ಅಯೋಧ್ಯೆ ಶ್ರೀರಾಮನಿಗೆ ಕೋಟೇಶ್ವರದ ರಥ!

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರಕ್ಕೆ ಕುಂದಾಪುರ ತಾಲೂಕಿನ ಕೋಟೇಶ್ವರ ಪ್ರಸಿದ್ಧ ಶಿಲ್ಪಕಲಾ ಶಾಲೆಯಲ್ಲಿ ರಥ ನಿರ್ಮಿಸುವ ಸಿದ್ಧತೆಗಳು ಸದ್ದಿಲ್ಲದೆ ನಡೆಯುತ್ತಿದೆ.

ಕಳೆದ ಕೆಲ ತಿಂಗಳುಗಳ ಹಿಂದೆ ಅಯೋಧ್ಯೆ ಶ್ರೀ ರಾಮ ಮಂದಿರದ ರಥ ನಿರ್ಮಾಣದ ಮಾತುಕತೆ ನಡೆದಿದ್ದು, ಕೋಟೇಶ್ವರದ ರಥಶಿಲ್ಪಿ, ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀನಾರಾಯಣ ಆಚಾರ್ಯ ಅವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿಯೇ ಅಯೋಧ್ಯೆ ರಥ ನಿರ್ಮಾಣವಾಗುವುದು ಬಹುತೇಕ ಖಚಿತವಾಗಿದೆ. ಕುಂದಾಪ್ರ ಡಾಟ್ ಕಾಂ.

ಅಯೋಧ್ಯೆ ರಾಮ ಮಂದಿರದ ರಥ ನಿರ್ಮಾಣದ ಕುರಿತು ಚರ್ಚೆ ಬಂದಾಗ ಲಕ್ಷ್ಮೀನಾರಾಯಣ ಆಚಾರ್ಯ ಅವರ ಹೆಸರು ಕೇಳಿಬಂದಿದ್ದು, ಇದಕ್ಕೆ ಪೂರಕವೆಂಬಂತೆ ವಿನ್ಯಾಸ ಸಮಿತಿಯಲ್ಲಿ ಪ್ರಮುಖರಾಗಿರುವ ಲೇಖಕಿ ಹಾಗೂ ಅಂಕಣಕಾರ್ತಿ ಶೇಫಾಲಿ ವೈದ್ಯ ಅವರು ಕೋಟೇಶ್ವರ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯರ ಮನೆಗೆ ಭೇಟಿ ನೀಡಿ ಹಲವು ದೇವಾಲಯಗಳಿಗೆ ಸುಂದರ ರಥ ನಿರ್ಮಿಸಿರುವುದನ್ನು ತಿಳಿದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಬಳಿಕ ಉತ್ತರ ಭಾರತದ ಶೈಲಿ ಹಾಗೂ ದಕ್ಷಿಣ ಭಾರತದ ಶೈಲಿ ರಥಗಳ ಬಗ್ಗೆ ಚರ್ಚಿಸಿ ಸಮಿತಿಯಿಂದ ಉತ್ತರಾಯಣದಲ್ಲಿ ಅಂತಿಮ ನಿರ್ಧಾರ ತಿಳಿಸುವುದಾಗಿಯೂ ಹೇಳಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.

ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೊಂಡಿರುವ ಲೇಖಕಿ ಶೆಫಾಲಿ ವೈದ್ಯ, ಕೋಟೇಶ್ವರದ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಅವರಿಗೆ ಅಯೋಧ್ಯ ರಾಮ ಮಂದಿರದ ರಥ ನಿರ್ಮಾಣದ ಜವಾಬ್ದಾರಿ ನೀಡಲಾಗಿದೆ ಎಂದಿದ್ದಾರೆ.

ಪ್ರಸಿದ್ಧ ದೇಗುಲಗಳಿಗೆ ಇಲ್ಲಿಯದೇ ರಥ:
ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಿಂದ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನಗಳು ಸೇರಿದಂತೆ ಪ್ರಸಿದ್ಧ ದೇಗುಲಗಳಿಗೆ ರಥ ನಿರ್ಮಿಸಲಾಗಿದೆ. ಈವರೆಗೆ 27ಕ್ಕೂ ಅಧಿಕ ಬ್ರಹ್ಮರಥ, 1 ಇಂದ್ರರಥ, 1 ಚಂದ್ರರಥ, 2 ಚಿನ್ನದ ರಥ, 8 ಬೆಳ್ಳಿರಥ, 63 ಪುಪ್ಪರಥಗಳನ್ನು ನಿರ್ಮಿಸಲಾಗಿದೆ. 1960ರಲ್ಲಿ ಶ್ರೀ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆ ಎನ್ನುವ ಕಾರ್ಯಾಗಾರ ನಿರ್ಮಿಸಿಕೊಂಡು ರಥಗಳನ್ನು ಹಾಗು ಶಿಲ್ಪಕಲೆಗೆ ಸಂಬಂಧಪಟ್ಟ ಕೆಲಸಗಳನ್ನು ಇಲ್ಲಿಯೇ ತಯಾರಿಸಲಾಗುತ್ತದೆ. ಶಿಲ್ಪಕಲಾ ಶಾಲೆಯಲ್ಲಿ ಒಂದೇ ಬಾರಿಗೆ 3-4 ರಥಗಳನ್ನು ತಯಾರು ಮಾಡುವ ಅನುಕೂಲತೆ ಹೊಂದಿದೆ. ಒಟ್ಟಿನಲ್ಲಿ ಅಯೋಧ್ಯೆ ರಾಮ ಮಂದಿರಕ್ಕೆ ಕುಂದಾಪುರ ತಾಲೂಕಿನ ಕೋಟೇಶ್ವರದ ರಥ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಅಯೋಧ್ಯೆ ರಾಮ ಮಂದಿರಕ್ಕೆ ರಥ ನಿರ್ಮಾಣದ ಮಾಡಿಕೊಡುವ ಪ್ರಸ್ತಾಪ ಬಂದಿರುವುದು ನಿಜ. ಶೆಫಾಲಿ ವೈದ್ಯ ಅವರು ನಮ್ಮ ಶಿಲ್ಪಕಲಾ ಶಾಲೆಗೆ ಭೇಟಿ ನೀಡಿ ರಥ ನಿರ್ಮಾಣದ ಮಾಹಿತಿ ಪಡೆದಿದ್ದರು. ಈ ಬಗ್ಗೆ ರಾಮಮಂದಿರ ಸಮಿತಿಯಿಂದ ಅಧಿಕೃತ ಸೂಚನೆ ಈವರೆಗೆ ಬಂದಿಲ್ಲ ಎಂದು ರಾಜಗೋಪಾಲ ಆಚಾರ್ಯ ಅವರು ಕುಂದಾಪ್ರ ಡಾಟ್ ಕಾಂಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

20 − five =