ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡ ಹಾಡಿದ್ದಾರೆ. ಕುಂದಾಪ್ರ ಕನ್ನಡ ಬಿಲಿಂಡರ್ ಚಿತ್ರ ಹೊಸ ನಿರೀಕ್ಷೆ ಹುಟ್ಟಿಸಿದೆ.
● ಸುನಿಲ್ ಹೆಚ್. ಜಿ. ಬೈಂದೂರು.
ಕುಂದಾಪ್ರ ಡಾಟ್ ಕಾಂ: ಕುಂದಗನ್ನಡಕ್ಕೊಂದು ಹೊಸ ಖದರ್ ನೀಡುತ್ತಿದ್ದಾರೆ ನಮ್ ರವಿ ಬಸ್ರೂರ್! ಕುಂದಾಪ್ರ ಕನ್ನಡದಲ್ಲಿ ಹಾಡು, ಸಿನೆಮಾ ನಿರ್ಮಿಸಿ ಸೈ ಎನಿಸಿಕೊಂಡ ರವಿ ಬಸ್ರೂರು ತಮ್ಮ ಕುಂದಾಪ್ರ ಕನ್ನಡದ ಹೊಸ ಚಿತ್ರ ’ಬಿಲಿಂಡರ್’ನ ಹಾಡನ್ನು ಕನ್ನಡದ ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್ ಹಾಗೂ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರಿಂದ ಕುಂದಗನ್ನಡದಲ್ಲಿಯೇ ಹಾಡಿಸಿದ್ದಾರೆ.
ಕನ್ನಡ ಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯ ಸಂಗೀತವನ್ನು ತಂದು ಕೇಳುಗರ ಮನಮಿಡಿದಿದ್ದ ಬಸ್ರೂರು ಅವರ ಕುಂದಗನ್ನಡ ಪ್ರೀತಿ ಒಂದು ಸಿನೆಮಾಕ್ಕಷ್ಟೇ ಮುಗಿದಿಲ್ಲ. ಗರ್‌ಗರ್‌ಮಂಡ್ಲದಿಂದ ಆರಂಭಗೊಂಡು ಈಗಿನ ಬಿಲಿಂಡರ್ ಸಿನೆಮಾದಲ್ಲಿಯೂ ಮುಂದುವರಿದಿದೆ. ಕಣ್ಮರೆಯಾಗುತ್ತಿರುವ ಭಾಷೆಗಳ ಪಟ್ಟಿಯಲ್ಲಿ ತನ್ನೂರ ಭಾಷೆ ಸೇರಬಾರದೆಂಬುದೇ ರವಿ ಅವರ ಬಯಕೆ. ಹಾಗಾಗಿ ಅಚ್ಚಗನ್ನಡದ ಭಾಷೆಯಲ್ಲಿಯೇ ತಮ್ಮ ಸೃಜನಶೀಲತೆಯನ್ನು ಬೆರೆಸಿ ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಬಂದ ಅವರು ಇಂದು ಮನೆಮಾತಾಗಿದ್ದಾರೆ. ಗರ್‌ಗರ್‌ಮಂಡ್ಲ ಸಿನೆಮಾ ಬಂದಾಗ ಯಾವ ಕನ್ನಡ ಚಿತ್ರಗಳಿಗೂ ಕಡಿಮೆ ಇಲ್ಲದ ಗುಣಮಟ್ಟವನ್ನು ಕುಂದನಾಡಿಗರೂ ಕಂಡು ಖುಷಿಪಟ್ಟಿದ್ದರು. ಕುಂದಾಪ್ರ ಡಾಟ್ ಕಾಂ. ಈಗ ಅದಕ್ಕೂ ಮೀರಿದ ಶ್ರಮವನ್ನು ಬಿಲಿಂಡರ್ ಚಿತ್ರದಲ್ಲಿ ತೋರಿದ್ದಾರೆ ಎಂಬುದು ಅವರ ಮಾತಿನಲ್ಲಿಯೇ ಸ್ಪಷ್ಟವಾಗುತ್ತಿದೆ. ಹಾಗಾಗಿ ಕುಂದನಾಡಿನ ಸೊಗಡಿನ ಬಿಲಿಂಡರ್ ಸಿನೆಮಾ ಒಂದಷ್ಟು ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.
