ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್‌ನ 5ನೇ ವರ್ಷದ ಟ್ರಸ್ಟ್ ದಿನಾಚರಣೆಯನ್ನು ಮಾಜಿ ಶಾಸಕ ಹಾಗೂ ವಿಶ್ವ ರಾಮ್ಷತ್ರಿಯ ಸಂಘದ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಗಿನ ತಲೆಮಾರಿನ ಮಕ್ಕಳು ಅದೃಷ್ಟಶಾಲಿಗಳು. ಹಿಂದಿನವರು ಅನುಭವಿಸಿದ್ದ ಕಷ್ಟ ಅವರಿಗಿಲ್ಲ. ಅವರಲ್ಲಿ ಅರ್ಹತೆ ಇರುವವರಿಗೆ ವಿವಿಧ ಮೂಲಗಳಿಂದ ನೆರವು ಬರುತ್ತಿದೆ. ಶ್ರೀರಾಮ ವಿವಿಧೋದ್ದೇಶ ಟ್ರಸ್ಟ್ ಕಷ್ಟದಲ್ಲಿರುವವವರಿಗೆ ನೀಡುತ್ತಿರುವ ಸಹಾಯ ಅದಕ್ಕೆ ಉದಾಹರಣೆ. ಅದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳೂ ಸೇರಿದಂತೆ ನೆರವು ಪಡೆದ ಎಲ್ಲರೂ ಸಮಾಜ ಮೆಚ್ಚುವಂತೆ ಬದುಕಬೇಕು ಎಂದು ಹೇಳಿದರು.
ಟ್ರಸ್ಟ್‌ನ ಆಡಳಿತ ಟ್ರಸ್ಟಿ ಬಿ. ರಾಮಕೃಷ್ಣ ಶೇರೆಗಾರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಉದ್ಯಮಿ ಸದಾನಂದ ಸೇರ್ವೇಗಾರ್, ಮುಂಬೈ ಉದ್ಯಮಿ ಪ್ರಕಾಶ್ ಮಲ್ಲಯ್ಯ, ಕುಂದಾಪುರ ರಕ್ಷಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ. ಚಂದ್ರಶೇಖರ, ಕುಂದಾಪುರ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ರವೀಂದ್ರ ಕಾವೇರಿ, ಬೈಂದೂರು ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಬಿ. ಗೋಪಾಲ ನಾಯಕ್ ಮುಖ್ಯ ಅತಿಥಿಗಳಾಗಿದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೃತೀಯ ರ‍್ಯಾಂಕ್ ವಿಜೇತ ಮಂಜೇಶ್‌ಗೆ ಸನ್ಮಾನ, ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೯೦ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಟ್ರಸ್ಟ್‌ನ ಶೈಕ್ಷಣಿಕ ದತ್ತು ಯೋಜನೆ, ಗೃಹ ನಿರ್ಮಾಣ ಯೋಜನೆ, ವಿಧವಾ ಆಸರೆ ಯೋಜನೆ, ಅನಾಥ ಸಬಲೀಕರಣ ಯೋಜನೆ, ಅಶಕ್ತ ಸುರಕ್ಷಾ ಯೋಜನೆಯ ಫಲಾನುಭವಿಗಳಿಗೆ ಆರ್ಥಿಕ ನೆರವು, ಸಮುದಾಯದ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣೆ ನಡೆಯಿತು.
ಮಾತೃ ಮಂಡಳಿಯ ಸದಸ್ಯರು ಪ್ರಾರ್ಥನೆ ಮಾಡಿದರು. ಟ್ರಸ್ಟಿ ಬಿ. ವೆಂಕಟರಮಣ ಬಿಜೂರು ಸ್ವಾಗತಿಸಿದರು. ಬಿ. ಶ್ರೀನಿವಾಸ ಶೇರೆಗಾರ್ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಮಹಾಬಲೇಶ್ವರ ಸಂದೇಶ ವಾಚಿಸಿದರು. ನಿರ್ವಾಹಕ ಆನಂದ ಮದ್ದೋಡಿ ಟ್ರಸ್ಟ್‌ನ ಈ ವರೆಗಿನ ಸಾಧನೆಗಳ ಅವಲೋಕನ ನಡೆಸಿದರು. ವಿ. ಎಚ್. ನಾಯಕ್ ಮತ್ತು ಬಿ. ಕೇಶವ ನಾಯಕ್ ನೆರವು ಯೋಜನೆಯ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ಟ್ರಸ್ಟಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಗಣಹೋಮ ಮತ್ತು ವಿಶೇಷ ಪೂಜೆ ನಡೆಯಿತು.