ಕರಿಬೇವು, ಕೊತ್ತಂಬರಿ ಸೊಪ್ಪುಗಳನ್ನು ಧೀರ್ಘಕಾಲ ಫ್ರೆಶ್ ಆಗಿರಿಸಲು ಸಿಂಪಲ್ ಟಿಪ್ಸ್

ನಮ್ಮ ಭಾರತೀಯ ಆಹಾರ ಪದ್ದತಿಯಲ್ಲಿ ಕರಿಬೇವು ಮತ್ತು ಕೊತ್ತಂಬರಿ ಸೊಪ್ಪಿಗೆ ವಿಶೇಷ ಸ್ಥಾನವಿದೆ. ಹಾಗೆಯೇ ಇವುಗಳು ಔಷಧಿಯ ಗುಣಗಳನ್ನು ಹೊಂದಿದೆ.

ಈಗಿನ ವರ್ತಮಾನದ ಕಾಲದಲ್ಲಿ ಅಡುಗೆಯಲ್ಲಿ ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪು ಇರಲೇಬೇಕು. ಸಾರು, ಪಲ್ಯ ಇವುಗಳಿಗೆ ಕೊತ್ತಂಬರಿ ಸೊಪ್ಪು, ಕರಿ ಬೇವಿನ ಎಲೆ ಇಲ್ಲ ಅಂದರೆ ಅಡುಗೆ ಸಂಪೂರ್ಣವಾದಂತೆ ಅನಿಸುವುದಿಲ್ಲ.

ಮನೆಯಲ್ಲಿಯೇ ಕರಿಬೇವು, ಕೊತ್ತಂಬರಿ ಗಿಡ ಇದ್ದರೆ ಅಡುಗೆಗೆ ಬೇಕಾಗಿರುವುದನ್ನು ಕಿತ್ತು ತಾಜಾ ಬಳಸಬಹುದು. ಇಲ್ಲಾ ಅಂದರೆ ಅಂಗಡಿಯಿಂದ ತಂದು ಫ್ರಿಡ್ಜ್‌ನಲ್ಲಿಟ್ಟು ಬಳಸುತ್ತೇವೆ. ಆದರೆ ಫ್ರಿಡ್ಜ್ನಲ್ಲಿಟ್ಟರೂ ಅದನ್ನು ಸರಿಯಾದ ರೀತಿಯಲ್ಲಿ ಇಡದಿದ್ದರೆ ಅದರ ತಾಜಾತನ ಹೋಗುತ್ತದೆ. ಕೊತ್ತಂಬರಿ ಹಾಗೂ ಕರಿಬೇವು ಒಂದೆರಡು ತಿಂಗಳವರೆಗೆ ಒಣಗದಂತೆ ಇರಿಸಲು ಕೆಲವೊಂದು ಸಲಹೆ ನೀಡಲಾಗಿದೆ.

ಕರಿಬೇವು ಸಂಗ್ರಹಿಸಿಡುವ ವಿಧಾನ:

  • ಎಲೆಯನ್ನು ಅದರ ದಂಟಿನಿಂದ ತೆಗೆದು ಸ್ವಚ್ಛಗೊಳಿಸಿ ಸ್ವಚ್ಛ ಬಟ್ಟೆಯಲ್ಲಿ ಹಾಕಿ ಒತ್ತಿ, ಆಗ ನೀರು ಹೀರಿಕೊಳ್ಳುವುದು. ನಂತರ ಎಲೆಯನ್ನು ಅಗಲವಾದ ಪ್ಲೇಟ್ನಲ್ಲಿ ಹಾಕಿ ಎರಡರಿಂದ-ಮೂರು ದಿನ ಬಿಸಿಲಿನಲ್ಲಿ ಒಣಗಿಸಿ. ಅದು ಒಣಗಿದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
  • ಕರಿಬೇವಿನ ಎಲೆಯನ್ನು ಅದರ ದಂಟಿನಿಂದ ಬಿಡಿಸಬೇಕು, ನಂತರ ಅದನ್ನು ತೊಳೆದು ಒಂದು ಸ್ವಚ್ಛ ಕಾಟನ್ ಬಟ್ಟೆಯಲ್ಲಿ ಹರಡಿ. ಅದರ ನೀರು ಹೋದ ಮೇಲೆ , ಒಂದು ತವಾದಲ್ಲಿ ಹಾಕಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಫ್ರೈ ಮಾಡಿ. ಅದರ ಹಸಿರು ಬಣ್ಣ ಹಾಗೆಯೇ ಇರುವಂತೆ ನೋಡಿಕೊಳ್ಳಿ, ನಂತರ ಅದನ್ನು ಪ್ಲೇಟ್ನಲ್ಲಿ ಹಾಕಿಡಿ. ನಂತರ ಬಿಸಿ ಆರಿದ ಮೇಲೆ ಡಬ್ಬದಲ್ಲಿ ತುಂಬಿಡಿ. ಕರಿಬೇವನ್ನು ಪುಡಿ ಮಾಡಿ ಇಡುವುದು ಇನ್ನು ಬಿಸಿಲಿನಲ್ಲಿ ಒಣಗಿಸಿದ ಅಥವಾ ಫ್ರೈ ಮಾಡಿಟ್ಟ ಸೊಪ್ಪನ್ನು ಕೆಲವರು ಪೌಡರ್ ಮಾಡಿ, ಗಾಳಿಯಾಡದ ಡಬ್ಬದಲ್ಲಿ ಹಾಕಿಡುತ್ತಾರೆ. ಹೀಗೆ ಇಟ್ಟು ಕೂಡ ವಾರಗಟ್ಟಲೆ ಬಳಿಸಬಹುದು.

