ಕುಂದಾಪುರ ಲಾಕ್‌ಡೌನ್: ವಿರಳ ಜನಸಂಚಾರ, ಗಡಿಗಳಲ್ಲಿ ಹೆಚ್ಚಿದ ತಪಾಸಣೆ, ಅತಂತ್ರರಾದ ಕೂಲಿ ಕಾರ್ಮಿಕರು

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಕೊರೋನಾ ಹರಡುವಿಕೆ ತಡೆಗಟ್ಟಲು ನಿಟ್ಟಿನಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಆದೇಶವನ್ನು ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಬಿಗುಗೊಳಿಸಲಾಗಿದ್ದು, ಶನಿವಾರ ಜಿಲ್ಲೆಯ ಗಡಿಗಳಲ್ಲಿ ಪೊಲೀಸರು ಹೆಚ್ಚಿನ ಬಂದೋವಸ್ತ್, ಅಲ್ಲಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಎಲ್ಲೆಡೆ ಜನಸಂಚಾರ ವಿರಳವಾಗಿದ್ದು, ದಿನಸಿ, ಆಸ್ಪತ್ರೆ, ಮೆಡಿಕಲ್‌ಗಳಿಗೆ ತೆರಳುವವರು ಮಾತ್ರ ಹೊರಬರುತ್ತಿದ್ದಾರೆ.

ವಿರಳ ಜನಸಂಚಾರ:
ಲಾಕ್‌ಡೌನ್ ಆರಂಭದ ದಿನಗಳಿಗೆ ಹೋಲಿಸಿದರೆ ಶನಿವಾರ ಎಲ್ಲೆಡೆ ಜನಸಂಚಾರ ವಿರಳವಾಗಿತ್ತು. ಕೆಲವು ದಿನಸಿ ಅಂಗಡಿ ಹಾಗೂ ಮೆಡಿಕಲ್‌ಗಳ ಮುಂದೆ ಜನರಿದ್ದು, ಸಾಮಾಜಿಕ ಅಂತರವನ್ನು ಪಾಲಿಸುತ್ತಿದ್ದರು. ಬೈಂದೂರು ತಾಲೂಕಿನ ಯಡ್ತರೆ, ಉಪ್ಪುಂದ, ಮರವಂತೆ, ಕೊಲ್ಲೂರು, ಜಡ್ಕಲ್, ಕುಂದಾಪುರ ತಾಲೂಕಿನ ವಂಡ್ಸೆ,ಗಂಗೊಳ್ಳಿ, ತ್ರಾಸಿ, ನೆರಳಕಟ್ಟೆ, ಅಂಪಾರು, ಬಸ್ರೂರು, ಕೋಟೇಶ್ವರದ ಪ್ರಮುಖ ಬೀದಿಗಳಲ್ಲಿ ಹಾಗೂ ಕುಂದಾಪುರ ನಗರ ಭಾಗದಲ್ಲಿ ಜನ ಸಂಚಾರ ವಿರಳವಾಗಿತ್ತು. ಅಂಪಾರು, ಕುಂದಾಪುರ ಶಾಸ್ತ್ರೀ ಸರ್ಕಲ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಜನರನ್ನು ತಡೆದು ವಿಚಾರಣೆ ನಡೆಸಿ ಕಳುಹಿಸುತ್ತಿದ್ದುದು ಕಂಡುಬಂತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಹೊರಜಿಲ್ಲೆಗಳಿಗೆ ತೆರೆಳುವುದು ಸಂಪೂರ್ಣ ಬಂದ್:
ಕುಂದಾಪುರ ತಾಲೂಕಿನ ಗಡಿ ಭಾಗಗಳಾದ ಹೊಸಂಗಡಿ ಹಾಗೂ ಬೈಂದೂರು ತಾಲೂಕಿನ ಗಡಿ ಭಾಗವಾದ ಶಿರೂರು ಹಾಗೂ ಕೊಲ್ಲೂರು ಸಮೀಪ ಪಕ್ಕದ ಜಿಲ್ಲೆಗಳಿಗೆ ಪ್ರಯಾಣ ಬೆಳೆಸುವವರಿಗೆ ಪೊಲೀಸರು ಹಿಂದಕ್ಕೆ ಕಳುಹಿಸುತ್ತಿದ್ದು, ಸರಕು ವಾಹನ ಹೊರತು ಪಡಿಸಿ ಅಂತರ್ಜಿಲ್ಲಾ ಸಂಪರ್ಕ ಸಂಪೂರ್ಣ ಬಂದ್ ಆಗಿದೆ.

