ತೌಕ್ತೆ ಚಂಡಮಾರುತದ ಪರಿಣಾಮ: ಕುಂದಾಪುರ & ಬೈಂದೂರು ತಾಲೂಕಿನಲ್ಲಿ ಅಪಾರ ಹಾನಿ, 68.12 ಲಕ್ಷ ರೂ. ನಷ್ಟದ ಅಂದಾಜು

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತೌಕ್ತೆ ಚಂಡಮಾರುತದಿಂದಾಗಿ ಕುಂದಾಪುರ & ಬೈಂದೂರು ತಾಲೂಕುಗಳಲ್ಲಿ ಅಪಾರ ಹಾನಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಶನಿವಾರ ರಾತ್ರಿಪೂರ್ತಿ ಭಾರಿ ಗಾಳಿ ಮಳೆ ಸುರಿದಿದ್ದರಿಂದ ಹಲವೆಡೆ ಮನೆ ಕೊಟ್ಟಿಗೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ರಸ್ತೆ, ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಯಿತು.

Call us

Call us

ಈ ತನಕ ಕುಂದಾಪುರ ತಾಲೂಕಿನ 44 ಮನೆಗಳಿಗೆ ಭಾಗಶಃ ಹಾನಿಯಾಗಿರುಗ ಬಗ್ಗೆ ವರದಿ ದೊರೆತಿದ್ದು ಸುಮಾರು ರೂ, 17,94,000 ನಷ್ಟುವುಂಟಾಗಿದೆ. ಜಾನುವಾರು ಕೊಟ್ಟಿಗೆ, ಅಂಗಡಿ ಕೋಣೆ ಸೇರಿದಂತೆ ಇತರೆ ಕಟ್ಟಡಗಳಿಗೆ ಹಾನಿಯಾಗಿ ಸುಮಾರು 1,43,000 ರೂ. ನಷ್ಟ ಉಂಟಾಗಿದೆ. ಬೈಂದೂರು ತಾಲೂಕಿನ 3 ಮನೆಗೆಳಿಗೆ ಸಂಪೂರ್ಣ ಹಾನಿ, 39 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಒಟ್ಟು ರೂ. 40,95,000 ನಷ್ಟ ಉಂಟಾಗಿದೆ. ಅಂಗಡಿ ಕೋಣೆ, ಅಂಗನವಾಡಿಯ 5 ಆವರಣ ಗೋಡೆ ಸೇರಿ ಒಟ್ಟು ರೂ. 4,55,000 ನಷ್ಟ ಉಂಟಾಗಿದೆ. ತೋಟಗಾರಿಕಾ ಬೆಳೆಯ ಹಾನಿಯಿಂದಾಗಿ ರೂ. 3,25000 ನಷ್ಟ ಉಂಟಾಗಿದೆ.

Call us

Call us

ಗಂಗೊಳ್ಳಿ ಮುಖ್ಯರಸ್ತೆಯ ಮ್ಯಾಂಗನೀಸ್ ರೋಡ್, ಬಂದರು ಬಸ್ ನಿಲ್ದಾಣದ ಸಮೀಪ ಭಾರಿ ದೊಡ್ಡ ಮರದ ಕೊಂಬೆಗಳು ಮುರಿದು ಬಿದ್ದಿದೆ. ಬಂದರು ಮತ್ತು ಬೇಲಿಕೇರಿ ಪರಿಸರದಲ್ಲಿ ಸುಮಾರು 7 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಭಾರಿ ಗಾಳಿ ಮಳೆಗೆ ಗಂಗೊಳ್ಳಿ ಮೀನುಗಾರಿಕಾ ಹರಾಜು ಪ್ರಾಂಗಣದ ಮೇಲ್ಛಾವಣಿಯ ಸಿಮೆಂಟ್ ಶೀಟ್ ಹಾರಿ ಹೋಗಿ ಹಾನಿಯಾಗಿದೆ.

ಗಂಗೊಳ್ಳಿಯ ಹಿತ್ಲುಗದ್ದೆ ಮನೆ ನಿವಾಸಿ ಬಾಬು ಪೂಜಾರಿ ಎಂಬುವರ ವಾಸ್ತವ್ಯದ ಮನೆ ಮೇಲೆ ಶನಿವಾರ ರಾತ್ರಿ ತೆಂಗಿನ ಮರ ಮುರಿದು ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡಿದೆ. ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಹಾನಿಯಾಗಿದೆ. ಬೈಲೂರ್ಕಾರ್ ಹಿತ್ಲು ನಿವಾಸಿ ದೇವದಾಸ ಖಾರ್ವಿ ಎಂಬುವರ ಮನೆಯ ಮೇಲೆ ಮರದ ಕೊಂಬೆ ಮುರಿದು ಬಿದ್ದು ಮನೆಗೆ ಭಾಗಶ: ಹಾನಿಯಾಗಿದೆ. ಮನೆಯ ಮೇಲ್ಛಾವಣಿ ಹಾಗೂ ಸಮೀಪದಲ್ಲಿದ್ದ ಶೆಡ್ ಜಖಂಗೊಂಡಿದೆ. ತಾರಿಬಾಗಿಲು ನಿವಾಸಿ ವಿಕಲಚೇತನ ವಾಸುದೇವ ಖಾರ್ವಿ ಅವರ ವಾಸ್ತವ್ಯದ ಮನೆ ಮೇಲೆ ತೆಂಗಿನ ಮರ ಮುರಿದು ಬಿದ್ದಿದೆ. ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಜಖಂಗೊಂಡಿದೆ.

