ಬಿದ್ಕಲ್‌ಕಟ್ಟೆ ಸ.ಹಿ.ಪ್ರಾ ಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ರಚನೆಗೆ ವಿಧಾನಸಭಾ ಮಾದರಿ ಚುನಾವಣೆ

Call us

ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಪಾರದರ್ಶಕ ಹಾಗೂ ನ್ಯಾಯಬದ್ಧವಾದ ಚುನಾವಣಾ ಮಾದರಿಯನ್ನು ಪ್ರಾತ್ಯಕ್ಷಿಕೆಯ ಮೂಲಕವೇ ತಿಳಿಸಿಕೊಟ್ಟಲ್ಲಿ ಭವಿಷ್ಯದಲ್ಲಿ ಚುನಾವಣಾ ರೀತಿನೀತಿಗಳ ಬಗ್ಗೆ ಸ್ಪಷ್ಟ ಕಲ್ಪನೆ ಮೂಡಿಸಲು ಸಾಧ್ಯ ಎಂಬ ಸದಾಶಯದೊಂದಿಗೆ ಕುಂದಾಪುರ ವಲಯದ ಬಿದ್ಕಲ್‌ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ರಚನೆಗೆ ರಾಜ್ಯ ವಿಧಾನಸಭಾ ಚುನಾವಣಾ ಮಾದರಿಯಲ್ಲಿಯೇ ವಿದ್ಯಾರ್ಥಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿ ವಿದ್ಯಾರ್ಥಿ ನಾಯಕನನ್ನು ಆಯ್ಕೆ ಮಾಡಲಾಯಿತು.

ಶಾಲೆಯ ಮುಖ್ಯೋಪಾಧ್ಯಾಯಿನಿ ನಾಗರತ್ನ ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆಯನ್ನು ನಿಯಮಬದ್ಧವಾಗಿ ಮನ್ನೆಡೆಸಿದರು. ಚುನಾವಣೆಗೆ 10 ದಿನ ಮುಂಚೆ ಅಧಿಸೂಚನೆ ಹೊರಡಿಸಲಾಗಿತ್ತು. ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂತೆಗೆತ, ಚುನಾವಣಾ ಪ್ರಚಾರ, ಮತದಾನ, ಮತಗಳ ಎಣಿಕೆ, ಪ್ರಮಾಣವಚನ ಸ್ವೀಕಾರ.. ಹೀಗೆ ಎಲ್ಲಾ ಪ್ರಕ್ರಿಯೆಗಳೂ ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ, ನಿಗದಿತ ಸಮಯದ ಚೌಕಟ್ಟಿನಲ್ಲೇ ನಡೆಯಿತು.

ನಾಮಪತ್ರ ಸಲ್ಲಿಕೆ: ನಾಮಪತ್ರದ ನಮೂನೆ ಹಾಗೂ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳನ್ನು ಚುನಾವಣಾಧಿಕಾರಿಗಳು ಮೊದಲೇ ಘೋಷಿಸಿದ್ದರು. ಅದರಂತೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನದ 7 ಮಂದಿ ಸ್ಪರ್ಧಾಕಾಂಕ್ಷಿಗಳು ನಾಮಪತ್ರ ಸಲ್ಲಿಸಿದರು. ಪ್ರತಿ ಅಭ್ಯರ್ಥಿಗಳಿಂದ 100 ರೂ. ಠೇವಣಿ ಸ್ವೀಕರಿಸಲಾಗಿತ್ತು.

ನಾಮಪತ್ರ ಪರಿಶೀಲನೆ: ಅಭ್ಯರ್ಥಿಗಳು ನಾಮಪತ್ರದಲ್ಲಿ ನೀಡಿರುವ ಸಮಗ್ರ ವಿವರವನ್ನು ಚುನಾವಣಾಧಿಕಾರಿಗಳು ಸೂಕ್ಷ್ಮವಾಗಿ ಪರಿಶೀಲಿಸಿದರು.

