ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬದುಕಿನಲ್ಲಿ ಕಷ್ಟದ ದಿನಗಳನ್ನು ಎದುರಿಸುತ್ತಾ ಎದ್ದು ಬಿದ್ದು ಗೆದ್ದವರು ಮಾತ್ರವೇ ನಡೆದುಬಂದ ದಾರಿಯ ಬಗ್ಗೆ ಸರಿಯಾದ ಮಾರ್ಗದರ್ಶನ ಮಾಡಬಲ್ಲರು. ಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂಬುದನ್ನು ಅರಿತರೆ ಗೆಲುವಿನ ದಾರಿ ಸುಲಭ ಎಂದು ರಂಗಭೂಮಿ ಹಾಗೂ ಸಿನಿಮಾ ನಟ ರಘು ಪಾಂಡೇಶ್ವರ ಹೇಳಿದರು.

ಸುರಭಿ ರಿ. ಬೈಂದೂರು ಆಶ್ರಯದಲ್ಲಿ ಇಲ್ಲಿನ ಶಾರದಾ ವೇದಿಕೆಯಲ್ಲಿ ಆಯೋಜಿಸಲಾದ ರಂಗಸುರಭಿ – 2023ರ ನಾಲ್ಕು ದಿನಗಳ ರಾಜ್ಯಮಟ್ಟದ ನಾಟಕೋತ್ಸವದ ಮೂರನೇ ದಿನದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ರಂಗಭೂಮಿ ಪ್ರತಿ ಕಲಾವಿದನಿಗೂ ಧೈರ್ಯ ತುಂಬಿಕೊಡುತ್ತದೆ. ರಂಗ ಚಟುವಟಿಕೆಗಳು ಜಿಲ್ಲಾ ಕೇಂದ್ರದಷ್ಟೇ ವಿಜೃಂಭಣೆಯಿಂದ ಬೈಂದೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ಜರುಗುತ್ತಿರುವುದು ಮತ್ತು ಅದಕ್ಕೆ ತಕ್ಕಂತೆ ಪ್ರಜ್ಞಾವಂತ ಪ್ರೇಕ್ಷಕರೂ ಹುಟ್ಟಿಕೊಂಡಿರುವುದು. ಈ ಎಲ್ಲದಕ್ಕೂ ಪುರಕ ವಾತಾವರಣ ನಿರ್ಮಿಸಿದ ಸಂಸ್ಥೆಗಳ ಶ್ರಮ ದೊಡ್ಡದು ಎಂದರು.
ಜಿಪಂ ಮಾಜಿ ಅಧ್ಯಕ್ಷರಾದ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮುಂಜುನಾಥ ಶೆಟ್ಟಿ, ಕುಂದಾಪುರ ಮೈಲಾರೇಶ್ವರ ಯುವ ಸಂಘದ ಜಿ.ಆರ್. ಪ್ರಕಾಶ್, ಉದ್ಯಮಿಗಳಾದ ವೆಂಕಟರಮಣ ಬಿಜೂರು, ಪ್ರಸಾದ್ ಪ್ರಭು, ಉಪ್ಪುಂದ ಜೆಸಿಐ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಅತಿಥಿಗಳಾಗಿದ್ದರು. ಸುರಭಿ ಅಧ್ಯಕ್ಷ ನಾಗರಾಜ ಪಿ. ಯಡ್ತರೆ ಹಾಗೂ ಕಾರ್ಯದರ್ಶಿ ಭಾಸ್ಕರ ಬಾಡ ಉಪಸ್ಥಿತರಿದ್ದರು.
ರಂಗಭೂಮಿ ಹಾಗೂ ಚಲನಚಿತ್ರ ನಟ ರಘು ಪಾಂಡೇಶ್ವರ ಅವರನ್ನು ಸನ್ಮಾನಿಸಲಾಯಿತು. ಸುರಭಿ ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗಣೇಶ್ ಟೈಲರ್ ಸ್ವಾಗತಿಸಿ, ಚಂದ್ರಶೇಖರ ಶೆಟ್ಟಿ ವಂದಿಸಿದರು. ರಾಘವೇಂದ್ರ ಕೆ. ಪಡುವರಿ ಹಾಗೂ ಸೌಮ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸುರಭಿ ರಿ. ಬೈಂದೂರು ಇದರ ಮಕ್ಕಳ ರಂಗತಂಡದಿಂದ ಡಿ.ಆರ್. ವೆಂಕಟ್ರಮಣ ಐತಾಳ್ ಅವರ ರಚನೆಯ, ಗಣೇಶ್ ಮಂದರ್ತಿ ಕುಂದಾಪ್ರ ಕನ್ನಡಕ್ಕೆ ಅನುವಾದಿಸಿ ನಿರ್ದೇಶಿಸಿದ ’ಮಕ್ಕಳ ರಾಮಾಯಣ’ ನಾಟಕ ಪ್ರದರ್ಶನಗೊಂಡಿತು.