ನಿವೃತ್ತ ಐಎಫ್‌ಎಸ್ ಅಧಿಕಾರಿ ಬಿ. ಜಗನ್ನಾಥ ಶೆಟ್ಟಿ ನಿಧನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಐಎಫ್‌ಎಸ್  ಬಿ. ಜಗನ್ನಾಥ ಶೆಟ್ಟಿ (96) ಅವರು ಶಿವಮೊಗ್ಗದ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಕೆಲ ದಿನಗಳಿಂದ  ಅನಾರೋಗ್ಯದಿಂದಿದ್ದ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನಿವೃತ್ತ ಐಎಫ್‌ಎಸ್ ಅಧಿಕಾರಿಯಾಗಿರುವ ಬಿ. ಜಗನ್ನಾಥ ಶೆಟ್ಟಿ ಅವರು ವೃತ್ತಿಯಲ್ಲಿದ್ದಾಗ ತಮ್ಮ ಸೇವಾ ಕೌಶಲ್ಯದಿಂದ ಉತ್ತಮ ಹೆಸರು ಗಳಿಸಿದ್ದಲ್ಲದೇ ಉನ್ನತ ಪದವಿಗೇರಿದ್ದರು. ಅವರು ಅರಣ್ಯ ಕಾನೂನಿನ ಬಗೆಗೆ ಬರೆದ ಪುಸ್ತಕವು ಕಾಲೇಜಿನ ಅರಣ್ಯಶಾಸ್ತ್ರ ವಿಭಾದಲ್ಲಿ ಪಠ್ಯವಾಗಿತ್ತಲ್ಲದೇ ಎಲ್ಲಾ ಅರಣ್ಯ ಇಲಾಖೆಗಳಲ್ಲಿ ಆಧಾರ ಗ್ರಂಥವಾಗಿ ಲಭ್ಯವಿದೆ.

1992ರ ಭಾರತೀಯ ಅರಣ್ಯ ಕಾನೂನು ತಿದ್ದುಪಡಿ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಅವರು ಬೈಂದೂರಿನಲ್ಲಿ ನೆಲೆಸಿ ತಮ್ಮನ್ನು ಸಂಪೂರ್ಣ ಸಾಮಾಜಿಕವಾಗಿ ತೊಡಗಿಸಿಕೊಂಡರು. ೧೯೮೪ರಿಂದ ೧೯೮೭ರ ವರೆಗೆ ಬೈಂದೂರು ರೋಟರಿ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಮುಂದೆ ರೋಟರಿ ಜಿಲ್ಲಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. 1992ರಲ್ಲಿ ಇವರ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ರೋಟರಿ ಸಮುದಾಯ ಭವನ ಇಂದು ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ನೆರವಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

1984 ರಲ್ಲಿ ಬೈಂದೂರಿನ ಒತ್ತಿನಣೆಯಲ್ಲಿ ಉಡ್ಡಯಣ ಕೇಂದ್ರವಾಗುವುದನ್ನು ಊರಿನ ಪ್ರಮುಖರೊಂದಿಗೆ ತಡೆದು, ಅಧಿಕಾರಿಗಳ ಮನವೊಲಿಸಿ ಅದು ಓರಿಸ್ಸಾಗೆ ಹೋಗುವಂತೆ ನೋಡಿಕೊಂಡಿದ್ದರು. ಮುಂದೆ ಕೊಂಕಣ ರೈಲ್ವೇಯಾದಾಗಲೂ ಬೈಂದೂರಿಗೆ ಪಿಕ್‌ಅಪ್ ಸ್ಟೇಷನ್ ಬರುವುದಕ್ಕೆ ಕಾರಣೀಭೂತರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

1995ರಲ್ಲಿ ಬೈಂದೂರು ಬಂಟ್ಸ್ ಸಂಘವನ್ನು ಹುಟ್ಟುಹಾಕಿ ಸ್ವಜಾತಿ ಬಂಧುಗಳ ಒಗ್ಗೂಡಿಸುವಿಕೆಗೆ ನಾಂದಿ ಹಾಡಿದರು. ವರ್ಲ್ಡ್ ಫೆಡರೇಶನ್ ಆಫ್ ಬಂಟ್ಸ್ ಅಸೋಸಿಯೇಶನ್ ನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾಗಿ, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸಕ್ರಿಯರಾಗಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಹತ್ತಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುವ ಜಗನ್ನಾಥ ಶೆಟ್ಟಿಯವರು ಬೈಂದೂರು ತಾಲೂಕು ರಚನಾ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಬೈಂದೂರನ್ನು ತಾಲೂಕನ್ನಾಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಡಿದ್ದರು.

ಮೃತರು ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರು ಬಂಧುಗಳನ್ನು ಅಗಲಿದ್ದಾರೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply

Your email address will not be published. Required fields are marked *

19 + thirteen =