Call us

ನಾಮಪತ್ರ ಹಿಂತೆಗೆತ: ಪರಿಶೀಲನೆಯ ಬಳಿಕ ನಾಮಪತ್ರ ಹಿಂಪಡೆಯಲು ಒಂದು ದಿನದ ಕಾಲಾವಕಾಶವನ್ನು ನೀಡಿ, ಆ ಬಳಿಕ ಕಣದಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ತಯಾರಿಸಿ,ಚುನಾವಣಾ ಕಣದಲ್ಲಿ ಉಳಿದಿರುವ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಯವರು ಚಿಹ್ನೆಯನ್ನು ನೀಡಿದರು.

ಚುನಾವಣಾ ಪ್ರಚಾರ: ಚುನಾವಣಾ ಪ್ರಚಾರಕ್ಕೆ ಅಭ್ಯರ್ಥಿಗಳಿಗೆ 48 ಗಂಟೆಗಳ ಸಮಯವನ್ನು ನೀಡಲಾಗಿತ್ತು. ಈ ಅವಧಿಯಲ್ಲಿ ಮತದಾರರನ್ನು ಓಲೈಸುವ ವಿವಿಧ ಕಾರ‍್ಯತಂತ್ರಗಳು ಅಭ್ಯರ್ಥಿಗಳಿಂದ ನಡೆಯಿತು. ನೀತಿ ಸಂಹಿತೆ ಹಾಗೂ ಚುನಾವಣಾ ನಿಯಮಗಳ ಉಲ್ಲಂಘನೆಯ ಪ್ರಕರಣಗಳೂ ದಾಖಲಾಗಿದ್ದವು. ಚುನಾವಣೆಗೆ 48 ಗಂಟೆಗಳು ಬಾಕಿಯಿರುವಾಗ ಬಹಿರಂಗ ಪ್ರಚಾರಕ್ಕೆ ಅವಕಾಶ ನಿರಾಕರಿಸಲಾಗಿತ್ತು.

ಮತದಾನ: ಮತದಾನಕ್ಕಾಗಿ ಪ್ರತ್ಯೇಕವಾದ ಮತಗಟ್ಟೆಯನ್ನು ಸ್ಥಾಪಿಸಲಾಗಿತ್ತು. ಮತಗಟ್ಟೆಯ ಸಿದ್ಧತೆಯಲ್ಲಿ ವಿದ್ಯಾರ್ಥಿಗಳು ಶೃದ್ಧೆಯಿಂದ ಭಾಗವಹಿಸಿದರು.. ಶಾಲಾ ಸಹಶಿಕ್ಷಕರುಗಳಾದ ಶ್ರೀ ಸತೀಶ್ ಶೆಟ್ಟಿಗಾರ್, ಶ್ರೀಮತಿ ರಮಣಿ, ಶ್ರೀಮತಿ ಜ್ಯೋತಿಲಕ್ಷ್ಮಿ, ಶ್ರೀಮತಿ ಸುಷ್ಮಾ ಶೆಟ್ಟಿ, ಶ್ರೀಮತಿ ಚಿತ್ರಾ, ಗೌರವ ಶಿಕ್ಷಕಿಯರಾದ ಶ್ರೀಮತಿ ಮಹಾಲಕ್ಷ್ಮೀ, ಶ್ರೀಮತಿ ಸುಪ್ರೀತಾ ಮತಗಟ್ಟೆ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರು. ಚುನಾವಣಾ ವೀಕ್ಷಕರಾಗಿ ,ಬಿದ್ಕಲ್ ಕಟ್ಟೆ ಸಿ.ಆರ್.ಪಿ ಶ್ರೀ ಸುಧಾಕರ ಶೆಟ್ಟಿ ಆಗಮಿಸಿದ್ದರು. ಪ್ರತಿಯೊಬ್ಬ ಅಭ್ಯರ್ಥಿಯ ಪರವಾಗಿ ಒಬ್ಬೊಬ್ಬ ಮತದಾನ ಏಜೆಂಟರನ್ನು ನೇಮಿಸಲಾಗಿತ್ತು.

