ಕುಂದಾಪ್ರ ಡಾಟ್ ಕಾಂ ಸುದ್ದಿ,
ಬೈಂದೂರು, ಎ.4: ರಾಜ್ಯದಲ್ಲಿ ಮೈತ್ರಿ ಸರಕಾರ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರೇ ಬಯಲಿಗೆಳೆಯಲಿ. ಸುಮ್ಮನೆ ಬಾಯಿ ಚಲಪಕ್ಕೆ ಮಾತನಾಡುವುದಲ್ಲ ಎಂದು ಸಿಎಂ ಹೆಚ್. ಡಿ ಕುಮಾರಸ್ವಾಮಿ ಬೈಂದೂರಿನಲ್ಲಿ ಉಡುಪಿ ಚಿಕ್ಕಮಂಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಬೈಂದೂರಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು.
ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿರುವುದು ವಂಶ ಪಾರಂಪರ್ಯವನ್ನು ಮುಂದುವರಿಸಲು ಹಾಗೂ ಭ್ರಷ್ಟಾಚಾರ ನಡೆಸಲು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ ಬಿಜೆಪಿಯಂತೆ ಈ ಮಟ್ಟಿಗೆ ಕೀಳು ಮಟ್ಟದ ರಾಜಕೀಯ ಯಾರೂ ಮಾಡಿರಲಿಲ್ಲ. ಅಧಿಕಾರ ಹಿಡಿಯುವುದೆಂದರೆ ಆಳ್ವಿಕೆ ಮಾಡುವುದಕ್ಕಷ್ಟೇ ಅಲ್ಲ, ಒಳ್ಳೆಯ ಕೆಲಸಗಳ ಮೂಲಕ ರಾಜ್ಯದ ಜನರಿಗೆ ಒಳ್ಳೆಯದನ್ನು ಮಾಡುವ ಉದ್ದೇಶ ಇರುತ್ತದೆ. ಅಧಿಕಾರದಲ್ಲಿದ್ದಾಗಲೆಲ್ಲಾ ಹಾಗೆ ಮಾಡಿದ್ದೇವೆ ಎಂಬ ಭರವಸೆ ಇದೆ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಹುಮತದಿಂದ ಗೆಲ್ಲುತ್ತೇವೆ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿಯೂ ಹೆಚ್ಚಿನ ಮತಗಳನ್ನು ಪಡೆದುಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಒಟ್ಟು 22ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.
ಜೆಡಿಎಸ್ ಮುಖಂಡರಾದ ನಿತೀನ್ ಶೆಟ್ಟಿ, ರವಿ ಶೆಟ್ಟಿ, ಹುಸೇನ್ ಹೈಕಾಡಿ, ಮನ್ಸೂರ್ ಮರವಂತೆ, ಜಯಶೀಲ ಶೆಟ್ಟಿ, ಸುಬ್ರಹ್ಮಣ್ಯ ಬಿಜೂರು ಮೊದಲಾದವರು ಇದ್ದರು.