿಯಾಗಿದ್ದ. ಈ ಬಗ್ಗೆ ಯಳಜಿತ ಸತೀಶ್ ಎಂಬಾತ ದೂರು ನೀಡಿದ್ದು, ಅದರಂತೆ ಬೈಂದೂರು ಪೊಲೀಸರು ಆಪಾದಿತನನ್ನು ಬಂಧಿಸಿದ್ದಾರೆ. ಪೊಲೀಸರು ಆಪಾದಿತನ್ನು ಠಾಣೆಗೆ ಕರೆತರುತ್ತಿದ್ದಂತೆ ಆತನ ತಾಯಿ ಹಾಗೂ ಸಹೋದರಿ ಆತನಿಗೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಯಿಯ ಬಳಿಯೂ ತನಗೆ ಕೈಗಾದಲ್ಲಿ ಕೆಲಸವಾಗಿದೆ. ಅದಕ್ಕೆ 15 ಲಕ್ಷದ ಅವಶ್ಯಕತೆ ಇದೆ ಎಂದು ನಂಬಿಸಿ ಹಣ ಪಡೆದಿದ್ದ ಎನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
50ಕ್ಕೂ ಹೆಚ್ಚು ಜನರಿಗೆ ವಂಚನೆ ಆರೋಪ:
ಆಪಾದಿತ ರಿತೇಶ್ ಉದ್ಯೋಗ ಕೊಡಿಸುವುದಾಗಿ 50ಕ್ಕೂ ಹೆಚ್ಚು ಯುವಕ-ಯುವತಿಯರಿಂದ 18ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿರುವ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದು, ಪೊಲೀಸ್ ವಿಚಾರಣೆಯ ಬಳಿಕವಷ್ಟೇ ಸತ್ಯ ಹೊರಬರಲಿದೆ. ಭಟ್ಕಳ, ಶಿರಾಲಿ, ಬೈಂದೂರು, ಯಡ್ತರೆ, ಯಳಜಿತ, ಕುಂದಾಪುರ, ಶಂಕರನಾರಾಯಣ ಭಾಗದ ಯುವಕ ಯುವತಿಯರು ಉದ್ಯೋಗದ ಆಸೆಗೆ ಈತನಿಗೆ ಹಣ ನೀಡಿ ಮೋಸ ಹೋಗಿದ್ದಾರೆ ಎನ್ನಲಾಗುತ್ತಿದೆ. ರಿತೇಶನ ಜೊತೆಗೆ ಇನ್ನೂ ಕೆಲವರು ಶಾಮೀಲಾಗಿರುವ ಶಂಕೆ ಇದ್ದು, ಮೊಸದ ಜಾಲದಲ್ಲಿ ಭಾಗಿಯಾದವರು ಹಾಗೂ ಪಡೆದುಕೊಂಡಿರುವ ಹಣದ ಬಗ್ಗೆ ತನಿಕೆಯಿಂದ ತಿಳಿದುಬರಬೇಕಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಶೃಂಗೇರಿಯಲ್ಲಿ ಬಂಧನ:
ಉದ್ಯೋಗ ಕೊಡಿಸುವುದಾಗಿ ವಂಚಿಸಿ ಕಾಲ್ಕಿತ್ತಿದ್ದ ರಿತೇಶನ್ನು ಶೃಂಗೇರಿಯಲ್ಲಿ ಬಂಧಿಸಿ ಕರೆತರಲಾಗಿದೆ. ಈತನ ಪೊಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಶೃಂಗೇರಿಯಲ್ಲಿ ಈತನ ಚಲನವಲನ ಗುರುತಿಸಿದ ಸ್ಥಳೀಯರು ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಬೈಂದೂರು ಪೊಲೀಸರು ಆತನನ್ನು ಬಂಧಿಸಿ ಕರೆತಂದು ವಿಚಾರಣೆ ನಡೆಸುತ್ತಿದ್ದು, ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.