ಮತದಾರರ ಪಟ್ಟಿಯನ್ನು ಮೊದಲೇ ಸಿದ್ಧಪಡಿಸಲಾಗಿದ್ದು, ಪ್ರತಿಯೊಬ್ಬ ಮತದಾರರಿಗೂ ಗುರುತಿನ ಚೀಟಿಯನ್ನು ಮೊದಲೇ ವಿತರಿಸಲಾಗಿತ್ತು. ಮತದಾರರು ಗುರುತಿನ ಚೀಟಿಯನ್ನೂ ಹಾಜರುಪಡಿಸಿಯೇ ಮತಚಲಾಯಿಸಬೇಕು. ಮತದಾನದ ಸಂದರ್ಭದಲ್ಲಿ ಇದರ ಗುರುತು ಮಾಡಿರುವ ಪ್ರತಿ ಮೊದಲನೇ ಪೋಲಿಂಗ್ ಆಫೀಸರ್ ಬಳಿಯಲ್ಲೂ, ಅದರ ಇತರೇ ಪ್ರತಿ ಪ್ರತಿಯೊಬ್ಬ ಏಜೆಂಟರ ಬಳಿಯಲ್ಲೂ ನೀಡಲಾಗಿತ್ತು. ನಕಲಿ ಮತದಾನಕ್ಕೆ ಇಲ್ಲಿ ಅವಕಾಶವೇ ಇಲ್ಲ .ಗುರುತಿನ ಚೀಟಿಯಿದ್ದೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದಲ್ಲಿ ಮತಚಲಾಯಿಸಲು ಅವಕಾಶವಿರುವುದಿಲ್ಲ.ಕೆಲವು ವಿಶೇಷ ಸಂದರ್ಭಗಳಲ್ಲಿ ಮತದಾನ ಏಜೆಂಟರ ಒಪ್ಪಿಗೆಯಿದ್ದಲ್ಲಿ ಮಾತ್ರ ಮತ ಚಲಾವಣೆಯ ಹಕ್ಕನ್ನು ನೀಡಲಾಗುತ್ತದೆ. ಇಲಾಖೆ ನೀಡಿರುವ ಚೈಲ್ಡ್ ಐಡಿಯನ್ನೇ ಗುರುತಿನ ಚೀಟಿ ಸಂಖ್ಯೆಯನ್ನಾಗಿ ಪರಿಗಣಿಸಲಾಗಿದ್ದು,. 1 ನೇ ತರಗತಿ ಮಕ್ಕಳಿಗೆ ಅವರ ದಾಖಲಾತಿ ಸಂಖ್ಯೆಯೇ, ಗುರುತಿನ ಚೀಟಿ ಸಂಖ್ಯೆಯಾಗಿರುತ್ತು. ಈಗ ತಾನೇ ಹೊಸತಾಗಿ 1 ನೇ ತರಗತಿಗೆ ದಾಖಲಾದ ಮಗುವಿಗೂ ಮತದಾನಕ್ಕೆ ಅವಕಾಶ ಒದಗಿಸಿರುವುದು ವಿಶೇಷ. ಮತಚಲಾಯಿಸುವ ಪ್ರತಿಯೊಬ್ಬರೂ ಮತದಾರರ ರಿಜಿಸ್ಟರ್‌ನಲ್ಲಿ ಸಹಿ ಮಾಡಿದ ನಂತರವೇ ಹಕ್ಕು ಚಲಾವಣೆಯ ಅವಕಾಶ ನೀಡಲಾಗಿತ್ತು.

