ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅರಬ್ಬೀ ಸಮುದ್ರದಲ್ಲಿ ಉಂಟಾದ ತೌಕ್ತೇ ಚಂಡಮಾರುತದಿಂದಾಗಿ ಉಡುಪಿ ಜಿಲ್ಯಾದ್ಯಂತ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಿರುವ ಪರಿಣಾಮ ಸಮುದ್ರ ತೀರದಲ್ಲಿ ಕಡಲ್ಕೋರೆತ, ನದಿ ತಟದಲ್ಲಿ ನೆರೆಯ ಹಾವಳಿ ಹೆಚ್ಚಿದೆ.
ಶನಿವಾರ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ 3 ಮನೆಗಳಿಗೆ, 5 ತಾತ್ಕಾಲಿಕ ಶೆಡ್, ಬ್ರಹ್ಮಾವರ ತಾಲೂಕಿನಲ್ಲಿ 4 ಮನೆಗಳಿಗೆ ಹಾಗೂ ಉಡುಪಿ ತಾಲೂಕಿನಲ್ಲಿ 1 ಮನೆಗೆ ಭಾಗಶಃ ಹಾನಿಯಾಗಿದೆ. ಕಾಪು ತಾಲೂಕಿನಲ್ಲಿ ವಿದ್ಯುತ್ ತಂತಿ ಗಾಳಿಗೆ ಬಿದ್ದು ವಿದ್ಯುತ್ ತಗುಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮರಗಳು ಧರೆಗೆ ಊರುಳಿರುವುದರಿಂದ ಅಲ್ಲಲ್ಲಿ ರಸ್ತೆ ಬಂದ್ ಆಗಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗಿದೆ.
► ತೌಕ್ತೇ ಚಂಡಮಾರುತದ ಅಬ್ಬರ: ಹೆಚ್ಚಿದ ಕಡಲ್ಕೋರೆತ, ನದಿ ತೀರದ ಪ್ರದೇಶದಲ್ಲಿ ನೆರೆ – https://kundapraa.com/?p=48195 .
ಪುನರ್ವಸತಿ:
ಬೈಂದೂರು ತಾಲೂಕಿನಲ್ಲಿ ಕಡಲ ತೀರದ 4 ಕುಟುಂಬಗಳನ್ನು ಉಪ್ಪುಂದ ಜೂನಿಯರ್ ಕಾಲೇಜಿನ ಪುನರ್ವಸತಿ ಕೇಂದ್ರಕ್ಕೆ, ನೆರೆ ಹಾವಳಿ ಹೆಚ್ಚಿರುವ ಪ್ರದೇಶದ ಕುಟುಂಬದವರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಕುಂದಾಪುರ ತಾಲೂಕಿನ 7 ಕುಟುಂಬಕ್ಕೂ ಹೆಚ್ಚಿನ ಕುಟುಂಬಗಳನ್ನು ಸಂಬಂಧಿಕರ ಮನೆಗೆ, ಕಾಪು ತಾಲೂಕಿನ ಒಂದು ಕುಟುಂಬವನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮದ ಸುಮಾರು 50 ರಿಂದ 60 ಜನರಿಗೆ ಪರಿಸ್ಥಿತಿ ಅವಲೋಕಿಸಿ ಕೋಡಿ ಶಾಲೆಯಲ್ಲಿ ತೆರೆದ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ಈಗಾಗಲೇ ಜನರಿಗೆ ತಿಳಿಹೇಳಲಾಗಿದೆ. ಉಡುಪಿ, ಕಾಪುವಿನಲ್ಲಿ ಈಗಾಗಲೇ ಸಮುದ್ರ ತೀರದ ಜನಗಳಿಗೆ ಪರಿಸ್ಥಿತಿ ಬಿಗಡಾಯಿಸಿದಲ್ಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ.
► ಕಡಲ ಅಲೆಗಳ ರುದ್ರ ನರ್ತನ: ಮನೆ, ದೋಣಿಗೆ ಹಾನಿ. ಬೈಂದೂರು ಶಾಸಕರ ಭೇಟಿ – https://kundapraa.com/?p=48212 .
ಮರವಂತೆ ಮೀನುಗಾರಿಕಾ ರಸ್ತೆಗೆ ಸಮುದ್ರಪಾಲು:
ಮರವಂತೆ ಹೊರಬಂದರು ಸಮೀಪದ ಕಾಂಕ್ರಿಟ್ ರಸ್ತೆ ಸುಮಾರು 25 ಮೀಟರ್ ತನಕ ಸಮುದ್ರ ಪಾಲಾಗಿದೆ. ಈ ಭಾಗದಲ್ಲಿಯೇ ಹೆಚ್ಚಿನ ಸಮುದ್ರ ಕೊರೆತವಿದ್ದು, ಸಮೀಪದ ಮನೆಗಳಿಗೆ ಅಪಾಯ ಎದುರಾಗಿದೆ.
► ಮರವಂತೆ: ಏರುಗತಿಯಲ್ಲಿ ಸಾಗಿದ ಅಲೆಗಳ ಆರ್ಭಟ. ಆತಂಕದಲ್ಲಿ ಮೀನುಗಾರರು – https://kundapraa.com/?p=48188 .