ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೂರಕ್ಕೆ ಇಪ್ಪತ್ತು ಬಾಲಕರಲ್ಲಿ ಮಧುಮೇಹ. ಆರು ವರ್ಷದ ಬಾಲೆಯಲ್ಲೂ ಋತು ಚಕ್ರ ಬದಲು. ನೂರಕ್ಕೆ ನಾಲ್ಕು ಯುವತಿಯರ ಮೊಗದಲ್ಲಿ ಕೂದಲು. ಐವತ್ತು ವರ್ಷಕ್ಕೆ ನರ ದೌರ್ಬಲ್ಯ. ಶೇ.80ರಷ್ಟು ಯವಕರಲ್ಲಿ ಸಂತಾನೋತ್ಪತ್ತಿ ಕ್ಷೀಣ. ಇದಕ್ಕೆ ಕಾರಣವೇನು ಗೊತ್ತಾ? ಹಾಲಿನ ಉತ್ಪಾದನೆ ವಾಣಿಜ್ಯೀಕರಣ. ಬದಲಾದ ಅಹಾರ ಪದಾರ್ಥ. ಅತಿಯಾದ ರಾಸಾಯನಿಕ ಬಳಕೆ. ಸಹಜತೆ ಬದಲು ಕೃತಕತೆ! ಹೀಗೆ ಬದಲಾದ ಆಹಾರ ಪದಾರ್ಥಗಳಿಂದ ಏನೆಲ್ಲಾ ಆಗುತ್ತದೆ ಎಂಬುವುದನ್ನು ಆಹಾರ ವಿಜ್ಞಾನಿ ಡಾ.ಖಾದರ್ ಮೈಸೂರು ಅವರು ತೆರೆದಿಟ್ಟರು.
ಕೋಟೇಶ್ವರ ವಕ್ವಾಡಿ ಗುರುಕುಲ ವಿದ್ಯಾ ಸಂಸ್ಥೆ ಶಾಲಾ ವಠಾರದಲ್ಲಿ ಭಾನುವಾರ ಸಂಜೆ ಆಯೋಜಿಸಿದ ಪ್ರಕೃತಿ ನೀಡಿದ ಸೌಭಾಗ್ಯ ‘ಸಿರಿಧಾನ್ಯ’ ಮಹತ್ವದ ಬಗ್ಗೆ ಮಾತನಾಡಿ, ಕೃತಕ ಹಾಲು ಸಂಪೂರ್ಣ ಆಹಾರವೇ ಅಲ್ಲ. ಅದು ಹಾಲಾಹಲ ಸೃಷ್ಟಿಸುತ್ತದೆ. ಮೂರು ವರ್ಷದ ನಂತರ ಮಾನವ ದೇಹ ಹಾಲು ಜೀರ್ಣಸಿಕೊಳ್ಳುವ ಪ್ರಕ್ರಿಯೆ ನಿಲ್ಲಿಸುತ್ತದೆ. ಕೃತಕ ಹಾಲು ಸಂಪೂರ್ಣ ಆಹಾರ ಹೇಗಾಗುತ್ತದೆ? ತಾಯಿ ಹಾಲೇ ಸಂಪೂರ್ಣ ಆಹಾರ ಎಂದು ವ್ಯಾಖ್ಯಾನಿಸಿದರು.
