ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ : ಬಡತನ ಸಿರಿತನದಿಂದ ಯಾರೂ ಕೆಟ್ಟವರಾಗೋದಿಲ್ಲ ಕೆಟ್ಟವರಾಗೋದು ತಮ್ಮೊಳಗಿನ ದುರಾಸೆಯಿಂದ ಮಾತ್ರ. ಈ ದುರಾಸೆ ಹುಟ್ಟೋದು ಬುದ್ಧಿಯಿಂದಲೇ ಹೊರತು ಹೃದಯಭಾವದಿಂದಲ್ಲ. ಈ ಬದುಕೆಂಬ ಮಾಯಾಲೋಕದಲ್ಲಿ ಹೃದಯವಂತಿಕೆಯ ಬದುಕು ಹೆಚ್ಚು ನೆಮ್ಮದಿ ಹಾಗೂ ಆರೋಗ್ಯವನ್ನು ಕರುಣಿಸುತ್ತದೆ. ಶುದ್ಧ ಅಂತಃಕರಣ ಎಲ್ಲಕ್ಕೂ ಮಿಗಿಲಾದ ಸಂಪತ್ತು ಅದನ್ನು ನಮ್ಮದಾಗಿಸಿಕೊಳ್ಳೋಣ ಎಂದು ಸಾಹಿತಿ, ಜಾದೂಗಾರ ಓಂಗಣೇಶ್ ಉಪ್ಪುಂದ ಹೇಳಿದರು.
ರೋಟರಿ ಕುಂದಾಪುರ ಏರ್ಪಡಿಸಿದ ಮಾಸಿಕ ಕುಟುಂಬೋತ್ಸವದಲ್ಲಿ ’ಬದುಕು ಮಾಯಾಲೋಕ’ ಎಂಬ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದ ಇವರು ಇನ್ನೊಬ್ಬರೊಂದಿಗೆ ಹೋಲಿಕೆ ಹಾಗೂ ನಿರೀಕ್ಷೆಗಳು ನಮ್ಮೊಳಗೆ ಗೊಂದಲ ತರುತ್ತವೆ. ದೇಹ ಶುದ್ಧಿ ರಕ್ತ ಶುದ್ಧಿಯಂತೆ ಇಂದಿನ ವೇಗದ ಬದುಕಲ್ಲಿ ಗೊಂದಲದ ಮನಶುದ್ಧಿಗೂ ಹೆಚ್ಚು ಪ್ರಾಮುಖ್ಯತೆ ನೀಡುವ ಅಗತ್ಯ ಇದೆ. ಮನಸ್ಸು ನಿರಾಳ ಹೊಂದಿದಷ್ಟು ಜೀವನೋತ್ಸಾಹ ಹೆಚ್ಚುತ್ತದೆ. ಅದಕ್ಕಾಗಿ ನಮ್ಮ ಹಿರಿಯರು ಧಾರ್ಮಿಕ ಸಾಂಸ್ಕೃತಿಕ ಆಚರಣೆಯನ್ನು ನೆಚ್ಚಿಕೊಂಡಿದ್ದರು. ನಾವೂ ಅದನ್ನು ಹೆಚ್ಚೆಚ್ಚು ಅನುಸರಿಸ ಬೇಕಿದೆ ಎಂದರು.
ರೋಟರಿ ಅಸಿಸ್ಟಂಟ್ ಗವರ್ನರ್ ಕೊಡ್ಲಾಡಿ ಸುಭಾಸ್ ಚಂದ್ರ ಶೆಟ್ಟಿ ಅತಿಥಿ ಉಪನ್ಯಾಸಕರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಿದರು. ಸಭೆಯ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಶೇಡಿಮನೆ ಗೋಪಾಲ ಶೆಟ್ಟಿ ವಹಿಸಿದ್ದರು. ಕಾರ್ಯದರ್ಶಿ ಪ್ರಕಾಶ್ ಚಂದ್ರ ಶೆಟ್ಟಿ ವಂದಿಸಿದರು.