ಕುಂದಾಪುರ ವಲಯ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಪದಗ್ರಹಣ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ) ಕುಂದಾಪುರ ವಲಯದ ಬೆಳ್ಳಿ ಹಬ್ಬದ ಸವಿ ನೆನೆಪು ಹಾಗೂ ೨೬ನೇ ಪದಗ್ರಹಣ ಸಮಾರಂಭ ಜರುಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಸುರೇಶ್ ಡಿ ಪಡುಕೋಣೆ ಮಾತನಾಡಿ ಛಾಯಾಗ್ರಾಹಕರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗುವ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ. ತಮ್ಮ ಮನಸ್ಸು, ಕನಸುಗಳನ್ನು ಜನರಿಗೆ ಅರ್ಪಿಸಿ ಪ್ರಾಮಾಣಿಕ ಸೇವೆ ನೀಡುವ ಛಾಯಗ್ರಾಹಕರಿಗೆ ದೇವರು ಎಂದಿಗೂ ಒಳ್ಳೇದನ್ನೇ ಕರುಣಿಸುತ್ತಾನೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಸ್‌ಕೆಪಿಎ ಉಡುಪಿ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಮಾತನಾಡಿ, ಹಿಂದಿನಿಂದಲೂ ಎಸ್‌ಕೆಪಿಎ ಕುಂದಾಪುರ ವಲಯ ಸಮಾಜಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಪ್ರಮೋದ್ ಚಂದನ್ ಅವರ ಮುಂದಾಳತ್ವದಲ್ಲಿ ಸಂಘವು ಅನೇಕ ಚಟುವಟಿಕೆಗಳನ್ನು ನಡೆಸಿದೆ. ನೂತನ ಅಧ್ಯಕ್ಷ ರಾಜಾ ಮಠದಬೆಟ್ಟು ನಾಯಕತ್ವದಲ್ಲಿ ಶೀಘ್ರವೇ ಈ ಭಾಗದಲ್ಲಿ ಛಾಯಾಗ್ರಾಹಕರಿಗೆ ಅಗತ್ಯವಿರುವ ಛಾಯಾ ಭವನ ನಿರ್ಮಾಣಗಳ್ಳಲಿ. ತನ್ಮೂಲಕ ಛಾಯಾಗ್ರಾಹಕರಿಗೆ ಈ ಭವನ ಚಟುವಟಿಕೆಯ ಕೇಂದ್ರವಾಗಲಿ ಎಂದ ಅವರು, ಛಾಯಾಗ್ರಾಹಕರಿಗಾಗಿಯೇ ಛಾಯಾ ಸುರಕ್ಷಾವನ್ನು ಯೋಜನೆಯನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದೇವೆ. ಏನಾದರೂ ಆಪತ್ತುಗಳಾದಾಗ ಛಾಯಾಗ್ರಾಹಕರಿಗೆ ಈ ಯೋಜನೆ ನೆರವಾಗಲಿದೆ ಎಂದು ಶ್ರೀಧರ್ ಶೆಟ್ಟಿಗಾರ್ ತಿಳಿಸಿದರು.

ಎಸ್‌ಕೆಪಿಎ ಕುಂದಾಪುರ ವಲಯ ನಿಕಟಪೂರ್ವ ಅಧ್ಯಕ್ಷರಾದ ಪ್ರಮೋದ್ ಚಂದನ್ ನೂತನ ಅಧ್ಯಕ್ಷ ರಾಜಾ ಮಠದಬೆಟ್ಟು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನೂತನ ಪದಾಧಿಕಾರಿಗಳಿಗೆ ಹೂವು ನೀಡುವುದರ ಮೂಲಕ ಪದಪ್ರದಾನ ಮಾಡಲಾಯಿತು. ವಿವಿಧ ಭಾಗಗಳಿಂದ ಆಗಮಿಸಿದ ಎಸ್‌ಕೆಪಿಎನ ಪದಾಧಿಕಾರಿಗಳು ನೂತನ ಅಧ್ಯಕ್ಷ ರಾಜಾ ಮಠದಬೆಟ್ಟು ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾ ಪತ್ರಕರ್ತ ಸಂತೋಷ್ ಕುಂದೇಶ್ವರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಸಮಿತಿಯಲ್ಲಿ ದುಡಿದ ವಿಠಲ್ ಚೌಟ ಹಾಗೂ ಕುಂದಾಪುರ ವಲಯದ ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಚಂದನ್ ಅವರನ್ನು ಇದೇ ವೇಳೆಯಲ್ಲಿ ಸನ್ಮಾನಿಸಲಾಯಿತು.

