ಸಮಾಜದ ಸ್ವಸ್ಥ್ಯಕ್ಕೆ ಕಲೆಯ ಆಸ್ವಾದನೆ ಆಗತ್ಯ: ಸುರಭಿ ಜೈಸಿರಿಯಲ್ಲಿ ಪ್ರಕಾಶ್ಚಂದ್ರ ಶೆಟ್ಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದಿನ ದಿನದಲ್ಲಿ ಜನರು ಒತ್ತಡದ ಜೀವನ ಸಾಗಿಸುತ್ತಿದ್ದಾರೆ. ಬಹುತೇಕರು ಬದುಕಿಗಾಗಿ ಹೋರಾಟ ಮಾಡುತ್ತಿದ್ದರೇ, ಕೆಲವರು ಅಧಿಕಾರ ಮತ್ತು ಸಂಪತ್ತಿನ ಬೆನ್ನತ್ತಿದ್ದಾರೆ. ಈ ನಡುವೆ ಕಲೆ, ಸಂಸ್ಕೃತಿ, ಕ್ರೀಡೆಗಳಲ್ಲಿ ತೊಡಗಿಕೊಳ್ಳುವ, ಆಸ್ವಾದಿಸಲು ಸಮಯ ಇಲ್ಲದಾಗಿದೆ ಎಂದು ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಅವರು ಬುಧವಾರ ಬೈಂದೂರು ಶಾರದಾ ವೇದಿಕೆಯಲ್ಲಿ ೧೯ನೇ ವರ್ಷದ ಸಂಭ್ರಮದಲ್ಲಿರುವ ಸುರಭಿ ರಿ. ಬೈಂದೂರು ಇದರ ’ಸುರಭಿ ಜೈಸಿರಿ’ ಸಾಂಸ್ಕೃತಿಕ ವರ್ಷಧಾರೆಗೆ ಚಾಲನೆ ನೀಡಿ ಮಾತನಾಡಿದರು.

ತಮ್ಮ ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕು ಮತ್ತು ಮನೆಯಲ್ಲಿ ಬಂಧಿಯಾಗಿರಬೇಕೆಂಬ ಎಂಬ ಆಶಯದೊಂದಿಗೆ ಅವರನ್ನು ಸಲಹುತ್ತಿರುವ ತಂದೆ ತಾಯಂದಿರ ನಡುವೆ ಮಕ್ಕಳ ನೈಜ ಶಿಕ್ಷಣಕ್ಕೆ ಪೂರಕವಾಗಿರುವ ಕಲಾ ಚಟುವಟಿಕೆಯಲ್ಲಿ ಕೆಲವರಾದರೂ ತೊಡಗಿಕೊಳ್ಳುವಂತೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದು ಸಂತಸ ವ್ಯಕ್ತಪಡಿಸಿದ ಅವರು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಕಲಾ ಸಂಘಗಳು ಅಗತ್ಯವೆಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಸಂಗೀತ, ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸ ಸುರಭಿಯಂತಹ ಸಂಸ್ಥೆಗಳಿಂದ ನಿರಂತವಾಗಿ ನಡೆಯುತ್ತಿದೆ. ಮಕ್ಕಳು ಬಾಲ್ಯದಲ್ಲಿಯೇ ಇಂತಹ ಕಲಾಪ್ರಕಾರಗಳಲ್ಲಿ ತೊಡಗಿಸಿಕೊಂಡು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುವಲ್ಲಿ ಬೈಂದೂರಿನ ಕಲಾ ಸಂಸ್ಥೆಗಳು ತನ್ನದೇ ಆದ ಕೊಡುಗೆ ನೀಡಿದೆ ಎಂದರು.

ಸಂಗೀತ ಕಲಾವಿದೆ ಗೌರಿ ತಗ್ಗರ್ಸೆ ಅವರನ್ನು ಸನ್ಮಾನಿಸಲಾಯಿತು. ಸುರಭಿಯ ಸಂಗೀತ ಗುರು ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಚಿತ್ರಕಲಾ ಶಿಕ್ಷಕ ಗಿರೀಶ್ ತಗ್ಗರ್ಸೆಗೆ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು. ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾದ, ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.

ಬೈಂದೂರು ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್‌ನ ಆಡಳಿತ ಟ್ರಸ್ಟೀ ಬಿ. ರಾಮಕೃಷ್ಣ ಶೇರುಗಾರ್ ಶುಭಶಂಸನೆಗೈದರು. ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ಜೆಸಿಐ ಶಿರೂರು ಅಧ್ಯಕ್ಷ ನಾಗೇಶ್ ಕೆ. ಅತಿಥಿಗಳಾಗಿದ್ದರು.

ಸುರಭಿ ಬೈಂದೂರು ನಿರ್ದೇಶಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗಣೇಶ್ ಬೈಂದೂರು ಸನ್ಮಾನಿತರ ಪರಿಚಯ ಮಾಡಿದರು. ಸುರಭಿ ರಿ. ಬೈಂದೂರು ಅಧ್ಯಕ್ಷ ಸತ್ಯನಾ ಕೊಡೇರಿ ಸ್ವಾಗತಿಸಿ, ಕಾರ್ಯದರ್ಶಿ ರಾಮಕೃಷ್ಣ ಉಪ್ಪುಂದ ಧನ್ಯವಾದಗೈದರು. ಕೀರ್ತಿ ಉಪ್ಪುಂದ ಕಾರ್ಯಕ್ರಮ ನಿರೂಪಿಸಿದರು.

► ಸಂಗೀತ ಕಲಾವಿದೆ ಗೌರಿ ತಗ್ಗರ್ಸೆಗೆ ಸನ್ಮಾನ – https://kundapraa.com/?p=30917 .

 

Leave a Reply

Your email address will not be published. Required fields are marked *

seventeen + 17 =