ಬೈಂದೂರು ಪಟ್ಟಣ ಪಂಚಾಯತಿಗೆ ಸಚಿವ ಸಂಪುಟ ಸಭೆಯಲ್ಲಿ ಅಸ್ತು. ಲಾಭ-ನಷ್ಟದ ಲೆಕ್ಕಚಾರ

Call us

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು,ಜೂ.12: ಬೈಂದೂರು, ಯಡ್ತರೆ ಹಾಗೂ ಪಡುವರಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿ ಬೈಂದೂರನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ದೊರೆತಿದೆ.

Call us

Call us

ಬೈಂದೂರನ್ನು ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಗೆಜೇರಿಸುವ ನಗರಾಭಿವೃದ್ಧಿ ಸಚಿವಾಲಯದ ಅಧಿಸೂಚನೆ ಡಿ. 31ರ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟವಾಗಿತ್ತು. ಅಂತಿಮವಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಪಟ್ಟಣ ಪಂಚಾಯತಿಗೆ ಅಸ್ತು ಎಂದಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಜನಸಂಖ್ಯೆ, ವಾಣಿಜ್ಯ ಚಟುವಟಿಕೆ ಮಾನದಂಡ:
ನೂತನ ಪಟ್ಟಣ ಪಂಚಾಯಿತಿ ಪ್ರದೇಶವು 2011ರ ಜನಗಣತಿಯ ಪ್ರಕಾರ 24,957ಜನಸಂಖ್ಯೆ, 433 ಜನಸಾಂದ್ರತೆ ಮತ್ತು ಶೇ. 55 ಕೃಷಿಯೇತರ ಚಟುವಟಿಕೆಗಳ ಉದ್ಯೋಗ ಹೊಂದಿರುವುದರಿಂದ ಪಟ್ಟಣ ಪಂಚಾಯಿತಿ ಆಗುವ ಅರ್ಹತೆ ಪಡೆದಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

Call us

Call us

ಹೊಸ ಪಟ್ಟಣ ಪಂಚಾಯಿತಿಯು 54.24 ಚದರ ಕಿಲೋಮೀಟರು ವ್ಯಾಪ್ತಿ ಹೊಂದಿರುತ್ತದೆ. ಪೂರ್ವಕ್ಕೆ ಪಶ್ಚಿಮ ಘಟ್ಟ ಮತ್ತು ಯಳಜಿತ ಗ್ರಾಮ, ಪಶ್ಚಿಮಕ್ಕೆ ಅರಬೀ ಸಮುದ್ರ, ಉತ್ತರದಲ್ಲಿ ಭಾಗಶ: ಶಿರೂರು ಗ್ರಾಮ ಮತ್ತು ಪಶ್ಚಿಮ ಘಟ್ಟ ಹಾಗೂ ದಕ್ಷಿಣದಲ್ಲಿ ಸುಮನಾವತಿ ನದಿ ಇದೆ.

ಪುರಸಭೆಯಿಂದ ಗ್ರಾ.ಪಂ. ಗ್ರಾ.ಪಂ ನಿಂದ ಪ.ಪಂ:
ಬೈಂದೂರು, ಯಡ್ತರೆ ಗ್ರಾಮ ಪಂಚಾಯಿತಿ ಒಳಗೊಂಡು 1971 ರಲ್ಲಿ ಪುರಸಭೆ ಆಗಿತ್ತು. ಆದರೆ ಗ್ರಾಮೀಣ ಪ್ರದೇಶ ಸೌಲಭ್ಯ ವಂಚಿತವಾಗುತ್ತದೆಂಬ ಕಾರಣದಿಂದ 1997 ರಲ್ಲಿ ಮತ್ತೆ ಯಡ್ತರೆ ಬೈಂದೂರು ಪತ್ಯೇಕ ಗ್ರಾಮ ಪಂಚಾಯತಿಯಾಯಿತು. ಇತ್ತಿಚಿನ ವರ್ಷಗಳಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಪುರಸಭೆ ಆಗುವುದೇ ಒಳಿತೆಂಬ ಜನಾಗ್ರಹ ಕೇಳಿಬಂದಿದ್ದು, ಸದ್ಯ ಪಟ್ಟಣ ಪಂಚಾಯತಿಯಾಗಿ ರೂಪುಗೊಂಡಿದೆ.

ಯಡ್ತರೆ-ಬೈಂದೂರು ಪುರಸಭೆಗೆ ಬೇಡಿಕೆಯಿತ್ತು:
ಹಿಂದಿನ ಸರಕಾರದ ಅವಧಿಯಲ್ಲಿ 26 ಗ್ರಾಮಗಳನ್ನು ಸೇರಿಸಿ ಬೈಂದೂರನ್ನು ತಾಲೂಕನ್ನಾಗಿ ಘೋಷಿಸುವ ಮೊದಲೇ ಯಡ್ತರೆ – ಬೈಂದೂರು ಗ್ರಾಮವನ್ನು ಸೇರಿಸಿ ಪುರಸಭೆಯನ್ನಾಗಿಸಬೇಕು ಎಂಬ ಬೇಡಿಕೆಯೂ ಬಂದಿತ್ತು. ಇದೇ ಪ್ರಸ್ತಾಪ ಸರಕಾರಕ್ಕೆ ಕಳುಹಿಸಲಾಗಿತ್ತಾದರೂ ಅನುಮೋದನೆ ದೊರೆತಿರಲಿಲ್ಲ. ಕಳೆದ ಡಿಸೆಂಬರ್ ಅಂತ್ಯದ ವೇಳೆಗೆ ಬೈಂದೂರನ್ನು ಪುರಸಭೆ ಬದಲಿಗೆ 3 ಗ್ರಾಮಗಳನ್ನು ಸೇರಿಸಿ ಪಟ್ಟಣ ಪಂಚಾಯತ್ ಆಗಿ ಅಧಿಸೂಚನೆ ಹೊರಡಿಸಲಾಗಿತ್ತು /ಕುಂದಾಪ್ರ ಡಾಟ್ ಕಾಂ ವರದಿ/

