ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬದುಕಿನಲ್ಲಿ ಪರರ ಹಸಿವು ಹಾಗೂ ನೋವಿಗೆ ಸ್ಪಂದಿಸುವುದು ಅಗತ್ಯ. ಭ್ರಾತೃತ್ವ ಹಾಗೂ ಸಹೋದರತೆಯ ಮೂಲಕ ಸ್ವಸ್ಥ ಸಮಾಜವನ್ನು ಕಟ್ಟಲು ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಅವರು ಕಥೊಲಿಕ್ ಸಭಾ ಉಡುಪಿ ಪ್ರದೇಶ್, ಕುಂದಾಪುರ ವಲಯ ಸಮಿತಿ ಆಶ್ರಯದಲ್ಲಿ ಭಾನುವಾರ ಕುಂದಾಪುರ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡ ಸೌಹಾರ್ದ ಕ್ರಿಸ್ಮಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಬದುಕು ಯಾಂತ್ರಿಕತೆಯತ್ತ ಸಾಗುತ್ತಿದೆ. ಮಾನವೀಯತೆ ಇಲ್ಲದ ಪ್ರಪಂಚದಲ್ಲಿ ಬದುಕಿತ್ತಿದ್ದೇವೆ ಎಂದು ಭಾಸವಾಗುತ್ತಿದೆ. ಇವನ್ನೆಲ್ಲಾ ಮೀರಿ ಏಕತೆಯ ಮಂತ್ರವನ್ನು ಪಠಿಸುವುದು ಅಗತ್ಯವಾಗಿದೆ ಎಂದರು.
ಉಡುಪಿ ಧರ್ಮ ಪ್ರಾಂತ್ಯ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ಕ್ರಿಸ್ಮಸ್ ಸಂದೇಶ ನೀಡಿ, ಪ್ರೀತಿ ಮತ್ತು ಶಾಂತಿ ದೇವರು ಕಲಿಸಿದ ಭಾಷೆ. ಭಾರತದಲ್ಲಿ ಬೇರೆ ಬೇರೆ ಧರ್ಮಗಳಿದ್ದರೂ ಎಲ್ಲದರ ಗುರಿಯೂ ದೇವರೊಂದಿಗೆ ಇರುವುದೇ ಆಗಿದೆ. ಎಲ್ಲಾ ಧರ್ಮಗಳೂ ಶಾಂತಿ, ಪ್ರೀತಿ, ದಯೆ ಕರುಣೆಯ ಸಂದೇಶವನ್ನು ಸಾರುತ್ತವೆ. ಪ್ರತಿಯೊಂದು ಧರ್ಮವು ಪರರನ್ನು ಗೌರವಿಸಲು ಹೇಳುತ್ತವೆ ನಾವೆಲ್ಲರೂ ಒಂದೇ ಮನುಕುಲಕ್ಕೆ ಸೇರಿದವರು ಎಂಬುದನ್ನು ಪ್ರತಿಪಾದಿಸುತ್ತದೆ ಎಂದರು.
