ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಆರ್ಯಭಟ ಕಲ್ಚರಲ್ ಆರ್ಗನೈಜೇಷನ್ ನೀಡಲಾಗುತ್ತಿರುವ 2015ನೇ ಸಾಲಿನ ಪ್ರತಿಷ್ಠಿತ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಬೈಂದೂರು ಮಯ್ಯಾಡಿಯ ಬಾಲಕೃಷ್ಣ ಮದ್ದೋಡಿ ಅವರಿಗೆ ಲಭಿಸಿದೆ. ಪ್ರಸ್ತುತ ಉಡುಪಿಯಲ್ಲಿ ನೆಲೆಸಿರುವ ಅವರ ಸಮಾಜ ಸೇವೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅಪ್ರತಿಮ ಸಾಧನೆಗಾಗಿ ಈ ಪ್ರಶಸ್ತಿ ದೊರೆತಿದೆ.
ಮಣಿಪಾಲದ ಎಂ.ಐ.ಟಿಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತಿರುವ ರೊಟೇರಿಯನ್ ಪಿಹೆಚ್‌ಎಫ್ ಬಾಲಕೃಷ್ಣ ಮದ್ದೋಡಿ ಅವರು ರೊಟರಿ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಸ್ತುತ ರೋಟರಿ ಜಿಲ್ಲೆ 3180 ಇದರ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತಮ ಸಂಘಟಕ, ವಾಗ್ಮಿ, ಸಮಾಜ ಸೇವಕ, ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಶೇಷ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ. ಮೇ 18ರ ಸಾಯಂಕಾಲ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮದ್ದೋಡಿಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.