ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಭಾಗವಹಿಸಲು ಅಣಿಯಾಗುತ್ತಿದ್ದಾರೆ ಶಾಂತಾಕುಮಾರಿ

Call us

6 ಭಾರಿ ರಾಷ್ಟ್ರ ಮಟ್ಟದ ಪದಕ ವಿಜೇತೆ. ಮೊದಲು ಭಾರಿಗೆ ಅಂತರಾಷ್ಟ್ರೀಯ ಸ್ವರ್ಧೆಯತ್ತ ಹೆಜ್ಜೆ

Call us

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
ಆರು ಭಾರಿ ರಾಷ್ಟ್ರ ಮಟ್ಟದ ಮಾಸ್ಟರ್ಸ್ ಅಥೆಟಿಕ್ಸ್ನಲ್ಲಿ ಭಾಗವಹಿಸಿ ತ್ರಿಪಲ್ ಜಂಪ್, ಹೈಜಂಪ್, ಲಾಂಗ್ ಜಂಪ್ ಮೊದಲಾದ ಕ್ರೀಡೆಗಳಲ್ಲಿ ಸತತವಾಗಿ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಗೆಲ್ಲುತ್ತಲೇ ತಮ್ಮ ಕ್ರೀಡಾ ಪ್ರಾವೀಣ್ಯತೆಯನ್ನು ಮೆರೆಯುತ್ತಾ ಬಂದಿರುವ ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಾಕುಮಾರಿ ಜಿ. ಅವರು ಇದೀಗ ಅಂತರಾಷ್ಟ್ರೀಯ ಮಟ್ಟದ ಸ್ವರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ತಯಾರಿ ನಡೆಸುತ್ತಿದ್ದಾರೆ.

2013ರಿಂದಲೂ ಇಂಡಿಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸುತ್ತಿರುವ ಶಾಂತಾಕುಮಾರಿ ಅವರು ಪ್ರತಿ ವರ್ಷವೂ ವಿವಿಧ ವಿಭಾಗಳಲ್ಲಿ ಪದಕ ಗೆದ್ದು ಅಂತರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಲು ಅರ್ಹತೆ ಪಡೆಯುತ್ತಲೇ ಬಂದಿದ್ದಾರೆ. ಪ್ರಸಕ್ತ ವರ್ಷ ಮಂಗಳೂರಿನಲ್ಲಿ ನಡೆದ ನ್ಯಾಶನಲ್ ಅಥ್ಲೆಟಿಕ್ಸ್ನಲ್ಲಿ 1 ಚಿನ್ನ, 2 ಬೆಳ್ಳಿಯ ಪದಕವನ್ನು ಗೆದ್ದಿದ್ದು ಅಂತರಾಷ್ಟ್ರೀಯ ಮಟ್ಟದ ಸ್ವರ್ಧೆ ’ಏಷ್ಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಒಪನ್ ಮೀಟ್ನಲ್ಲಿ ಭಾಗವಹಿಸಲು ಅಣಿಯಾಗುತ್ತಿದ್ದಾರೆ.