ಸದ್ಭಾವನಾ ವೇದಿಕೆ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಮಾತನಾಡಿ ದೇಶದಲ್ಲಿ ನಮ್ಮನ್ನು ಒಡೆಯುವ, ಕಂದಕ ಸೃಷ್ಟಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದರೆ ದೇಶ ಕಟ್ಟುವ ಹಾಗೂ ಹೃದಯಗಳನ್ನು ಬೆಸೆಯುವ ಕೆಲಸ ಅಗತ್ಯವಾಗಿ ಆಗಬೇಕಿದೆ. ನಮ್ಮ ಪ್ರಕೃತಿಯೇ ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಬಯಸುತ್ತದೆ. ನಮ್ಮ ಧರ್ಮವನ್ನು ಪಾಲಿಸುತ್ತಾ, ಮತ್ತೊಂದು ಧರ್ಮವನ್ನು ಗೌರವಿಸುವ ಧರ್ಮ ನಿರಪೇಕ್ಷತೆ ಪ್ರತಿಯೊಬ್ಬರಲ್ಲಿಯೂ ಬರಬೇಕಿದೆ. ದೇಶಕ್ಕೆ ಬೇಕಿರುವುದು ಮಂದಿರ, ಮಸೀದಿ, ಚರ್ಚುಗಳಲ್ಲ. ಬದಲಿಗೆ, ಬಹುತ್ವಕ್ಕೆ ಮನ್ನಣೆ ನೀಡುವ, ಪರಸ್ಪರರನ್ನು ಗೌರವಿಸುವ ಗುಣ. ನಿಜವಾದ ಧರ್ಮವಿರುವುದು ಮಂದಿರ, ಮಸೀದಿ, ಚರ್ಚುಗಳಲ್ಲಲ್ಲ. ಅದಿರುವುದು ಮನುಷ್ಯನ ಒಂದು ಹಿಡಿ ಹೃದಯದಲ್ಲಿ ಎಂದು ಮಾರ್ಮಿಕವಾಗಿ ನುಡಿದರು.
ಸಮಾಜ ಸೇವಕರುಗಳಾದ ಬಿ. ವಾಸುದೇವ ಹಂದೆ, ಕೆ. ಸಿರಾದಿಲ್ (ಸಿರಾಜ್), ಲಿಪ್ಟನ್ ಒಲಿವೇರಾ ತ್ರಾಸಿ ಅವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂದನೀಯ ಗುರು ಸ್ಟ್ಯಾನಿ ತಾವ್ರೊ, ಕುಂದಾಪುರ ಸಿ.ಎಸ್.ಐ ಕೃಪಾ ಚರ್ಚ್ ಸಭಾಪಾಲಕ ರೆವರೆಂಡ್ ಕಿಶೋರ್ ಕುಮಾರ್, ಜಡ್ಕಲ್ ಸೈಂಟ್ ಜೋರ್ಜ್ ಚರ್ಚ್ ಧರ್ಮಗುರು ವಂದನೀಯ ಗುರು ವರ್ಗೀಸ್ ಪುದಿಯಡತ್ತ್, ಸಾಸ್ತಾನ ಸೈಂಟ್ ಥೋಮಸ್ ಓರ್ಥೋಡೆಕ್ಸ್ ಸಿರಿಯನ್ ಚರ್ಚ್ ಧರ್ಮಗುರು ವಂದನೀಯ ಗಉರು ನೊಯಲ್ ಲೂವಿಸ್ ಉಪಸ್ಥಿತರಿದ್ದರು. ಕುಂದಾಪುರ ವಲಯ ಸಮಿತಿ ಅಧ್ಯಕ್ಷ ಮೈಕಲ್ ಪಿಂಟೊ, ಕಾರ್ಯದರ್ಶಿ ಲೀನಾ ತಾವ್ರೊ, ಕಾರ್ಯಕ್ರಮ ಸಂಚಾಲಕ ಎಲ್ರೋಯಿ ಕಿಶನ್ ಕ್ರಾಸ್ಟೊ, ನಿಯೋಜಿತ ಅಧ್ಯಕ್ಷೆ ಮೇಬಲ್ ಡಿಸೋಜಾ ಮೊದಲಾದವರು ಇದ್ದರು.
ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಅಲ್ವಿನ್ ಕ್ವಾಡ್ರಸ್ ಸ್ವಾಗತಿಸಿದರು. ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿ ಮಾಜಿ ಅಧ್ಯಕ್ಷ ಜಾನ್ಸನ್ ಡಿ. ಅಲ್ಮೆಡಾ ವಿಶೇಷವಾಗಿ ಜ್ಯೋತಿ ಪ್ರಜ್ವಲನದ ವ್ಯವಸ್ಥೆ ಮಾಡಿದ್ದರು. ಸಿ. ಫೈವನ್ ಡಿಸೋಜಾ ಹಾಗೂ ಮಾಬೆಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.