ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಗ್ಗರ್ಸೆ ಗ್ರಾಮವನ್ನು ಈ ಭಾಗದ ಸಾರ್ವಜನಿಕರನ್ನು ಮತ್ತು ರೈತರಿಗೆ ಯಾವುದೇ ಮಾಹಿತಿ ನೀಡದೇ ಏಕಾಏಕಿ ಬೈಂದೂರು ಪಟ್ಟಣ ಪಂಚಾಯತ್‌ಗೆ ಸೇರಿಸಿರುವುದನ್ನು ವಿರೋಧಿಸಿ ಗುರುವಾರ ತಗ್ಗರ್ಸೆ ಗ್ರಾಮದ ಸಮಸ್ತ ರೈತರು ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಕೃಷಿಕ ವೀರಭದ್ರ ಗಾಣಿಗ, ಈ ಹಿಂದೆ ಸರ್ಕಾರದ ಎಲ್ಲಾ ಸವಲತ್ತುಗಳು ಗ್ರಾಪಂ ವ್ಯಾಪ್ತಿಯ ಎಲ್ಲಾ ಫಲಾನುಭವಿಗಳಿಗೆ ಸಿಗುತ್ತಿತ್ತು. ಆದರೆ ಕಳೆದ ಒಂದು ವರ್ಷದಿಂದ ಈ ಭಾಗದ ರೈತಾಪಿ ಜನರಿಗೆ ಯಾವುದೇ ಸವಲತ್ತುಗಳು ದೊರಕುತ್ತಿಲ್ಲ. ಬಡವರ್ಗದವರಿಗೆ ಆಶ್ರಯ ಯೋಜನೆಯಿಂದ ಸಿಗುವ ಮನೆಗಳಿಗೆ ಬಿಲ್ ಪಾವತಿಯಾಗುವುದಿಲ್ಲ. ಇತ್ತೀಚಿಗೆ ಮಳೆಯಿಂದ ಅಪಾರ ಹಾನಿಯಾಗಿದ್ದು, ಈ ಬಗ್ಗೆ ಸರ್ಕಾರದಿಂದ ಒಂದು ಚಿಕ್ಕಾಸು ಕೂಡ ಪರಿಹಾರ ದೊರೆಯಲಿಲ್ಲ. ತೋಟಗಾರಿಗೆ, ಕೃಷಿ ಸಂಬಂಧಿತ ಯಾವುದೇ ಪರಿಹಾರ ಸಿಗುತ್ತಿಲ್ಲ. ಎಂದು ಅವರು ಆರೋಪಿಸಿದರು.

ಸ್ಥಳೀಯ ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳಲ್ಲಿ ಈ ವಿಚಾರ ತಿಳಿಸಿದ್ದು, ಯಾರೊಬ್ಬರೂ ರೈತರ ಸಹಾಯಕ್ಕೆ ಬಂದಿಲ್ಲ. ಹೀಗಾಗಿ ನಮ್ಮ ಸಹನೆಯ ಕಟ್ಟೆ ಒಡೆದು ಸಾಂಕೇತಿಕವಾಗಿ ಪ್ರತಿಭಟನೆ ಹಾದಿ ಹಿಡಿದಿದ್ದೇವೆ. ಮುಂದಿನ ಒಂದು ತಿಂಗಳೊಳಗೆ ಗ್ರಾಮಸ್ಥರ ತಿಳುವಳಿಕೆಗೆ ಬಾರದ ಈ ನಿರ್ಧಾರನ್ನು ಮರುಪರಿಶೀಲಿಸಿ ಸರಿಪಡಿಸಿಕೊಡುವಂತೆ ಹಾಗೂ ನಂಜಯ್ಯನಮಠ ವರದಿಯಂತೆ ತಗ್ಗರ್ಸೆ ಗ್ರಾಮವನ್ನು ಪಪಂನಿಂದ ಹೊರಗಿಟ್ಟು ಬೈಂದೂರು ಪಪಂ ರಚಿಸುವಂತೆ ಒತ್ತಾಯಿಸಿದ ಅವರು, ಇದು ಅಸಾಧ್ಯವೆಸಿದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶೇ.65 ಪರಿಶಿಷ್ಠ ಪಂಗಡ, ಶೇ.10 