ಕುಂದಾಪುರದ ಕ್ರೀಡಾಪಟು ಗುರುರಾಜ್‌ಗೆ ಪ್ರಧಾನಿ ಮೋದಿಯಿಂದ ಮೆಚ್ಚುಗೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಕುಂದಾಪುರದ ಗುರುರಾಜ ಪೂಜಾರಿ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ವಿಶೇಷ ಗೌರವ ಲಭಿಸಿದೆ.

ಮನ್ ಕೀ ಬಾತ್‌ನಲ್ಲಿ ಉಲ್ಲೇಖಿಸಿದ ಬಳಿಕ ಭೇಟಿಯಾದ ಗುರುರಾಜ್‌ಗೆ ಮೋದಿ ವಿಶೇಷ ಅಭಿನಂದನೆ ಸಲ್ಲಿಸಿದ್ದು, ಈ ಕುರಿತು ಫೋಟೋ ಸಮೇತ ಟ್ವೀಟ್ ಕೂಡ ಮಾಡಿದ್ದಾರೆ. ಮಂಗಳವಾರ ಉಡುಪಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲೂ ಗುರುರಾಜ್ ಸಾಧನೆಯನ್ನು ಕೊಂಡಾಡಿದ್ದಾರೆ.

ದೆಹಲಿಯಲ್ಲಿ ಅಭಿನಂದನೆ:
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಗುರುರಾಜ್ ಸಹಿತ ಭಾರತೀಯ ಕ್ರೀಡಾಪಟುಗಳಿಗೆ ಸೋಮವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅಭಿನಂದನೆ ಸಲ್ಲಿಸಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿದ್ದು, ಈ ಸಂದರ್ಭ ದೇಶದ ಗೌರವ ಹೆಚ್ಚಿಸಿದ ಕ್ರೀಡಾಪಟುಗಳನ್ನು ಅವರು ಮನತುಂಬಿ ಅಭಿನಂದಿಸಿದ್ದಾರೆ. ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಈ ಸಂದರ್ಭ ಉಪಸ್ಥಿತರಿದ್ದರು. ಬಳಿಕ ಗುರುರಾಜ್‌ಗೆ ಹಸ್ತಲಾಘವ ಮಾಡುವ ಪೋಟೋವನ್ನು ಮೋದಿ ಟ್ವೀಟ್ ಮಾಡಿಯೂ ಅಭಿನಂದನೆ ಸಲ್ಲಿಸಿದ್ದಾರೆ.

ಮನ್ ಕೀ ಬಾತ್:
ಭಾನುವಾರ ಪ್ರಸಾರವಾದ ‘ಮನ್ ಕೀ ಬಾತ್’ ಆಕಾಶವಾಣಿ ಕಾರ್ಯಕ್ರಮದಲ್ಲೂ ಪ್ರಧಾನಿ ಮೋದಿಯವರು ಗುರುರಾಜ್ ಸಾಧನೆಯನ್ನು ಬಾಯ್ತುಂಬ ಹೊಗಳಿದ್ದರು. ರೆಕಾರ್ಡ್ ಮಾಡಿದ್ದ ಗುರುರಾಜ್ ಮಾತುಗಳನ್ನೂ ಇದೇ ಸಂದರ್ಭ ಪ್ರಸಾರ ಮಾಡಲಾಗಿತ್ತು. ’ದೇಶಕ್ಕೆ ಮೊದಲ ಪದಕ ತಂದುಕೊಟ್ಟಿರುವುದು ಖುಷಿ ತಂದಿದೆ. ಈ ಸಾಧನೆಯನ್ನು ನನ್ನೂರು ಕುಂದಾಪುರ, ನನ್ನ ರಾಜ್ಯ ಕರ್ನಾಟಕ ಹಾಗೂ ದೇಶಕ್ಕೆ ಸಮರ್ಪಿಸುತ್ತೇನೆ’ ಎಂದು ಗುರುರಾಜ್ ಈ ಸಂದರ್ಭ ಹೇಳಿದ್ದರು.
ಪ್ರಧಾನಿ ಮೋದಿ ಟ್ವೀಟ್:
ದೊಡ್ಡ ಸವಾಲುಗಳನ್ನು ಮೀರಿ ನಿಂತು ಸಾಧನೆಯತ್ತ ಮುನ್ನುಗ್ಗುವ ಕ್ರೀಡಾಪಟುವೊಬ್ಬನ ಜೀವನದ ತುಂಬಾ ಸೂರ್ತಿದಾಯಕ ಸಂಗತಿಗಳಿರುತ್ತವೆ. ಕಾಮನ್‌ವೆಲ್ತ್ ಗೇಮ್ಸ್ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿಪದಕ ಗೆಲ್ಲುವ ಮೂಲಕ ನನ್ನ ಯುವ ಗೆಳೆಯ ಗುರುರಾಜ ಪೂಜಾರಿ ದೊಡ್ಡ ಸಾಧನೆ ಮಾಡಿದ್ದಾರೆ. ಗುರುರಾಜ ನಮ್ಮ ಹೆಮ್ಮೆ.

ಕೇಂದ್ರದಿಂದ 20 ಲಕ್ಷ ರೂ.
ಅಂತಾರಾಷ್ಟ್ರೀಯ ಕ್ರೀಡಾಪಟು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಗುರುರಾಜ್ ಸಾಧನೆಗಾಗಿ ಕೇಂದ್ರ ಕ್ರೀಡಾ ಇಲಾಖೆ 20 ಲಕ್ಷ ರೂ. ಬಹುಮಾನವನ್ನು ಇದೇ ಸಂದರ್ಭ ಹಸ್ತಾಂತರಿಸಲಾಗಿದೆ. ಆದರೆ ರಾಜ್ಯ ಸರ್ಕಾರದಿಂದ ಇದುವರೆಗೆ ಯಾರೂ ಸಂಪರ್ಕಿಸಿಲ್ಲ. ಜಿಲ್ಲಾಮಟ್ಟದ ಅಧಿಕಾರಿಗಳು ಮಾತ್ರ ಸಂಪರ್ಕಿಸಿದ್ದಾರೆ. ಪದಕ ಗೆದ್ದ ಇತರ ರಾಜ್ಯದವರಿಗೆ ಈಗಾಗಲೇ ಬಹುಮಾನ ಲಭಿಸಿದೆ ಎಂದು ಗುರುರಾಜ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

14 − seven =