ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರದಿಂದ ನೀಡುವ ಉಚಿತ ಪಡಿತರ ಅಕ್ಕಿಯನ್ನು ಜನರಿಂದ ಖರೀದಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ಉಡುಪಿ ಡಿಸಿಐಬಿ ಪೊಲೀಸರು ಪತ್ತೆ ಹಚ್ಚಿದ್ದು, ಗುರುವಾರ ಸಂಜೆ ಕೋಟೇಶ್ವರದ ಕಟ್ಕೆರೆ ಸಮೀಪದ ಮೇಪು ಎಂಬಲ್ಲಿ ಅಕ್ರಮ ದಾಸ್ತಾನು ಇರಿಸಲಾಗಿದ್ದ ಗೋದಾಮಿಗೆ ದಾಳಿ ನಡೆಸಿ ಒಟ್ಟು 9 ಮಂದಿ ಆರೋಪಿಗಳು, ವಾಹನ, ಪೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಎರಡು ಗೋದಾಮಿನಲ್ಲಿದ್ದ ಒಟ್ಟು 50 ಟನ್‌ಗೂ ಅಧಿಕ ಪಡಿತರ ಅಕ್ಕಿ, ಸಾಗಾಟಕ್ಕೆ ಬಳಸುವ ಎರಡು ಲಾರಿ, ಮೂರು ಕಾರುಗಳು, ಬೈಕುಗಳು ಹಾಗೂ ಎರಡು ಲಕ್ಷಕ್ಕೂ ಅಧಿಕ ನಗದು, ಮೊಬೈಲ್ ಪೋನುಗಳು, ಇಲೆಕ್ಟ್ರಿಕಲ್ ತೂಕಮಾಪಕ, ದಾಳಿಯ ವೇಳೆ ವಶಕ್ಕೆ ಪಡೆಯಲಾಗಿದೆ. ಇಸ್ಮಾಯಿಲ್ ಬ್ಯಾರಿ, ಮುಸ್ತಫಾ ತೌಫಿಕ್, ಉಬೇದುಲ್ಲಾ, ಮಹಮ್ಮದ್ ಮೇಚ್ರಾ, ನಿಯಾಸ್, ಅಬ್ದುಲ್ ಸತ್ತಾರ್ ಮತ್ತು ಅಬ್ದುಲ್ ಅಜೀಜ್ ಸೇರಿದಂತೆ ಒಟ್ಟು 9 ಮಂದಿಯನ್ನು ಬಂಧಿಸಲಾಗಿದೆ.
ತಾಲೂಕಿನಲ್ಲಿ ಪಡಿತರ ಅಕ್ಕಿಯನ್ನು ಬಡವರಿಂದ ಖರೀದಿಸಿ ಇತರೆಡೆಗೆ ಮಾರಾಟ ಮಾಡುವ ವ್ಯವಸ್ಥಿತ ಜಾಲ ಕಾರ್ಯಾಚರಿಸುತ್ತಿರುವ ಬಗ್ಗೆ ಉಡುಪಿ ಡಿಸಿಐಬಿ ನಿರೀಕ್ಷಕ ಮಂಜಪ್ಪ ಡಿ.ಆರ್. ಅವರಿಗೆ ಬಂದ ಖಚಿತ ವರ್ತಮಾನದಂತೆ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖಾಧಿಕಾರಿಗಳ ಜೊತೆ ದಾಳಿ ನಡೆಸಿದ್ದಾರೆ. ಎರಡು ಪ್ರತ್ಯೇಕ ಗೋದಾಮಿನಲ್ಲಿ ಅಕ್ರಮ ವ್ಯವಹಾರ ನಡೆಸಲಾಗುತ್ತಿದ್ದು ಅಲ್ಲಲ್ಲಿ ಓಮ್ನಿ ಕಾರು ಮೊದಲಾದ ವಾಹನಗಳಲ್ಲಿ ಹೋಗುವ ಆರೋಪಿಗಳು ಬಡವರಿಗೆ ಹಣದ ಆಮೀಷ ತೋರಿಸಿ ಅವರಿಂದ ಪಡಿತರ ಅಕ್ಕಿಯನ್ನು ಖರೀದಿಸಿ ಗೋದಾಮಿಗೆ ತಂದು ಚೀಲಗಳನ್ನು ಮಾಡಿ ಹೆಚ್ಚಿನ ದರಕ್ಕೆ ಬೇರೆಡೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಉಡುಪಿ ಡಿಸಿಐಬಿ ನಿರೀಕ್ಷಕ ಮಂಜಪ್ಪ ಡಿ.ಆರ್, ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ, ಪಿಎಸ್‌ಐ ಸದಾಶಿವ ಗವರೋಜಿ, ಆಹಾರ ಇಲಾಖೆಯ ಪ್ರಭಾರ ಉಪತಹಶಿಲ್ದಾರ್ ಪ್ರಕಾಶ್ ದೇವಾಡಿಗ, ಆಹಾರ ನಿರೀಕ್ಷಕ ಸುರೇಶ್, ಡಿಸಿಐಬಿ ಎಎಸ್‌ಐ ರವಿಚಂದ್ರ, ರಾಘವೇಂದ್ರ, ಶಿವಾನಂದ ಪೂಜಾರಿ, ರಾಮು ಹೆಗ್ಡೆ, ಸಂತೋಷ ಕುಂದರ್, ಸುರೇಶ್, ರಾಜ್ ಕುಮಾರ್, ಚಂದ್ರ ಶೆಟ್ಟಿ, ದಯಾನಂದ ಪ್ರಭು, ಚಾಲಕ ರಾಘವೇಂದ್ರ, ಕುಂದಾಪುರ ಪೊಲೀಸ್ ಠಾಣೆ ಹಾಗೂ ವೃತ್ತನಿರೀಕ್ಷಕರ ಕಚೇರಿ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.