ಪರಿಶಿಷ್ಠ ಜಾತಿ, ಶೇ.25 ಹಿಂದುಳಿದ ವರ್ಗ ಮತ್ತು ಕೊರಗ ಸಮುದಾಯವಿರುವ ಈ ಗ್ರಾಮ ಶೇ.95 ಕೃಷಿಕರಾಗಿದ್ದಾರೆ. ಜನಸಾಂದ್ರತೆ ಆಧಾರದಲ್ಲಿ ಕಡಿಮೆ ಇದ್ದು, ಪ್ರದೇಶದ ವ್ಯಾಪ್ತಿ ಹೆಚ್ಚಿರುವುದರಿಂದ ಪಪಂಗೆ ಸೇರಿಸಲು ಯಾವುದೇ ಸಾಧ್ಯತೆಗಳಿಲ್ಲ ಹಾಗೂ ನಮ್ಮ ಗ್ರಾಮವನ್ನು ಪಪಂಗೆ ಸೇರಿಸಲು ಯಾವ ಕಾರಣಕ್ಕೂ ಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬೈಂದೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗೋಪಾಲ ಪೂಜಾರಿ ಮಾತನಾಡಿ, ಪಟ್ಟಣ ಪಂಚಾಯತ್ ರಚನೆ ಆದ ಬಳಿಕ ವಾರ್ಡ್‌ಸಭೆ, ಗ್ರಾಮ ಸಭೆಗಳು ಕೂಡ ಮಾಯವಾಗಿದೆ. ಗ್ರಾಮ ಪಂಚಾಯಿತ್ ಇದ್ದ ಸಂದರ್ಭದಲ್ಲಿ ಬಡವರಿಗೆ ನೀಡಲಾಗಿದ್ದ ಆಶ್ರಯ ಮನೆ ಯೋಜನೆಯ ಅರ್ಧ ಹಣವಷ್ಟೇ ಬಿಡುಗಡೆಯಾಗಿದ್ದು ಉಳಿದ ಹಣ ಬಿಡುಗಡೆಯಾಗದೆ ತೊಂದರೆ ಅನುಭವಿಸುವಂತಾಗಿದೆ. ಪಡಿತರ ಚೀಟಿ ತಂಬ್ ಸೇರಿದಂತೆ ಇತರೆ ಸರಕಾರಿ ಕೆಲಸಗಳಿಗೆ ಗ್ರಾಮಸ್ಥರು ಕಚೇರಿಗಳ ಮುಂದೆ ಅಲೆದಾಡುವಂತಾಗಿದೆ. ಪಟ್ಟಣ ಪಂಚಾಯತ್‌ನಲ್ಲಿ ಕ್ರೀಯಾಯೋಜನೆಗಳಾಗುತ್ತದ್ದು ಅದರ ಬಗ್ಗೆ ಸದಸ್ಯರಿಗೂ ಮಾಹಿತಿ ನೀಡದೇ ಕಾಮಾಗಾರಿಗಳನ್ನು ನಡೆಸಲಾಗುತ್ತಿದೆ. ತಗ್ಗರ್ಸೆ ಗ್ರಾಮ ಪಪಂಗೆ ಸೇರಿರುವುದರಿಂದ ಯಾವುದೇ ಪ್ರಯೋಜನ ದೊರಕುತ್ತಿಲ್ಲ ಎಂದರು.
ಮಧ್ಯಾಹ್ನವಾದರೂ ಮನವಿ ಸ್ವೀಕರಿಸಲು ತಹಶೀಲ್ದಾರ್ ಕಾರಣಾಂತರದಿಂದ ತಡವಾಗಿದ್ದಕ್ಕೆ ಕೋಪಗೊಂಡ ರೈತ ಹೋರಾಟಗಾರು ಅವರ ಕಚೇರಿ ಮುತ್ತಿಗೆ ಹಾಕುವ ಪ್ರಯತ್ನವನ್ನು ಪೋಲಿಸರು ತಡೆಯೊಡ್ಡಿ ವಿಫಲಗೊಳಿಸಿದರು. ನಂತರ ಆಗಮಿಸಿದ ತಹಶೀಲ್ದಾರ್ ಶೋಭಾಲಕ್ಷ್ಮೀ ಪ್ರತಿಭಟನಾಕಾರರ ಮನವಿ ಸ್ವೀಕರಿಸಿದರು. ಗ್ರಾಪಂ ಮಾಜಿ ಸದಸ್ಯರಾದ ನಾಗರಾಜ ಗಾಣಿಗ, ಗಣೇಶ ಗಾಣಿಗ, ಗುಲಾಬಿ, ಚೆಂದು ಮತ್ತಿತರರು ಇದ್ದರು.