ದೇಶೀ ಪದಾರ್ಥಗಳು ಏನೂ ಇಲ್ಲಾ ಎಂದು ಕೃತಕ ಆಹಾರ ತಯಾರಕರು ನಂಬಿಸುವ ಮೂಲಕ ಮಾನವ ದೇಹ ರೋಗಗಳ ಗಡಣವಾಗಿ ಬದಲಾಯಿಸಿದ್ದಾರೆ. ಸ್ವಾಭಾವಿಕ ಆಹಾರ ಪದ್ದತಿಗೆ ಅಂಕುಶ ಹಾಕುವ ಕೆಲಸ ಮಾಡಲಾಗುತ್ತಿದೆ. ಕೊಬ್ಬರಿ ಎಣ್ಣೆ ಹಾಗೂ ಕಾಯಿ ಹಾಲಿನಲ್ಲಿ ಥೈರಾಯಿಡ್ ಗಣಪಡಿಸುವ ಅಂಶವಿದ್ದರೂ, ಕೊಬ್ಬರಿ ಕೊಬ್ಬು ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಥೈರಾಯ್ಡ್ಗೆ ಕೊಬ್ಬರ ಹಾಲು, ಎಣ್ಣೆ ಮೂಲಕ ಆರು ತಿಂಗಳಲ್ಲಿ ಗುಣ ಪಡಿಸಲಾಗುತ್ತದೆ ಎಂದು ವಿವರಿಸಿದರು.
ಕಳೆದ 40 ವರ್ಷದ ಈಚೆ ವೈಜ್ಞಾನಿಕ ಹೆಸರಲ್ಲಿ ಪ್ರಕೃತಿ ಸಹಜ ಆಹಾರ ಪದ್ದತಿ ಬದಲಾಯಿಸಲಾಗುತ್ತಿದೆ. ಬದಲಾದ ಆಹಾರ ಪದ್ದತಿ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಥೈರಾಯ್ಡ್, ಮಹಿಳೆಯರಿಗೆ ಥರಹೇವಾರಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ದೇಶೀಯ ಧಾನ್ಯಗಳಲ್ಲಿ ಬಳಕೆ ಬದಲು ಅತೀ ಹೆಚ್ಚು ಭತ್ತ, ಗೋಧಿ ಬಳಕೆಯೇ ಕಾಯಿಲೆ ಮೂಲ ಎಂದು ಎಚ್ಚರಿಸಿರು. ನ್ಯೂಡಲ್ಸ್, ಸಾಪ್ಟ್ ಡ್ರಿಂಕ್ಸ್ ಮೂಲಕ ಮಕ್ಕಳಿಗೆ ಇನ್ಸುಲಿನ್ ಉತ್ಪಾನೆ ನಿಲ್ಲಿಸುವ ಮದುಮೇಹಿ ರೋಗ ಆಹ್ವಾನಿಸುವ ಚುಚ್ಚುಮದ್ದು ನೀಡುತ್ತಿದ್ದೇವೆ. ಮಂಗಳ ಗ್ರಹದಲ್ಲಿ ಮನೆ ಕಟ್ಟಿ ವಾಸ ಮಾಡುವಷ್ಟು ವಿಜ್ಞಾನ ಮುಂದುವರಿದ್ದರೂ, ಹೆಚ್ಚುತ್ತಿರುವ ಅನಾರೋಗ್ಯಕ್ಕೆ ಕಾರಣ ಏನು ಎನ್ನೋದದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಸಹಜತೆಗೆ ದೂರವಾಗಿ ಅಸಹಜತೆ ನಂಬಿ ಬದುಕುತ್ತಿರುವುದೇ ಈ ಎಲ್ಲಾ ದುರಂತಕ್ಕೆ ಕಾರಣ. ದೇಶೀಯ ದ್ವದಳ ಧಾನ್ಯದಷ್ಟು ಆರೋಗ್ಯ ವರ್ಧಕ ಮತ್ತಾವುದು ಇಲ್ಲಾ. ಅದಕ್ಕಾಗಿಯೇ ಧನ್ಯಗಳಿಗೆ ಸಿರಿ ಧಾನ್ಯ ಎಂಬ ಹೆಸರು ಬಂದಿದೆ ಎಂದು ಹೇಳಿದರು.