ಕ್ರೀಡಾ ಸಾಧಕಿ:
ತಮ್ಮ ಶಾಲಾ ದಿನಗಳಿಂದಲೇ ಕ್ರೀಡೆಯಲಿ ಅತೀವ ಆಸಕ್ತಿ ಹೊಂದಿದ್ದ ಶಾಂತಾ ಅವರು ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದರು. ಮಯ್ಯಾಡಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿರುವಾಗ ಮೊದಲ ಭಾರಿಗೆ ಬೈಂದೂರು ಗಾಂಧಿ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ 400ಮೀ ಮತ್ತು 800ಮೀ ಸ್ವರ್ಧೆಯಲ್ಲಿ ಭಾಗವಹಿಸಿದ್ದರು. ರತ್ತೂಬಾಯಿ ಜನತಾ ಹೈಸ್ಕೂಲಿನಲ್ಲಿದ್ದಾಗ ಕ್ರೀಡಾಕೂಟವೊಂದರಲ್ಲಿ ಭಾಗವಹಿಸಿದ್ದ ಸಂದರ್ಭ ವಿದ್ಯಾರ್ಥಿನಿಯೊಬ್ಬಳು ತ್ರಿಬಲ್ ಜಂಪ್ ಮಾಡುವುದನ್ನು ಕಂಡು ಸ್ಪೂರ್ತಿ ಪಡೆದು ತರಬೇತಿ ಇಲ್ಲದೇ ತಾವಾಗಿಯೇ ಸ್ವರ್ಧಿಸಿ ಮೊದಲ ಸ್ಥಾನ ಪಡೆದುಕೊಂಡಿದ್ದರು. ಇಂದು ಅದೇ ಆಟದಲ್ಲಿ ಶಾಂತಾ ಅವರು ರಾಷ್ಟ್ರ ಮಟ್ಟವನ್ನು ಪ್ರತಿನಿಧಿಸಿದ್ದಾರೆ. ಹೈಸ್ಕೂಲಿನಲ್ಲಿ ಮೂರು ವರ್ಷವೂ ಜ್ಯೂನಿಯರ್ ಛಾಂಪಿಯನ್ ಆಗಿದ್ದರು. ಬೈಂದೂರು ಜ್ಯೂನಿಯರ್ ಕಾಲೇಜಿನಲ್ಲಿ ಪಿಯು ಶಿಕ್ಷಣ ಪೂರೈಸಿ ಬಳಿಕ ಹೊನ್ನಾವರದಲ್ಲಿ ಸಿಪಿಇಡ್ ಕಲಿಕೆಗಾಗಿ ಸೇರಿಕೊಂಡರು. ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದರು. ಈ ಸಂದರ್ಭ ಕ್ರೀಡೆಯಲ್ಲಿ ಛಾಂಪಿಯನ್ ಆಗಿದ್ದರು.

ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಗೋಳಿಹೊಳೆ ಶಾಲೆಯಲ್ಲಿ ವೃತ್ತಿಜೀವನ ಆರಂಭಿಸಿದ್ದರು. ಅಲ್ಲಿಯೇ ವೃತ್ತಿಜೀವನ ಮುಂದುವರಿಸಿದ್ದ ಶಾಂತಾ ಅವರಿಗೆ ಬಿಪಿಇಡ್ ಮಾಡಲು ಅವಕಾಶ ಒದಗಿ ಬಂದಿತ್ತು. ಉಡುಪಿ ಜಿಲ್ಲೆಯಲ್ಲಿ ಬಿಪಿಇಡ್ ಕೋರ್ಸಿಗೆ ಸರಕಾರದಿಂದ ಆಯ್ಕೆಯಾದ ಇಬ್ಬರ ಪೈಕಿ ಇವರೂ ಒಬ್ಬರಾಗಿದ್ದರು. ಬಳಿಕ ಕೆ.ವಿ ಎಜುಕೇಶನ್ ಟ್ರಸ್ನಲ್ಲಿ ಬಿಪಿಇಡ್ ಮುಗಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಳ್ಳೆ ಸರಕಾರಿ ಹೌಸ್ಕೂಲಿನಲ್ಲಿ ಪ್ರಮೋಷನ್ ಪಡೆದು ಸೇವೆ ಸಲ್ಲಿಸುತ್ತಿದ್ದಾರೆ.