ಈ ಚುನಾವಣೆಯಲ್ಲಿ ಮುದ್ತಿತ ಮತ ಪತ್ರಗಳನ್ನು ಬಳಸಲಾಗಿದ್ದು, ಅದರಲ್ಲಿ ಕ್ರ.ಸಂ. ಅಭ್ಯರ್ಥಿಯ ಹೆಸರು ಹಾಗೂ ಅವರ ಚಿಹ್ನೆಯನ್ನೂ ಮುದ್ರಿಸಲಾಗಿತ್ತು. NOTA ಕ್ಕೂ ಅವಕಾಶ ನೀಡಲಾಗಿತ್ತು. ಮತ ಚಲಾಯಿಸಿದ ಕುರುಹಾಗಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗಿತ್ತು. ಮತ ಪತ್ರದ ಮೇಲೆ ಗುರುತು ಮಾಡಲು ಮುದ್ರೆಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬರಿಗೂ 2 ಮತಗಳಿಗೆ ಅವಕಾಶವಿದ್ದು, ಒಂದು ಮುಖ್ಯಮಂತ್ರಿ ಸ್ಥಾನಕ್ಕೆ, ಇನ್ನೊಂದು ಉಪಮುಖ್ಯಮಂತಿ ಸ್ಥಾನಕ್ಕೆ. ಎರಡಕ್ಕೂ ಪ್ರತ್ಯೇಕ ಬಣ್ಣದ ಮತಪತ್ರವನ್ನು ಮುದ್ರಿಸಲಾಗಿತ್ತು. ಮತ್ತು ಪ್ರತ್ಯೇಕ ಮತ ಪೆಟ್ಟಿಗೆಯನ್ನೂ ವ್ಯವಸ್ಥೆ ಮಾಡಲಾಗಿತ್ತು.

ಗುರುತಿನ ಚೀಟಿ ಇಲ್ಲದೇ ಮತಚಲಾಯಿಸಲು ಪ್ರಯತ್ನಿಸುವುದು, ಒಮ್ಮೆ ಮತದಾನ ಮಾಡಿದವರೇ ಮತ್ತೆ ಮತ ಚಲಾಯಿಸಲು ಬರುವುದು, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಮತಗಟ್ಟೆ ಅಧಿಕಾರಿಗಳೊಂದಿಗೆ ಜಗಳಕ್ಕೆ ನಿಲ್ಲುವುದು, ಇತ್ಯಾದಿ ಕಾನೂನು ಬಾಹಿರವಾದ ನಿಯಮ ಉಲ್ಲಂಘನೆಯ ಪ್ರಕರಣಗಳೂ ದಾಖಲಾಗಿದ್ದವು. ವಿದ್ಯಾರ್ಥಿಗಳೇ ಪೋಲಿಸರ ಪಾತ್ರವನ್ನು ನಿರ್ವಹಿಸಿದ್ದು, ಮತದಾನದ ನಿಯಮವನ್ನು ಉಲ್ಲಂಘಿಸಿದರೆ ಏನು ಶಿಕ್ಷೆ ಆಗುತ್ತದೆ ಎಂಬುದು ವಿದ್ಯಾರ್ಥಿಗಳಿಗೆ ಮನವರಿಕ ಮಾಡಿಸುವ ಸಲುವಾಗಿ ನಿಯಮ ಉಲ್ಲಂಘಿತರನ್ನು ಪೋಲಿಸರು ಬಂಧಿಸಿ, ಶಿಕ್ಷೆಗೆ ಗುರಿಪಡಿಸುವ ಅವಕಾಶ ನೀಡಲಾಗಿತ್ತು.