ಅನುಕೂಲವೇನು?
ಬೈಂದೂರು ತಾಲೂಕು ಕೇಂದ್ರವಾಗಿರುವುದರಿಂದ ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ಪಟ್ಟಣ ಮಾಡಿರುವ ನಿರ್ಧಾರ ಸ್ವಾಗತಾರ್ಹ. ಇದರಿಂದಾಗಿ

 • ಪಟ್ಟಣ ಪಂಚಾಯತಿಗೆ ತೆರಿಗೆ ಮಂತಾದವುಗಳಿಂದ ಹೆಚ್ಚಿನ ವರಮಾನ ಬರಲಿದೆ.
 • ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ದೊರೆಯುತ್ತದೆ.
 • ನಿರ್ದಿಷ್ಟ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ, ಕೇಂದ್ರ ಮತ್ತು ಉದ್ಯಮಗಳ ಸಿ.ಎಸ್.ಆರ್ ನಿಧಿಯಿಂದಲೂ ನೆರವು .
 • ಕರಾವಳಿ ನಿಯಂತ್ರಣ ವಲಯ ನಿರ್ಬಂಧದಿಂದ ಮುಕ್ತಿ. ಸಿಆರ್‌ಝಡ್ ನಿಯಮ ಸಡಲಿಕೆ ಆಗಲಿದೆ.
 •  ಉದ್ಯಮ, ಉದ್ಯೋಗಾವಕಾಶಗಳಿಗೆ ಅವಕಾಶ ದೊರೆಯಲಿದೆ /ಕುಂದಾಪ್ರ ಡಾಟ್ ಕಾಂ ವರದಿ/

ಅನಾನುಕೂಲವೇನು?
ಪ್ರಸ್ತಾಪಿತ ಬೈಂದೂರು ಪಟ್ಟಣ ಪಂಚಾಯತಿಗೆ ಬಹುಪಾಲು ಗ್ರಾಮೀಣ ಪ್ರದೇಶಗಳನ್ನೇ ಒಳಗೊಂಡು ಪಟ್ಟಣ ಪಂಚಾಯತಿ ರಚಿಸಿಲಾಗಿದೆ. ಇದರಿಂದಾಗಿ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎಂಬ ವಾದವೂ ಇದೆ.

 • ಅಕ್ರಮ ಸಕ್ರಮ ಯೋಜನೆ, ಈಗಾಗಲೇ ಅರ್ಜಿ ಸಲ್ಲಿಸಿರುವ 94ಸಿ ಪ್ರಕರಣಗಳ ನಿರ್ವಹಣೆ ಗೊಂದಲ ಸಾಧ್ಯತೆ.
 • ಗ್ರಾಮೀಣ ಭಾಗದ ಜನಸಾಮಾನ್ಯರಿಂದ ತೆರಿಗೆ ಹೊರೆ ಬೀಳುವ ಸಾಧ್ಯತೆ
 • ಈ ಭಾಗದ ಉದ್ಯೋಗಾಕಾಂಕ್ಷಿಗಳು ಗ್ರಾಮೀಣ ಕೃಪಾಂಕದಿಂದ ವಂಚಿತರಾಗಲಿದ್ದಾರೆ.
 • ಮನೆ, ಕಟ್ಟಡ ನಿರ್ಮಾಣಕ್ಕೆ ಪ್ರಾಧಿಕಾರದ ಅನುಮತಿ ಅಗತ್ಯವಾಗಬಹುದು.
 • ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಿಂದ 3 ಪಂಚಾಯತಿಗಳು ಹೊರಗುಳಿಯಲಿದೆ.
 •  ಗ್ರಾಮೀಣ ಪ್ರದೇಶ ಹೆಚ್ಚಿರುವುದರಿಂದ ಪ.ಪಂಚಾಯತ್‌ಗೆ ಬರುವ ಅನುದಾನ, ವರಮಾನ ಕೊರತೆ & ಅದರಿಂದಾಗಿ ಅಭಿವೃದ್ಧಿಗೆ ಹಿನ್ನಡೆ ಸಾಧ್ಯತೆ /ಕುಂದಾಪ್ರ ಡಾಟ್ ಕಾಂ ವರದಿ/

ಇದನ್ನೂ ಓದಿ:
► ಬೈಂದೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ – https://kundapraa.com/?p=34589 .

 

 

One thought on “ಬೈಂದೂರು ಪಟ್ಟಣ ಪಂಚಾಯತಿಗೆ ಸಚಿವ ಸಂಪುಟ ಸಭೆಯಲ್ಲಿ ಅಸ್ತು. ಲಾಭ-ನಷ್ಟದ ಲೆಕ್ಕಚಾರ

 1. ಅರ್ಹತೆ ಇದ್ದರೂ ಪಟ್ಟಣ ಪಂಚಾಯತ ಸ್ಥಾನ ವಂಚಿತ ಗಂಗೊಳ್ಳಿ..!!

Leave a Reply

Your email address will not be published. Required fields are marked *

18 + 7 =