ಹೊಸಂಗಡಿ ಗಡಿಯಲ್ಲಿ ಒತ್ತಡ ತಗ್ಗಿಸಲು ಅಂಪಾರಿನಲ್ಲಿ ತಾತ್ಕಾಲಿಕ ಚೆಕ್‌ಪೋಸ್ಟ್ ತೆರೆಯಲಾಗಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯ ಪಿಎಸೈ ಶ್ರೀಧರ್ ನಾಯ್ಕ್ ಅವರ ನೇತೃತ್ವದಲ್ಲಿ ಬಂದೋವಸ್ತ್ ಮಾಡಲಾಗುತ್ತಿದ್ದು, ಸೂಕ್ತ ಕಾರಣವಿಲ್ಲದೇ ತೆರಳುವವರನ್ನು ಹಿಂದಕ್ಕೆ ಕಳುಹಿಸಲಾಗುತ್ತಿದೆ.

ಊರಿಗೆ ತೆರಳಲಾಗದೇ ಅತಂತ್ರರಾದ ಕೂಲಿ ಕಾರ್ಮಿಕರು, ಸ್ಪಂದಿಸಿದ ಪೊಲೀಸರು:
ತಮ್ಮ ತಮ್ಮ ಊರುಗಳಿಗೆಂದು ತೆರಳಲೆಂದು ಉಡುಪಿಯಿಂದ ಬಂದಿದ ಕೂಲಿ ಕಾರ್ಮಿಕರನ್ನು ಶಿರೂರು ಗಡಿಯಲ್ಲಿ ತಡೆಹಿಡಿಯಲಾಯಿತು. ಉತ್ತರಕನ್ನಡ ಜಿಲ್ಲಾಡಳಿತ ಇತರ ಜಿಲ್ಲೆಗಳ ಸಂಪರ್ಕ ಕಡಿತಗೊಳಿಸಿರುವುದರಿಂದ ಕೂಲಿ ಕಾರ್ಮಿಕರ ವಾಹನಗಳನ್ನು ತೆರಳಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಹಾಗಾಗಿಯೇ ದ್ವಿಚಕ್ರ ವಾಹನ ಹಾಗೂ ವಿವಿಧ ಟೆಂಪೊಗಳಲ್ಲಿ ಆಗಮಿಸಿದ್ದು ಸುಮಾರು 1,200ಕ್ಕೂ ಅಧಿಕ ಕೂಲಿ ಕಾರ್ಮಿಕರನ್ನು ಮರಳಿ ಉಡುಪಿಗೆ ಕಳುಹಿಸುವುದು ಸವಾಲಾಯಿತು. ಅವರನ್ನು ವಿವಿಧ ಗುಂಪುಗಳನ್ನಾಡಿ ಮಾಡಿ ಆರೋಗ್ಯ ತಪಾಸಣೆ ನಡೆಸಲಾಯಿತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಇಲ್ಲಿ ಕೆಲಸವಿಲ್ಲ. ಸರಿಯಾದ ಊಟವೂ ಇಲ್ಲ. ನಮ್ಮನ್ನು ಹೇಗಾದರೂ ಊರಿಗೆ ಕಳುಹಿಸಿಕೊಡಿ ಎಂದು ಅವರು ಕೇಳಿಕೊಂಡರೂ ಕಾನೂನು ತೊಡಕಿನಿಂದ ಅದು ಸಾಧ್ಯವಾಗಿರಲಿಲ್ಲ. ರಾತ್ರಿ ಅಲ್ಲಿಯೇ ಉಳಿದಿದ್ದ ಅವರನ್ನು ಬೆಳಿಗ್ಗೆ ದಾನಿಗಳ ನೆರವಿನಿಂದ ಬೈಂದೂರು ಪಿಎಸೈ ಸಂಗೀತಾ ಹಾಗೂ ಪೊಲೀಸರ ತಂಡ ಉಪಹಾರದ ವ್ಯವಸ್ಥೆ ಮಾಡಿಸಿದ್ದರು. ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ರಾತ್ರಿಯಿಡಿ ಸ್ಥಳದಲ್ಲಿದ್ದರು. ಅಂತಿಮವಾಗಿ ಅವರು ಹಾಗೂ ಎಸಿ ರಾಜು ಕೆ. ಅವರು ಕಾರ್ಮಿಕರ ಮನವೊಲಿಸಿ ಮರಳಿ ಉಡುಪಿಗೆ ಕಳುಹಿಸಿಕೊಟ್ಟಿದ್ದಾರೆ. ಕೊಲ್ಲೂರು ಹಾಗೂ ಹೊಸಂಗಡಿ ಮೂಲಕ ವಿವಿಧ ವಾಹನಗಳಲ್ಲಿ ತೆರಳುತ್ತಿದ್ದ ಕೂಲಿ ಕಾರ್ಮಿಕರನ್ನೂ ಮರಳಿ ಉಡುಪಿಗೆ ಕಳುಹಿಸಿಕೊಡಲಾಗಿದೆ. ಜಿಲ್ಲಾಡಳಿತ ಅವರಿಗೆ ಊಟ ವ್ಯವಸ್ಥೆ ಮಾಡಿಸುವ ಭರವಸೆ ನೀಡಿದ ಎನ್ನಲಾಗಿದೆ.