ಔಷಧೀಯ ಕಂಪನಿ, ಆಸ್ಪತ್ರೆಗಳು ಹೆಚ್ಚುತ್ತಿದೆ. ಮತ್ತೊಂದು ಕಡೆ ಮಾನವ ಕೂರಲಾಗದೆ, ಏಳಲಾಗದ ಸ್ಥಿತಿಗೆ ಬಂದಿದ್ದು, ಬೆಡ್ ರೂಮಿಗೆ ಶೌಚ ಬಂದಿದೆ! ಅವೈಜ್ಞಾನಿಕ ಅಹಾರ ಪದ್ದತಿ ಸರಿಯೆಂದು ಬೋಧಿಸಲಾಗುತ್ತಿದೆ ಎಂದರು. ಭಾರತದಲ್ಲಿ 100ಕ್ಕೆ 28 ಜನ ಮಧುಮೇಹಿ, 60ರಷ್ಟು ಜನರಿಗೆ ರಕ್ತದೊತ್ತಡ, 20ರಷ್ಟು ಜನರಿಗೆ ಥೈರಾಯ್ಡ್ ಸಮಸ್ಯೆ, ಶೇ.26ರಷ್ಟು ಯುವಕರಲ್ಲಿ ವೀರ್ಯಾಣು ನಷ್ಟ, 100ರಲ್ಲಿ 6 ಜನಕ್ಕೆ ಪಾರ್ಶ್ವವಾಯು, 10ರಷ್ಟು ಜನರಿಗೆ ಫಿಟ್ಸ್ ಕಾಣಿಸಿಕೊಳ್ಳುತ್ತಿದ್ದು, ಪ್ರಕೃತಿ ನೀಡಿದ ಆಹಾರ ಪದಾರ್ಥಗಳ ಬಳಸದೇ ಇರುವುದು ಇದಕ್ಕೆ ಕಾರಣ. ಮನುಷ್ಯರು ಕಾಯಿಲೆಯಿಂದ ಹೈರಾಣಾದರೆ ಔಷಧಿ ಕಂಪನಿಗಳ ಲಾಭಾಂಶ ಜ್ವರದಂತೆ ಏರುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ಕಾಫಿ, ಟೀ, ಹಾಲು ಸಾಪ್ಟ್ ಡ್ರಿಂಕ್ಸ್ ಧಾಂಗುಡಿಗೆ ಕಾವೇರಿ ಬಸವಳಿದಿದ್ದು, ಕಾಡು ಕಡಿದು ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದೆ. ಕಬ್ಬುಬೆಳೆಗಾಗಿಯೇ ಕರ್ನಾಟಕ ಕಾವೇರಿ ಜಗಳವಾಡುತ್ತಿದೆ. ಹೀಗೆ ವಾಣಜ್ಯ ಬೆಳಗಳ ಬೆನ್ನಿಗೆ ಬಿದ್ದರೆ ಕಾವೇರಿ ಹರಿವು ನಿಲ್ಲಿಸುತ್ತಾಳೆ. ಕಾವೇರಿ ಮತ್ತೆ ಹರಿಯುವಂತೆ ಮಾಡಬೇಕಿದ್ದರೆ ಎಲ್ಲರೂ ಹಾಲು, ಕಾಫಿ ಟೀ ಕುಡಿಯೋದು ಬಿಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಪರವಾಗಿ ಸಂಸ್ಥಾಪಕ ಬಿ.ಅಪ್ಪಣ್ಣ ಹೆಗ್ಡೆ, ಜಿಂಟಿ ಆಡಳಿತ ಮಂಡಳಿ ನಿರ್ದೇಶಕ ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಎಸ್.ಶೆಟ್ಟಿ ಸಿರಿಧಾನ್ಯಗಳ ಸರದಾರ ಡಾ.ಖಾದರ್ ಅವರ ಸನ್ಮಾನಿಸಿದರು. ಬಾಂಡ್ಯಾ ಎಜುಕೇಶನ್ ಟ್ರಸ್ಟ್ ಜಂಟಿ ಆಡಳಿತ ನಿರ್ದೇಶಕಿ ಅನುಪಮಾ ಎಸ್.ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ಹೆಬ್ಬಾರ್ ನಿರೂಪಿಸಿದರು. ಸಂಗೀತ ಶಿಕ್ಷಕ ರಾಘವೇಂದ್ರ ಪ್ರಾರ್ಥಿಸಿದರು. ಶಿಕ್ಷಕಿ ನಾಗರತ್ನ ಡಾ.ಖಾದರ್ ಪರಿಚಯಿಸಿದರು. ಕುಂದಾಪುರ ಉತ್ತಮ ಹೋಮಿಯೋ ಕ್ಲಿನಿಕ್ ವೈದ್ಯಾಧಿಕಾರಿ ಡಾ.ಉತ್ತಮ ಕುಮಾರ್ ಅತಿಥಿಗಳ ಗೌರವಿಸಿದರು.