ಕೊತ್ತಂಬರಿ ಸೊಪ್ಪನ್ನು ತಾಜಾವಾಗಿ ಇಡುವ ವಿಧಾನ:

  • ನೀವು ಕೊತ್ತಂಬರಿ ಸೊಪ್ಪು ತಾಜಾತನದಿಂದ ಇರಬೇಕೆಂದರೆ, ಕೊತ್ತಂಬರಿ ಸೊಪ್ಪಿನ ಬೇರು ಹಾಗೂ ಮಣ್ಣಿರುವ ಭಾಗ ಕತ್ತರಿಸಿ ತೆಗೆಯಿರಿ. ಈಗ ಒಂದು ಪಾತ್ರೆಗೆ ನೀರು ಹಾಕಿ ಅದರಲ್ಲಿ ಒಂದು ಚಮಚ ಅರಿಶಿಣ ಪುಡಿ ಹಾಕಿಡಿ. ಈಗ ಕೊತ್ತಂಬರಿಯನ್ನು ಅದರಲ್ಲಿ 30 ನಿಮಿಷ ನೆನೆಸಿಡಿ, ನಂತರ ಅದನ್ನು ಪೇಪರ್ ಟವಲ್ನಿಂದ ಒತ್ತಿ ಒರೆಸಿ. ಅದರಲ್ಲಿ ನೀರಿನಂಶ ಉಳಿಯಬಾರದು, ನಂತರ ಒಂದು ಡಬ್ಬ ತೆಗೆದು ಅದರಲ್ಲಿ ಪೇಪರ್ ಟವಲ್ ಹಾಕಿ, ಅದರೊಳಗೆ ಸೊಪ್ಪು ಹಾಕಿ ಅದರ ಮೇಲೆ ಮತ್ತೊಂದು ಪೇಪರ್ ಟವಲ್ ಇಟ್ಟು ಡಬ್ಬದ ಬಾಯಿ ಮುಚ್ಚಿ. ಸೊಪ್ಪಿನಲ್ಲಿ ಒಂದಿಷ್ಟು ನೀರಿನಂಶ ಇಲ್ಲದಂತೆ ಎಚ್ಚರವಹಿಸಿ, ಹೀಗೆ ಸಂಗ್ರಹಿಸಿಟ್ಟರೆ ಮೂರು ವಾರಗಳ ಕಾಲ ಸೊಪ್ಪು ಹಾಗೆಯೇ ತಾಜತನ ಕಾಪಾಡಿಕೊಳ್ಳುತ್ತದೆ.
  • ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆಯಿರಿ, ನಂತರ ಅದರ ನೀರು ಸಂಪೂರ್ಣ ಆರಲು ಬಿಡಿ. ಈಗ ಅವುಗಳನ್ನು 3-4 ಭಾಗಗಳನ್ನಾಗಿ ವಿಂಗಡಿಸಿ. ಈಗ ಪೇಪರ್ ಟವಲ್ ತೆಗೆದು ಒಂದು ಭಾಗವನ್ನು ಸುತ್ತಿಡಿ. ಎಲ್ಲಾ ಭಾಗಗಳನ್ನು ಹೀಗೆ ಸುತ್ತಿದ ಬಳಿಕ ಜಿಪ್ ಲಾಕ್ ಬ್ಯಾಗ್ನಲ್ಲಿ ಹಾಕಿಡಿ. ಹೀಗೆ ಇಡುವುದರಿಂದ ಸುಮಾರು ಎರಡು ವಾರಗಳ ಕಾಲ ಕೊತ್ತಂಬರಿ ಸೊಪ್ಪು ತಾಜಾತನದಿಂದ ಕೂಡಿರುತ್ತದೆ.

ಕುಂದಾಪ್ರ ಡಾಟ್ ಕಾಂ ಲೇಖನ

Leave a Reply

Your email address will not be published. Required fields are marked *

eighteen − 6 =