ಕಲಾಭಿವ್ಯಕ್ತಿಯಿಂದ ಆತ್ಮವಿಶ್ವಾಸ ವೃದ್ಧಿ: ನಳಿನ್‌ಕುಮಾರ್ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಯುವಜನರು ಕಲೆಗಳಲ್ಲಿ ತೊಡಗಿಕೊಳ್ಳುವುದರಿಂದ ಅವರು ಅನಪೇಕ್ಷಣೀಯ ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡುವುದು ನಿಲ್ಲುತ್ತದೆ. ಅವರ ಕಲಾಭಿವ್ಯಕ್ತಿ ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ನಾಗೂರಿನ ಕುಸುಮಾ ಫೌಂಡೇಶನ್ ಸಂಸ್ಥಾಪಕ ಎಚ್. ನಳಿನ್‌ಕುಮಾರ್ ಶೆಟ್ಟಿ ಹೇಳಿದರು.

ರಾಜ್ಯ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾ ಘಟಕ ಮತ್ತು ಕುಸುಮಾ ಫೌಂಡೇಶನ್ ಜಂಟಿ ಆಶ್ರಯದಲ್ಲಿ ಭಾನುವಾರ ನಾಗೂರಿನ ಕೆಎಎಸ್ ಆಡಿಟೋರಿಯಂನಲ್ಲಿ ನಡೆದ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತೀಯ ರಂಗೋಲಿ ಕಲೆಗೆ ಅಧ್ಯಾತ್ಮ ಮತ್ತು ಧಾರ್ಮಿಕತೆಯೊಂದಿಗೆ ಸಂಬಂಧವಿದೆ. ಮನೆಗಳ ಮುಂದೆ ಹಿಂದಿದ್ದ ರಂಗೋಲಿ ಹಾಕುವ ಕ್ರಮವನ್ನು ಮುಂದುವರಿಸುವುದರಿಂದ ಪರಂಪರೆಯನ್ನು ಎತ್ತಿಹಿಡಿಯಬಹುದು ಎಂದು ಅವರು ಹೇಳಿದರು.

ರಂಗೋಲಿ ಸ್ಪರ್ಧೆಯನ್ನು ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಉದ್ಘಾಟಿಸಿದರು. ರಮ್ಯಾ ಪೈ ಪ್ರಾರ್ಥನೆ ಹಾಡಿದರು. ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಗಂಗೊಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಂಪಾರು ಸಂಜಯ ಗಾಂಧಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಉದಯಕುಮಾರ್ ಬಿ. ಮುಖ್ಯ ಅತಿಥಿಯಾಗಿದ್ದರು.

ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಪಡೆದ ಸೌಜನ್ಯಾ ನಾಯ್ಕನಕಟ್ಟೆ, ಅಶ್ವಿನಿ ನಾಯ್ಕನಕಟ್ಟೆ, ವೃಂದಾರಾಣಿ ಖಂಬದಕೋಣೆ ಅವರಿಗೆ ಡಾ. ಭಾರತಿ ಮರವಂತೆ ರಂಗೋಲಿ ಬಹುಮಾನವಾದ ರೂ 3,000, 2,000, 1,000 ನಗದು ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ತನುಷಾ ಕಿರಿಮಂಜೇಶ್ವರ, ನಿಷ್ಮಿತಾ ಆಚಾರ್ಯ ಕುಂದಾಪುರ, ವೇದಾವತಿ ಹಳಗೇರಿ, ನಯನಾ ಶಿರೂರು, ಆರಾಧನಾ ಖಂಬದಕೋಣೆ, ನಿಖಿತಾ ಖಾರ್ವಿ ಗಂಗೊಳ್ಳಿ, ವಿಜಯಶ್ರೀ ಶೇಟ್ ಉಡುಪಿ, ಸುಷ್ಮಿತಾ ನಾವುಂದ, ಸುಷ್ಮಿತಾ ಬಡಾಕೆರೆ ಅವರಿಗೆ ಪ್ರೋತ್ಸಾಹಕ ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಯಿತು. ಉಡುಪಿ ಚಿತ್ರಕಲಾ ಶಾಲೆಯ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಮತ್ತು ರಂಗೋಲಿ ಕಲಾವಿದೆ ಶ್ರೀಲಕ್ಷ್ಮೀ ಪೈ ಉಡುಪಿ ತೀರ್ಪುಗಾರರಾಗಿದ್ದರು.

Leave a Reply

Your email address will not be published. Required fields are marked *

two × 1 =