ಜೀವನ ಶೈಲಿ ಬದಲಾದ ಕಾಲಘಟ್ಟದಲ್ಲಿ, ಉನ್ನತ ಆರೋಗ್ಯ ಶಿಕ್ಷಣ ಸಿಗುತ್ತಿದ್ದರೂ ಅನಾರೋಗ್ಯ ನಮ್ಮ ಕಣ್ಣಮುಂದೆ ಬಂದು ನಿಲ್ಲುತ್ತಿದೆ. ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಏಕೆ ವಿಫಲರಾಗುತ್ತೇವೆ, ಹಿರಿಯರು ಹೇಳುವಂತೆ ನಮ್ಮ ಆರೋಗ್ಯ ಆಹಾರದಲ್ಲಿ ಅಡಗಿದೆ ಎನ್ನುವ ಮಾತಲ್ಲಿ ನಂಬಿಕೆಯಿಟ್ಟು, ಗುರುಕುಲ ವಿದ್ಯಾಸಂಸ್ಥೆಯಲ್ಲಿ ಔಷಧೀಯ ವನ ಬೆಳೆಸುವ ಮೂಲಕ ತಪ್ಪುತ್ತಿರುವ ಆರೋಗ್ಯ ಹಳಿಗೆ ತರಲು ದಿಟ್ಟ ಹೆಜ್ಜೆ ಇಟ್ಟಿದೆ. ವಿದ್ಯಾಸಂಸ್ಥೆ ದೇಶೀಯ ಆಹಾರ ಬದ್ದತಿ, ಸಿರಿಧಾನ್ಯಗಳು ಹೇಗೆ ಆರೋಗ್ಯ ವರ್ಧಕ, ಎನ್ನುವ ಸಂಗತಿ ಜನಸಾಮನ್ಯರಿಗೂ ಮುಟ್ಟಿಸುವ ಸಲುವಾಗಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಿ, ಶಿಕ್ಷಣ ಜತೆ ಸಾಮಾಜಿಕ ಕೆಲಸಗಳು ನಮ್ಮ ಜವಾಬ್ದಾರಿ ಎನ್ನೋದ ಸಮಾಜಕ್ಕೆ ತೋರಿಸಕೊಡುವ ಕೆಲಸ ಮಾಡಿದೆ. ಮಳೆ ನೀರ ಕೊಯಿಲು, ಇಂಗು ಬಾವಿ, ಹೈನುಗಾರಿಕೆ ಹೀಗೆ ಹತ್ತುಹಲವು ಸಮಾಜ ಮುಖಿ ಕೆಲಸದ ಮೂಲಕ ಜನ ಜಾಗೃತಿ ಮೂಡಿಸುವುದೇ ನಮ್ಮ ಉದ್ದೇಶ. – ಅನುಪಮಾ ಎಸ್.ಶೆಟ್ಟಿ, ಜಂಟಿ ಆಡಳಿತ ನಿರ್ದೇಶಕಿ ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿ, ಕೋಟೇಶ್ವರ