Call us

ವಿದ್ಯಾರ್ಥಿಗಳೂ ರಾಜ್ಯ ಮಟ್ಟದ ತನಕ ಭಾಗಿ:
ಶಾಂತಾ ಅವರು ಸ್ವತಃ ಕ್ರೀಡೆಯಲ್ಲಿ ಸಾಧನೆ ಮಾಡಿರುವುದಲ್ಲದೇ ತಮ್ಮ ವಿದ್ಯಾರ್ಥಿಗಳೂ ವಲಯ, ಜಿಲ್ಲೆ, ರಾಜ್ಯ ಮಟ್ಟದ ತನಕ ಭಾಗವಹಿಸಲು ತರಬೇತಿ ನೀಡಿದ್ದಾರೆ. ಈ ಹಿಂದೆ ಸೇವೆ ಸಲ್ಲಿಸಿದ್ದ ಗೋಳಿಹೊಳೆ ಶಾಲೆಯಲ್ಲಿ ಹಾಗೂ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ದೊಡ್ಡಬೆಳ್ಳೆ ಶಾಲೆಯಲ್ಲಿಯೂ ಇದು ಮುಂದಿವರಿದಿದೆ. ಅವರ ವಿದ್ಯಾರ್ಥಿಗಳು ಅಥ್ಲೆಟಿಕ್ಸ್, ವಾಲಿಬಾಲ್, ತ್ರೋಯಿಂಗ್ ಇಂವೆಟ್ಸ್ನಲ್ಲಿ ಜಿಲ್ಲಾ, ರಾಜ್ಯಮಟ್ಟದ ತನಕ ಭಾಗವಹಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರಕಾರಿ ಹೈಸ್ಕೂಲುಗಳ ಪೈಕಿ ದೊಡ್ಡಬೆಳ್ಳೆಯ ಹೈಸ್ಕೂಲು ವಿದ್ಯಾರ್ಥಿಗಳೇ ಹೆಚ್ಚು ಭಾಗವಹಿಸುತ್ತಿರುವುದರ ಹಿಂದೆ ಶಾಂತಾ ಅವರ ಪರಿಶ್ರಮ ದೊಡ್ಡದಿದೆ.

ಪಿಇಟಿ ಆಗಲು ಶಿಕ್ಷಕರೇ ಸ್ಫೂರ್ತಿ:
ಮಯ್ಯಾಡಿ ಧಮಸ್ಥಳ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ರಾಜು ಎಸ್. ಮಯ್ಯಾಡಿ ಅವರ ಶಿಷ್ಯೆಯಾಗಿರುವ ಶಾಂತಾ, ಅವರಿಂದಲೇ ಸ್ಪೂರ್ತಿ ಪಡೆದು ದೈಹಿಕ ಶಿಕ್ಷಣ ಶಿಕ್ಷಕಿ ಯಾಗಬೇಕೆಂದು ಶಾಲಾ ದಿನಗಳಲ್ಲಿಯೇ ನಿರ್ಧರಿಸಿದ್ದರು. ರತ್ತೂಬಾಯಿ ಜನತಾ ಹೈಸ್ಕೂಲಿನಲ್ಲಿದ್ದಾಗ ಶಿಕ್ಷಕಿಯಾಗಿದ್ದ ಸಾವಿತ್ರಿ ಅವರ ಬಳಿ ಪಿಇ ಟೀಚರ್ ಆಗುವ ಬಗ್ಗೆ ಸಲಹೆ ಪಡೆಯುತ್ತಿದ್ದರು. ಸೌಟ್ಸ್ ಗೈಡ್ಸ್ ತರಬೇತುದಾರರಾಗಿದ್ದ ಸದಾಶಿವ ಭಟ್ ಅವರ ಬದುಕಿನ ಪಾಠದಿಂದಾಗಿ ಇಂದು ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಿದೆ. ಶಿಕ್ಷಕಿಯಾಗಿ 10 ವರ್ಷದ ಬಳಿಕ ಮಾಸ್ಟರ್ಸ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಲು ದೊಡ್ಡಬೆಳ್ಳೆ ಶಾಲೆಯನ್ನು ಸಹಶಿಕ್ಷಕಿ ಯಾಗಿದ್ದ ಸೌಮ್ಯ ಅವರ ಪ್ರೋತ್ಸಾಹ ದೊಡ್ಡದಿದೆ ಎನ್ನುತ್ತಾರೆ.