ಒಂದರ ಹಿಂದೊಂದರಂತೆ ಹಣದ ಅವಶ್ಯಗತೆಗಳು ಎದುರಾಗಿ, ಅದನ್ನು ಪೂರೈಸಿಕೊಳ್ಳಲು ವ್ಯಕ್ತಿಯೊಬ್ಬ ಅಡ್ಡದಾರಿ ಹಿಡಿಯುತ್ತಾನೆ. ಮುಂದೆನಾಗುತ್ತದೆ, ಆ ನಡುವಿನ ಆತ ಎದುರಿಸುವ ಸವಾಲುಗಳೇನು? ಆತ ಬದಲಾಗುತ್ತಾನಾ ಎಂಬುದು ಚಿತ್ರದ ಒನ್‌ಲೈನ್ ಸ್ಟೋರಿ. ಚಿತ್ರದಲ್ಲಿ ಸ್ವತಃ ರವಿ ಬಸ್ರೂರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಗರ್‌ಗರ್‌ಮಂಡ್ಲದ ಕಲಾವಿದರುಗಳೇ ಬಿಲಿಂಡರ್ ಸಿನೆಮಾದಲ್ಲಿಯೂ ಮತ್ತೆ ಕಾಣಿಸಿಕೊಂಡಿದ್ದಾರೆ. ಚಿತ್ರವು ಬಹುಪಾಲು ಪೂರ್ಣಗೊಂಡಿದ್ದು ಸೆನ್ಸಾರ್ ಮಂಡಳಿಗೆ ಕಳುಸುವುದಷ್ಟೇ ಬಾಕಿ ಎನ್ನುತ್ತಾರೆ ನಿರ್ದೇಶಕರು. ಕುಂದಾಪ್ರ ಡಾಟ್ ಕಾಂ ವರದಿ
[quote font_size=”14″ bgcolor=”#ffffff” bcolor=”#dd3333″ arrow=”yes” align=”right”]► ನನ್ನ ಹಠಕ್ಕೆ ಜನರ ಸಾಥ್ ಇದೆ ಅಂತಾದರೆ, ಈ ಹೋರಾಟಕ್ಕೊಂದು ಸಾರ್ಥಕತೆ ಅಂದುಕೊಂಡಿದ್ದೇನೆ. ದುಡ್ಡು ಮಾಡಲೆಂದು ಸಿನೆಮಾ ಮಾಡುತ್ತಿಲ್ಲ. ನಮ್ಮನ್ನು ಪ್ರೀತಿಸುವ ಜನರಿಗಾಗಿ, ನಮ್ಮ ಭಾಷೆಗಾಗಿ ಸಿನೆಮಾ ಡುತ್ತಿದ್ದೇನೆ. ಈವರೆಗೆ ಮಾಡಿದ ಕೆಲಸಗಳು ಒಂದು ಇತಿಹಾಸ ಸೃಷ್ಠಿಸಿದೆ. ಅದು ಮುಂದುವರಿಯುತ್ತಲೂ ಇರುತ್ತದೆ ಎಂಬ ನಂಬಿಕೆ ಇದೆ. – ರವಿ ಬಸ್ರೂರು[/quote]
ಕುಂದಗನ್ನಡ ಹಾಡಿಗೆ ಪವರ್‌ಸ್ಟಾರ್ ಧ್ವನಿ: ಕುಂದಾಪ್ರ ಕನ್ನಡದ ಚಿತ್ರ ಬಿಲಿಂಡರ್‌ನಲ್ಲಿ ಹೊಸ ಪ್ರಯತ್ನಕ್ಕೆ ಮುನ್ನುಡಿ ಬರೆದಿರುವ ತಂಡ, ಕನ್ನಡದ ಖ್ಯಾತ ನಟ ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್ ಮೂಲಕ ಚಿತ್ರದ ಹಾಡೊಂದನ್ನು ಹಾಡಿಸಿದ್ದಾರೆ. ಕುಂದಗನ್ನಡ ಸಾಹಿತ್ಯ ಓದಿದ ಪುನಿತ್, ಖುಷಿಯಿಂದಲೇ ಹಾಡಲು ಒಪ್ಪಿದ್ದಲ್ಲದೇ ಚಿತ್ರತಂಡದ ಪ್ರಯತ್ನವನ್ನೂ ಶ್ಲಾಘಿಸಿದ್ದಾರೆ. ’ಚಿಲ್ರಿ ಶೋಕಿ ಗಂಡ್ ನಾನಲ್ಲೆ. ನಿನ್ ಕಂಡ್ ಮುಗ್ಗರ‍್ಸಿ ಬಿದ್ನಲ್ಲೆ’ ಎಂದು ಕುಂದಗನ್ನಡದ ಹಾಡು ಪುನಿತ್ ಅವರ ಧ್ವನಿಯಲ್ಲಿ ಮೂಡಿಬಂದಿದೆ. ಕುಂದಾಪ್ರ ಡಾಟ್ ಕಾಂ ವರದಿ
ಪುನಿತ್‌ರಾಜ್‌ಕುಮಾರ್ ಹಾಡಲು ಒಪ್ಪಿಕೊಳ್ಳುತ್ತಾರೆಂಬ ನಿರೀಕ್ಷೆಗಳಿರಲಿಲ್ಲ. ಆದರೆ ಅಂದು ಅವರ ಮ್ಯಾನೆಜರ್ ಸ್ಟುಡಿಯೋ ಬುಕ್ ಮಾಡಿ ಎಂದು ಕರೆ ಮಾಡಿದಾಗ ನಮಗೂ ಆಶ್ಚರ್ಯವಾಗಿತ್ತು. ಹಾಡನ್ನು ತುಂಬಾ ಎಂಜಾಯ್ ಮಾಡುತ್ತಲೇ ಹಾಡಿ ಸ್ಟುಡಿಯೋದಲ್ಲಿದ್ದಷ್ಟೂ ಹೊತ್ತು ಕುಂದಾಪುರದೊಂದಿಗಿನ ತಮ್ಮ ನಂಟನ್ನು ಬಿಚ್ಚಿಟ್ಟಿದ್ದರು ಎಂದು ರವಿ ಬಸ್ರೂರು ಖುಷಿಯಿಂದಲೇ ಹೇಳಿಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ
ಟೈಟಲ್ ಸಾಂಗ್ ಶ್ರೀಮುರಳಿ ಧ್ವನಿಯಲ್ಲಿ: ಚಿತ್ರದ ಟೈಟಲ್ ಸಾಂಗ್‌ಗೆ ಖ್ಯಾತ ಸಂಗೀತ ನಿರ್ದೇಶಕ, ರವಿ ಬಸ್ರೂರು ಅವರ ಗುರುಗಳೂ ಆದ ಅರ್ಜುನ್ ಜನ್ಯ ಧ್ವನಿ ನೀಡುತ್ತಾರೆಂಬ ಮಾಹಿತಿ ಇದ್ದರೂ ಕೊನೆಗಳಿಗೆಯಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರಿಂದ ಹಾಡಿಸುವ ಮೂಲಕ ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದ್ದಾರೆ. ’ಎಂಟ್ರಿ ಕೊಟ್ಟ ಅಂದ್ರೆ ಇವ್ನಿ ಬಾಸ್’ ಹಾಡನ್ನು ಶ್ರಿಮುರಳಿ ಹಾಡಿದ್ದಾರೆ. ಒಟ್ಟಿನಲ್ಲಿ ಏನೇ ಮಾಡಿದ್ರೂ ಒಂದಿಷ್ಟು ಹೊಸತನವನ್ನು, ಸೃಜನಾತೃಕತೆಯನ್ನು ತುಂಬಿ ಮಾಡುವ ರವಿ ಬಸ್ರೂರು ಅವರ ಸಂಗೀತದಂತೆ ಸಿನೆಮಾವೂ ಇರಲಿ. ಅದು ಕುಂದಾಪ್ರ ಕನ್ನಡವನ್ನು ಜಗದಗಲ ಪಸರಿಸುವಂತಾಗಲಿ ಎಂಬುದು ಕುಂದಾಪ್ರ ಡಾಟ್ ಕಾಂ ತಂಡದ ಹಾರೈಕೆ.