ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರ್ಪೋರೇಟ್ ಕಂಪೆನಿಗಳು ದೇಶದ ಕೃಷಿ ಕ್ಷೇತ್ರವನ್ನು ಆಳುತ್ತಿವೆ. ಆಧೂ ಕೃಷಿಯ ಬೀಜ, ಗೊಬ್ಬರ, ನೀರು, ಮಾರುಕಟ್ಟೆ, ಸಾರಿಗೆ ಹೀಗೆ ಎಲ್ಲದರ ಹಿಡಿತ ಸಾಧಿಸಿದ್ದು, ರೈತನ ಶ್ರಮಕ್ಕೆ ತಕ್ಕಂತೆ ಬೆಲೆ ನಿರ್ಧರಿಸುವ ಹಕ್ಕನ್ನೇ ಕಸಿದುಕೊಂಡಿವೆ ಎಂದು ಮ್ಯಾಗ್ಸೇಸೆ ಪುರಸ್ಕೃತ ಪತ್ರಕರ್ತ ಪಿ. ಸಾಯಿನಾಥ್ ಹೇಳಿದರು.
ಅವರು ಕುಂದಾಪುರದ ಕಲಾಮಂದಿರದಲ್ಲಿ ಶುಕ್ರವಾರ ಸಂಜೆ ಸಮುದಾಯ ಕುಂದಾಪುರದ ಆಶ್ರಯದಲ್ಲಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ’ಕಾರ್ಪೋರೇಟ್ ಫಾರ್ಮಿಂಗ್ ಮತ್ತು ಭಾರತದ ಕೃಷಿ ಬಿಕ್ಕಟ್ಟುಗಳು’ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿ ರೈತರಿಗಾಗಿ ಇರಬೇಕಾದ ಕೃಷಿ ವಿಶ್ವವಿದ್ಯಾಲಯಗಳು ಇಂದು ಬಂಡವಾಳ ನೀಡುವ ಕಾರ್ಪೋರೇಟ್ ವಲಯದ ಪರವಾಗಿರುವುದರಿಂದಾಗಿ ವಿಶ್ವವಿದ್ಯಾಲಯಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದರು.
ದೇಶದಲ್ಲಿ ಉದಾರೀಕರಣ ನೀತಿಯ ಬಳಿಕ ರೈತಾಪಿ ವರ್ಗದ ಸ್ಥಿತಿ ದೈನಸಿ ಸ್ಥಿತಿ ಬಂದು ನಿಂತಿದೆ. ರೈತಾಪಿ ವರ್ಗ ಪರಿಸ್ಥಿತಿಯ ಒತ್ತಡದಿಂದಾಗಿ ಪರಾವಿಲಂಭಿಗಳಾಗುತ್ತಿದ್ದಾರೆ. ಬೀಜ, ರಸಗೊಬ್ಬರ, ವಿದ್ಯುತ್, ನೀರು ಸೇರಿದಂತೆ ಕೃಷಿಕರ ಅಗತ್ಯತೆಗಳ ಬೆಲೆ ವರ್ಷದಿಂದ ವರ್ಷಕ್ಕೆ ಗಗನಕ್ಕೆ ಏರುತ್ತಿದೆ. ರೈತರ ಅಸಹಾಯಕತೆಯನ್ನು ಬಂಡವಾಳವನ್ನಾಗಿಸಿಕೊಳ್ಳುವ ಕಾರ್ಪೋರೇಟ್ ವಲಯದ ನಿಯಂತ್ರಣಕ್ಕೆ ಸಂಘಟಿತ ಪ್ರಯತ್ನ ಬೇಕು. ಸರ್ಕಾರ ಪರೋಕ್ಷವಾಗಿ ಬಂಡವಾಳಶಾಹಿಗಳ ಪರವಾಗಿ ನಿಲ್ಲುತ್ತಿದೆ
ಭೂ ಮಾಲಿಕರ ದಬ್ಬಾಳಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನಾವಳಿಗಳು ಮರೆಯಾಗುವ ಮೊದಲೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಖಾಸಗೀಕರಣ ಪ್ರಾಸ್ತಾಪಗಳು ಬರುತ್ತಿದೆ. ಇದರಿಂದಾಗಿ ದೇಶದ ಸಾಮಾನ್ಯ ರೈತ ಹಾಗೂ ಕೃಷಿಕನ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಿಕೊಳ್ಳುವುದು ಕಷ್ಟ. ಗ್ರಾಮೀಣ ಭಾಗದ ರೈತರ ಪರವಾಗಿ ನಿಲ್ಲಬೇಕಾದ ನಬಾರ್ಡ್ ಸಂಸ್ಥೆಯ ಅನುದಾನಗಳು ಕೃಷಿಕರ ಬದಲು ಕೃಷಿ ವ್ಯಾಪಾರಕ್ಕೆ ವಿನಿಯೋಗವಾಗುತ್ತಿರುವ ದೃಷ್ಟಾಂತಗಳು ನಮ್ಮ ಮುಂದಿದೆ. ಸ್ವಾಮಿನಾಥನ್ ಆಯೋಗದ ವರದಿಯ ಅನುಷ್ಠಾನದ ಕುರಿತ ಹೇಳಿಕೆಯಲ್ಲಿ ಅಧಿಕಾರಶಾಹಿಗಳಲ್ಲಿಯೇ ಸ್ವಷ್ಟತೆ ಇಲ್ಲ ಎಂದು ವಿಶ್ಲೇಷಣೆ ಮಾಡಿದ ಅವರು ಬಹು ರಾಷ್ಟ್ರೀಯ ಕಂಪೆನಿಗಳ ಅಮೀಷಕ್ಕೆ ಬಲಿಯಾಗಿ ಬದುಕನ್ನೆ ಕಳೆದುಕೊಳ್ಳುತ್ತಿರುವ ದೇಶದ ಕೃಷಿಕರ ಪರಿಸ್ಥಿತಿಗಳು ಬದಲಾಗಬೇಕು ಎಂದರು.
Video
ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ರಚಿಸಿದ ಪಿ.ಸಾಯಿನಾಥ ಅವರ ಕ್ಯಾರಿಕೇಚರನ್ನು ಸಾಯಿನಾಥ ಅವರಿಗೆ ನೀಡಲಾಯಿತು. ಸಮುದಾಯ ಸಂಘಟನೆಯ ಜಿ. ವಿ. ಕಾರಂತ್, ಬಾಲಕೃಷ್ಣ, ಉದಯ್ ಗಾಂವ್ಕರ್, ಸದಾನಂದ ಬೈಂದೂರು, ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಟ್ರಸ್ಟಿ ರಾಜಾರಾಂ ತಲ್ಲೂರು, ಎಲ್.ಎನ್.ತಲ್ಲೂರ್, ಪತ್ರಕರ್ತ ಎ.ರಾಮಕೃಷ್ಣ ಹೇರ್ಳೆ ಇದ್ದರು. ಸಮುದಾಯ ಕಲಾವಿದರು ರೈತ ಗೀತೆ ಹಾಡಿದರು.