ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುತ್ತೇವೆಂದು ಹೇಳಿಕೊಂಡು ಚುನಾವಣೆ ಎದುರಿಸುತ್ತಿದ್ದ ಬಿಜೆಪಿ ಪಕ್ಷವೀಗ ರಾಮಮಂದಿರವನ್ನು ಮರೆತುಬಿಟ್ಟಿದೆ. ರಾಮ ಈಗ ಬಿಜೆಪಿ ಪಕ್ಷದಲ್ಲಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
ಅವರು ಮರವಂತೆ ಸಾಧನಾ ಸಭಾಭವನದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ರಾಮಮಂದಿರ ಕಟ್ಟುತ್ತೇನೆಂದವರು ಈಗ ಮರೆತಿರುವುದ್ಯಾಕೆ ಎಂದು ಪ್ರಶ್ನಿಸಿದ ಅವರು ಇತರ ಪಕ್ಷದವರ್ಯಾರೂ ಹಿಂದುಗಳಲ್ಲ ಎಂದು ಬಿಂಬಿಸುತ್ತಿದ್ದ ಬಿಜೆಪಿ ಹಿಂದುತ್ವವನ್ನು ಬಿಟ್ಟುಬಿಟ್ಟಿದೆ ಎಂದರು. ನಾವೆಲ್ಲ ಹಿಂದುಗಳೇ ಆದರೂ ಎಲ್ಲಾ ಧರ್ಮದವರೊಂದಿಗೆ ಸೌಹಾರ್ದಯುತವಾಗಿ ಬದುಕುತ್ತಿದ್ದೇವೆ. ಧರ್ಮದ ಹೆಸರಿದಲ್ಲಿ ದ್ವೇಷ ಬಿತ್ತುವ ಕೆಲಸ ಮಾಡಿಲ್ಲ ಎಂದರು.
ಬಿಜೆಪಿ 4,500 ಕೋಟಿ ಉದ್ಯಮಿಗಳ ಸಾಲವನ್ನು ಮನ್ನ ಮಾಡಿದೆ. ಆದರೆ ಕುಮಾರಸ್ವಾಮಿ ಅವರು ಕರ್ನಾಟಕದ ರೈತರ ಸಾಲ ಮನ್ನ ಮಾಡಿದರೆ ಇದು ಪಾಪದ ಕೆಲಸ ಎಂದು ಪ್ರಧಾನಿ ಲೇವಡಿ ಮಾಡುತ್ತಾರೆ. ಅವರದ್ದು ಭಾರತೀಯ ಜನತಾ ಪಾರ್ಟಿಯೂ ಅಥವಾ ಬ್ಯುಸಿನೆಸ್ ಜನತಾ ಪಾರ್ಟಿಯೋ ಎಂದು ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಮೋದಿಯವರ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ ಜೆಡಿಎಸ್ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅಭವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಓಟು ಕೇಳುತ್ತಿದ್ದಾರೆ. ಕೋಮು ಗಲಭೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದ ಬಿಜೆಪಿ ಈಗ ಕುಮಾರಸ್ವಾಮಿ ಸರಕಾರ ಬಂದ ಮೇಲೆ ಹೆದರುತ್ತಿದೆ ಎಂದರು.
ಯಡಿಯೂರಪ್ಪ, ರಾಘವೇಂದ್ರ ಅವರು ಸಂಸದರಾದ ಬಳಿಕ ಎಷ್ಟು ಭಾರಿ ಕ್ಷೇತ್ರಕ್ಕೆ ಬಂದಿದ್ದಾರೆಂದು ಹೇಳಲಿ. ಕರಾವಳಿ, ಮಲೆನಾಡು ಭಾಗದ ಜನರ ಸಮಸ್ಯೆಗಳನ್ನು ಅವರು ಮರೆತಿದ್ದಾರೆ. ಮರಳು, ಮೀನುಗಾರಿಕೆಗೆ ಸೀಮೆಎಣ್ಣೆ, ಕಸ್ತೂರಿ ರಂಗನ್ ವರದಿ, ಅಡಿಕೆ, ಅಕ್ರಮ ಸಕ್ರಮ ಭೂಮಿ ಮೊದಲಾದವುಗಳ ಬಗೆಗೆ ಅವರು ಈವರೆಗೂ ಸ್ಪಂದಿಸಿಲ್ಲ. ತನ್ನನ್ನು ಸಂಸತ್ತಿಗೆ ಆರಿಸಿದರೆ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಮೊದಲು ಗಮನಹರಿಸುತ್ತೇನೆ. ಬಿಜೆಪಿ ವಿರುದ್ಧ ಅಲೆ ಕರಾವಳಿಯಲ್ಲಿಯೂ ಇದ್ದು, ಹೆಚ್ಚಿನ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಕೆ. ಗೋಪಾಲ ಪೂಜಾರಿ, ಮಂಜುನಾಥ ಭಂಡಾರಿ ಎಸ್. ರಾಜು ಪೂಜಾರಿ, ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಎಸ್. ಮದನ್ ಕುಮಾರ್ ಉಪ್ಪುಂದ, ಪ್ರದೀಪ್ಕುಮಾರ್ ಶೆಟ್ಟಿ, ಗೌರಿ ದೇವಾಡಿಗ, ವಾಸುದೇವ ಯಡಿಯಾಳ, ಮಾಣಿಗೋಪಾಲ್, ನಾಗರಾಜ ಗಾಣಿಗ ಬಂಕೇಶ್ವರ್, ಮೋಹನ ಪೂಜಾರಿ, ವಾಸುದೇವ ಪೂಜಾರಿ, ಶೇಖರ ಪೂಜಾರಿ, ಜೆಡಿಎಸ್ ಮುಖಂಡರಾದ ಯು. ಸಂದೇಶ್ ಭಟ್, ರವಿ ಶೆಟ್ಟಿ ಮೊದಲಾದವರು ಇದ್ದರು.
Video