ಮತ ಎಣಿಕೆ: ಆಧಿಸೂಚನೆಯಲ್ಲಿ ಪ್ರಕಟಿಸಿದಂತೆ, ಮತದಾನ ಮುಕ್ತಾಯವಾದ ೨ ದಿನಗಳ ಬಳಿಕ, ಪೋಲಿಸರ ಸುಪರ್ದಿಯಲ್ಲಿ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರುಗಳ ಸಮ್ಮುಖದಲ್ಲಿ ಮತ ಎಣಿಕೆ ಕಾರ‍್ಯ ನಡೆಯಿತು. ಠೇವಣಿಯನ್ನು ಉಳಿಸಿಕೊಳ್ಳಲು ಶೇ.5 ರಷ್ಟು ಮತ ಪಡೆಯಬೇಕು ಎಂಬ ನಿಯಮ ವಿಧಿಸಲಾಗಿತ್ತು. ವಿಶೇಷವೆಂದರೆ ಯಾವುದೇ ಅಭ್ಯರ್ಥಿ ಠೇವಣಿ ಕಳೆದು ಕೊಳ್ಳಲಿಲ್ಲ. ಎಣಿಕೆಗೆ ನೇಮಿಸಲ್ಪಟ್ಟ ಅಧಿಕಾರಿಗಳು ಮತ ಎಣಿಕೆ ಕಾರ್ಯ ಪೂರ್ಣಗೊಳಿಸಿದರು. ಚುನಾವಣಾಧಿಕಾರಿಯವರು ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಿ, ವಿಜೇತ ಅಭ್ಯರ್ಥಿಗಳಿಗೆ ಗೆಲುವಿನ ಪ್ರಮಾಣ ಪತ್ರವನ್ನು ನೀಡಿದರು.

ಅಭ್ಯರ್ಥಿಗಳ ನಡುವೆ ನಿಕಟ ಸ್ಪರ್ಧೆ ಏರ್ಪಟ್ಟಿದ್ದು, ಮುಖ್ಯ ಮಂತ್ರಿ ಸ್ಥಾನಕ್ಕಾಗಿ ಸ್ಪರ್ಧಿಸಿ ಜಯಶಾಲಿಯಾದ ಸಾಕ್ಷಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಸುರಾಜ್ ಅವರಿಗಿಂತ 29 ಮತಗಳನ್ನು ಹೆಚ್ಚಿಗೆ ಪಡೆದು ಗೆಲುವು ಸಾಧಿಸಿದರೆ, ಉಪ ಮುಖ್ಯ ಮಂತ್ರಿ ಸ್ಥಾನಕ್ಕಾಗಿ ಸ್ಪರ್ಧಿಸಿ ಜಯಶಾಲಿಯಾದ ಸುಕೇಶ ಶೆಟ್ಟಿ, ತಮ್ಮ ಸಮೀಪದ ಪ್ರತಿಸ್ಪರ್ಧಿ ವೈಷ್ಣವಿ ಅವರಿಗಿಂತ ಕೇವಲ 23 ಮತಗಳನ್ನು ಹೆಚ್ಚಿಗೆ ಪಡೆದು ಗೆಲುವು ಸಾಧಿಸಿದರು. ಇದರಲ್ಲಿ 12 ಅಸಿಂಧು ಮತಗಳು ದಾಖಲಾಗಿದ್ದವು.

ಪ್ರಮಾಣ ವಚನ ಸ್ವೀಕಾರ ಸಮಾರಂಭ: ವಿಜೇತ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಗಳು ಗೆಲುವಿನ ಪ್ರಮಾಣ ಪತ್ರ ವಿತರಿಸಿದ ಬಳಿಕ, ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಇಡೀ ಸಚಿವ ಸಂಪುಟದ ಸದಸ್ಯರಿಗೆ ಶಾಲಾ ಮುಖ್ಯೋಪಾಧ್ಯಾಯರೇ ರಾಜ್ಯಪಾಲರ ಪಾತ್ರ ನಿರ್ವಹಿಸಿ, ಪ್ರತಿಜ್ಞಾವಿಧಿ ಬೋಧಿಸಿದರು.

Leave a Reply

Your email address will not be published. Required fields are marked *

3 − one =