ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸೋಮೇಶ್ವರ ಬೀಚ್ ಕೇಂದ್ರವಾಗಿರಿಸಿಕೊಂಡು ಸೀಪ್ಲೇನ್, ಸೀ ವಾಕ್ ಹಾಗೂ ಮರೀನಾ ಯೋಜನೆಗೆ 228 ಕೋಟಿ ರೂ. ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಸಂಬಂಧ ಸಂಸದ ಬಿ. ವೈ. ರಾಘವೇಂದ್ರ ಅವರು ಗುರುವಾರ ಕೇಂದ್ರದ ಬಂದರು ಹಡಗು ಹಾಗೂ ಜಲಸಾರಿಗೆ ಸಚಿವರಾದ ಸರ್ಬಾನಂದ ಸೋನೋವಾಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಬೈಂದೂರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಯೋಜನೆ:
ಪ್ರವಾಸೋದ್ಯಮ ಹಾಗೂ ಮತ್ಸೋದ್ಯಮ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಈ ಯೋಜನೆ ಸಿದ್ಧಪಡಿಸಲಾಗಿದ್ದು, ಸರಕಾರ ಹಾಗೂ ಸಾಗರಮಾಲಾ ಅಭಿವೃದ್ಧಿ ಕಂಪನಿ ಲಿಮಿಟೆಡ್ (SDCL) ಜಂಟಿಯಾಗಿ ಯೋಜನೆ ಅನುಷ್ಠಾನಗೊಳಿಸಲಿದೆ. ಬೈಂದೂರು ಸೋಮೇಶ್ವರ ಬೀಚ್ ಹಾಗೂ ಒತ್ತಿನಣೆಯನ್ನು ಭಾಗವನ್ನು ಒಳಗೊಂಡು ಮರೀನಾ, ಸೀ ಪ್ಲೇನ್ ಹಾಗೂ ಸೀ ವಾಕ್ ಯೋಜನೆಗೆ ನೀಲನಕ್ಷೆ ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನಾ ವೆಚ್ಚ ಸುಮಾರು ರೂ 228.78 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಬಂದರುಗಳು, ಹಡಗು ಮತ್ತು ಜಲಮಾರ್ಗಗಳು ಸಚಿವಾಲಯವು ಯೋಜನಾ ರಚನೆಯನ್ನು ಸುಗಮಗೊಳಿಸಲು ಮತ್ತು ಹಣಕಾಸುಗಾಗಿ ಇಲಾಖೆಗೆ ಮಾರ್ಗದರ್ಶನ ನೀಡಲು ಮಾರ್ಗಸೂಚಿಯಲ್ಲಿ ತಿಳಿಸಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಸೀಮಿತ ವಾಯು ಸಂಪರ್ಕದೊಂದಿಗೆ ಜಲಾನಯನ ಪ್ರದೇಶದಲ್ಲಿ ಸೀಪ್ಲೇನ್ ಕಾರ್ಯಾಚರಣೆಗಳನ್ನು ಆರಂಭಿಸುವ ಮೂಲಕ ಪ್ರವಾಸಿಗರಿಗೆ ಐಷಾರಾಮಿ ಅನುಭವ ಒದಗಿಸುವುದು ಮತ್ತು ಜಾಲಾಧಾರಿತ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸುವುದು, ವಿಹಾರ ನೌಕೆ ಕಟ್ಟಡ, ದೋಣಿ ಅಂಗಳ, ಸಾಗರ ಉಪಕರಣಗಳ ತಯಾರಿಕೆ, ದೋಣಿ ಹಾಗೂ ಇತರೆ ಬೆಂಬಲಿತ ಉದ್ಯಮಗಳಿಗೆ ಅಗತ್ಯವಾದ ಉತ್ತೇಜನವನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಯೋಜನೆಯ ಅನುಷ್ಠಾನದಿಂದಾಗಿ ಕರಾವಳಿಯ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿ ಕಾಣುವುದರೊಂದಿಗೆ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುವುದರ ಜೊತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
- ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಬೈಂದೂರು ಸೋಮೇಶ್ವರದಲ್ಲಿ ಮರೀನಾ, ಸೀಪ್ಲೇನ್ ಹಾಗೂ ಸೀವಾಕ್ ಯೋಜನೆ ಅನುಷ್ಠಾನಗೊಳಿಸಲು ಕೇಂದ್ರದ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇದರಿಂದಾಗಿ ಪ್ರವಾಸೋದ್ಯಮ ಹಾಗೂ ಅರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆತಂತಾಗಲಿದೆ – ಬಿ. ವೈ. ರಾಘವೇಂದ್ರ, ಸಂಸದರು ಶಿವಮೊಗ್ಗ ಲೋಕಸಭಾ ಕ್ಷೇತ್ರ