ಪ್ರತಿಭಾನ್ವಿತೆ:
ಕ್ರೀಡೆಯಲ್ಲಿನ ಅಪಾರ ಆಸಕ್ತಿಯೇ ಅವರನ್ನುಅಂತರಾಷ್ಟ್ರೀಯ ಮಟ್ಟದ ತನಕ ತಂದು ನಿಲ್ಲಿಸಿದೆ. ರತ್ತಬಾಯಿ ಜನತಾ ಹೈಸ್ಕೂಲ್ನಲ್ಲಿ ಓದುತ್ತಿರುವಾಗ ಅಥ್ಲೆಟಿಕ್ಸ್ನಲ್ಲಿ ಛಾಂಪಿಯನ್, ಗುಡ್ ಲೀಡರ್ಶಿಪ್ ಅವಾರ್ಡ್ ಪಡೆದಿದ್ದರು. ಗೈಡ್ಸ್ನಲ್ಲಿ ರಾಜ್ಯ ಪುರಸ್ಕಾರವನ್ನು ಪಡೆದಿದ್ದರು. ಸಿಪಿಇಡ್ ಮಾಡುವಾಗಲೂ ಕ್ರೀಡೆಯಲ್ಲಿ ಛಾಂಪಿಯನ್ ಆಗಿದ್ದರು. ಗೋಳಿಹೊಳೆ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸಂದರ್ಭ ಎಳಜಿತ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸುತ್ತಿದ್ದರು. ಬೈಂದೂರಿನಲ್ಲಿ ಸುರಭಿ ಸಂಸ್ಥೆಯಿಂದ ನಡೆಯುತ್ತಿದ್ದ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸಿ ಮಕ್ಕಳಿಗೆ ವಿವಿಧ ತರಬೇತಿ ನೀಡುತ್ತಿದ್ದರು. ರಾಜ್ಯ ಸರಕಾರಿ ನೌಕರರ ಸಂಘದಲ್ಲಿ ಜಾನಪದ ನೃತ್ಯ, ನಾಟಕ, ವೀರಗಾಸೆ, ಕಂಗೀಲು ನೃತ್ಯಗಳ ಮೂಲಕ ರಾಜ್ಯ ಮಟ್ಟದತನಕ ಭಾಗವಹಿಸಿದ್ದಾರೆ.

ಬೈಂದೂರು ಮಯ್ಯಾಡಿ ಪೇದೆಮನೆ ರಮೇಶ್ ಪಿ. ಅವರ ಪತ್ನಿಯಾಗಿರುವ ಶಾಂತಾಅವರದ್ದು ಪುತ್ರ ಶಿವೋತ್ತಮನನ್ನು ಒಳಗೊಂಡ ಸುಖಿ ಕುಟುಂಬ. ಗದ್ದೆಮನೆ ಸದಾಶಿವ ಜಿ. ಹಾಗೂ ಶಾರದಾ ಅವರ ಪುತ್ರಿಯಾಗಿರುವ ಅವರು ಕ್ರೀಡೆಯಲ್ಲಿ ಸಾಧನೆಗೈಯಲು ತಂದೆ ತಾಯಿ ಹಾಗೂ ಪತಿಯ ಪ್ರೋತ್ಸಾಹ ದೊಡ್ಡದಿದೆ ಎನ್ನುತ್ತಾರೆ.

ಮಾಸ್ಟರ್ಅಥ್ಲೆಟಿಕ್ಸ್ನಲ್ಲಿ ರಾಷ್ಟಮಟ್ಟದ ತನಕ ಭಾಗವಹಿಸಿ ಏಷ್ಯನ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕರೂ ಆರ್ಥಿಕ ಕಾರಣಗಳಿಂದಾಗಿ ಅವರು ಹಿಂದೇಟು ಹಾಕಿದ್ದರು. ಈ ಭಾರಿ ಸ್ನೇಹಿತರ ಒತ್ತಾಯದಿಂದಾಗಿ ಭಾಗವಹಿಸಲು ಮನಸ್ಸು ಮಾಡಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿ ಮಲೇಷಿಯಾದಲ್ಲಿ ಸ್ವರ್ಧೆ ನಡೆಯಲಿದೆ.

ತಮಗಿರುವ ಸೀಮಿತಿ ಅವಕಾಶಗಳ ನಡುವೆರಾಜ್ಯ, ರಾಷ್ಟಮಟ್ಟವನ್ನು ಪ್ರತಿನಿಧಿ ಸುವುದೇದೊಡ್ಡ ವಿಚಾರವಾಗಿರುವಾಗ ಶಾಂತಾಅವರುಅಂತರಾಷ್ಟ್ರೀಯ ಮಟ್ಟವನ್ನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ.

Leave a Reply

Your email address will not be published. Required fields are marked *

19 − 14 =