ಈ ನಡುವೆ ಕೆಲವರು ಮಂಗಳೂರು, ಉಡುಪಿ ಕಡೆಯಿಂದ ನಡೆದುಕೊಂಡೇ ಕೆಲವು ಕೂಲಿ ಕಾರ್ಮಿಕರು ಹೊರಟಿದ್ದಾರೆ. ಇಂದು ಕುಂದಾಪುರದ ಕೆಲವೆಡೆ ತೆರಳುತ್ತಿದ್ದ ಹೇಗಾದರೂ ಮಾಡಿ ನಾವುಗಳು ಊರಿಗೆ ತೆರಳುವ ವ್ಯವಸ್ಥೆ ಮಾಡಿಕೊಡಿ ಎಂದು ಕೇಳುವುದು ಕಂಡಬಂತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ದಿನಸಿ ಸಾಮಾನು ಕೊರತೆ. ಮುಚ್ಚಿದ ಚಿಕ್ಕ ಅಂಗಡಿಗಳು:
ಉಭಯ ತಾಲೂಕಿನ ದಿನಸಿ ಅಂಗಡಿಗಳಲ್ಲಿ ಅಗತ್ಯ ವಸ್ತುಗಳ ಕೊರತೆಯಿದ್ದು, ಕೆಲವು ದಿನಗಳಿಂದ ವಸ್ತುಗಳ ಸಾಗಾಟ ನಿಂತಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಕೆಲವು ದೊಡ್ಡ ದಿನಸಿ ಅಂಗಡಿಗಳು ಮಾತ್ರವೇ ಭಾಗಿಲು ತೆರೆಯುತ್ತಿವೆ. ನಿನ್ನೆ ಜಿಲ್ಲಾಧಿಕಾರಿಕಗಳು ಎಪಿಎಂಸಿ ಮೂಲಕ ಬದಲಿ ವ್ಯವಸ್ಥೆ ಮಾಡುವ ಬಗ್ಗೆ ಭರವಸೆ ನೀಡಿದ್ದು, ಅಗತ್ಯ ವಸ್ತುಗಳ ಸಸೂತ್ರವಾಗಿ ಲಭ್ಯವಾಗಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದಾರೆ./ಕುಂದಾಪ್ರ ಡಾಟ್ ಕಾಂ ಸುದ್ದಿ/

 

Leave a Reply

Your email address will not be published. Required fields are marked *

ten − 4 =