ಅತಿಥಿಗಳಾಗಿದ್ದ ಕೆಜಿಎಫ್ ಸಿನೆಮಾ ಸಂಗೀತ ನಿರ್ದೇಶಕ ರವಿ ಬಸ್ರೂರು, ಪತ್ರಕರ್ತ ಜಾನ್ ಡಿಸೋಜಾ, ಎಸ್‌ಕೆಪಿಎನ ಅಶೋಕ್ ಕುಮಾರ್ ಶೆಟ್ಟಿ, ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ, ಎಸ್‌ಕೆಪಿಎ ಶ್ರೀಧರ ಹೆಗ್ಡೆ ಮಾತನಾಡಿದರು. ಉದ್ಯಮಿ ಗಣೇಶ್ ಕಿಣಿ, ಚಂದ್ರಶೇಖರ್ ಶೆಟ್ಟಿ ಕೈಲಾಡಿ, ರಾಬರ್ಟ್ ಡಿಸೋಜಾ, ನಾಗರಾಜ ರಾಯಪ್ಪನಮಠ, ಹರೀಶ್ ಅಡ್ಯಾರ್, ವಾಸುದೇವ್ ರಾವ್, ಗಿರೀಶ್ ಜಿಕೆ, ಅಧ್ಯಕ್ಷ ರಾಜಾ ಮಠದಬೆಟ್ಟು, ಕಾರ್ಯದರ್ಶಿ ಅಮೃತ್ ಬೀಜಾಡಿ, ಕೋಶಾಧಿಕಾರಿ ಗೋಪಾಲ್ ಕಾಂಚನ್, ಬಾಲಕೃಷ್ಣ ಶೆಟ್ಟಿ, ಸುರೇಶ್ ಜಮದಗ್ನಿ, ಚಂದ್ರಶೇಖರ್, ಪ್ರಕಾಶ್ ಕುಂದೇಶ್ವರ್ ಮೊದಲಾಸವರು ಉಪಸ್ಥಿತರಿದ್ದರು.

ಪ್ರಮೋದ್ ಚಂದನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಚಂದ್ರಕಾಂತ್(ಚೆನ್ನ) ಧನ್ಯವಾದವಿತ್ತರು. ಸುರೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.

ಪದಪ್ರದಾನ ಸಮಾರಂಭದ ಬಳಿಕ ಕನ್ನಡಕೋಗಿಲೆ ಖ್ಯಾತಿಯ ಟ್ಯಾಗ್ ಸ್ಟಾರ್ ಅರ್ಜುನ್ ಇಟಗಿ ಅವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಇಂಟರ್‌ನ್ಯಾಶನಲ್ ರಿಯಾಲಿಟಿ ಶೋ ವಿನ್ನರ್ ಸೀಜಲಿಂಗ್ ಗೈಸ್ ತಂಡದವರಿಂದ ವಿಶೇಷ ನೃತ್ಯ ಕಾರ್ಯಕ್ರಮ ಹಾಗೂ ವಿಶೇಷ ಆಹ್ವಾನಿತ ತಂಡಗಳಿಂದ ಕಾಮಿಡಿ ಮಜಾ ವಾರ್ ನಡೆಯಿತು. ರಂಗಕರ್ಮಿ ಜಯಶೇಖರ್ ಮಡಪ್ಪಾಡಿ, ಕನಸು ಕಾರ್ತಿಕ್, ವಿಶಾಲ ಯೋಗೀಶ್ ಆಚಾರ್ಯ ಕಾಮಿಡಿ ವಾರ್‌ಗೆ ತೀರ್ಪುಗಾರರಾಗಿ ಸಹಕರಿಸಿದರು. ಶಿವಶಕ್ತಿ ಕಲಾತಂಡ ಕನ್ನುಕೆರೆ ಪ್ರಥಮ, ಕಲಾಸ್ಪೂರ್ತಿ ದ್ವಿತೀಯ ಹಾಗೂ ಕಲಾಶಕ್ತಿ ಕಲಾತಂಡ ತೃತೀಯ ಸ್ಥಾನ ಪಡೆದುಕೊಂಡಿತು. ವಿಜೇತ ತಂಡಕ್ಕೆ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *

thirteen + nine =