ಹಕ್ಲಾಡಿ ಗ್ರಾಮದ ಬಚ್ಚಿ, ಮಾಚ ಪೂಜಾರಿ, ಮಂಜ ಗಾಣಿಗ, ರತ್ನಾಕರ ಪೂಜಾರಿ, ಚಂದ್ರ ಪೂಜಾರಿ, ನಾಗು ಎಂಬುವವರ ಪತ್ಯೇಕ ಮನೆಗಳು, ಉಪ್ಪಿನಕುದ್ರು ಗ್ರಾಮದ ಪದ್ದು, ಕೃಷ್ಣಿ, ಗಾಯತ್ರಿ, ವೆಂಕಟ, ಗಣೇಶ್ ಆಚಾರ್ಯ, ಎಂಬುವವರ ಮನೆ, ಕುಂದಬಾರಂದಾಡಿ ಗ್ರಾಮದ ರತ್ನ ಮಡಿವಾಳ ಹಾಗೂ ಮಾಧು ಮೊಗೇರ್ತಿ, ಸುಶೀಲಾ ಆಚಾರ್ತಿ, ಆಲೂರು ಗ್ರಾಮದ ಸಾಧಮ್ಮ ಶಡ್ತಿ, ನೂಜಾಡಿ ಗ್ರಾಮದ ಗೋಪಾಲ ನಾಯ್ಕ್, ಕುಂದಾಪುರ ಕಸಬಾ ಗ್ರಾಮದ ರತ್ನ, ವಕ್ವಾಡಿಯ ಗಣಪಯ್ಯ ಆಚಾರಿ, ಕಟ್ ಬೆಲ್ತೂರು ಗ್ರಾಮದ ಸೂರ ದೇವಾಡಿಗ, ನಾಗು, ಅಶೋಕ್, ಬಚ್ಚಿ, ಮುತ್ತು, ರಾಘವೇಂದ್ರ ಆಚಾರಿ ಎಂಬುವವರ ಪ್ರತ್ಯೇಕ ಮನೆಗಳು, ತಲ್ಲೂರು ಗ್ರಾಮದ ಯಶೋಧ, ಕಮಲ, ಮುತ್ತು, ಕುಂಭಾಶಿ ಗ್ರಾಮದ ಲಕ್ಷ್ಮೀ, ಕೋಟೇಶ್ವರ ಗ್ರಾಮದ ಶಾರದಾ, ಕನಕ, ಪಾರ್ವತಿ ವಂಡ್ಸೆ ಗ್ರಾಮದ ಲಕ್ಷ್ಮೀ, ಕನ್ಯಾನ ಗ್ರಾಮದ ಕೃಷ್ಣ, ಕುಂದಾಪುರದ ರಂಗ ಪೂಜಾರಿ, ಬಸವ ಪೂಜಾರಿ, ಗಣೇಶ್ ಪೂಜಾರಿ, ಪಿಯೂಷ್ ಡಿಸೋಜಾ, ಗಿರಿಜಾ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಯೋಜನಾನಗರ ದರ್ಖಾಸ್ತ್ ಕಾಲೋನಿಯಲ್ಲಿ ಮನೆಗಳ ಮೇಲೆ ಮರಗಳು ಬಿದ್ದ ಪರಿಣಾಮ ಇಲ್ಲಿನ ಚಂದು ಎಂಬುವವರ ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಅವರ ಕುಟುಂಬವನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಶಾರದಾ, ನಾರಾಯಣ, ಕೃಷ್ಣ ಎಂಬುವವರ ಮನೆ ಸೇರಿದಂತೆ ಐದಾರು ಮನೆಗಳು ಹಾನಿಗೀಡಾಗಿದೆ. ಅದೃಷ್ಟವಶಾತ್ ನಿವಾಸಿಗಳು ಮಾತ್ರ ಅಪಾಯದಿಂದ ಪಾರಾಗಿದ್ದಾರೆ. ಇಲ್ಲಿನ ಹೋಟೆಲ್ ಅಂಬಿಕಾ ಇಂಟರ್ ನ್ಯಾಷನಲ್ ಹೋಟೆಲ್ನ ಮೇಲ್ಚಾವಣೆ ಕೂಡ ಹಾರಿಹೋಗಿದೆ.

ಶಿರೂರು ಗ್ರಾ.ಪಂ. ವ್ಯಾಪ್ತಿಯ ಅಳ್ವೆಗದ್ದೆ ಮೀನುಗಾರಿಕಾ ಜಟ್ಟಿಗಳಿಗೆ ನೀರು ನುಗ್ಗಿದೆ. ಕಳಿಹಿತ್ಲು ಭಾಗದಲ್ಲಿ ಮರಗಳು ಧರೆಶಾಹಿಯಾದ ಪರಿಣಾಮ ದೋಣಿ ಶೆಡ್ ಹಾಗೂ 4 ದೋಣಿಗಳು ಜಖಂಗೊಂಡಿದೆ ಸೇರಿದಂತೆ ಮೀನುಗಾರಿಕಾ ರಸ್ತೆ ದಾಟಿ ನೀರು ನುಗ್ಗಿದೆ. ಕರಾವಳಿ,ದೊಂಬೆ ಮುಂತಾದ ಕಡೆ ಕಡಲ ಅಬ್ಬರ ಅಕಗೊಂಡು ಅಪಾರ ತೆಂಗಿನ ಮರಗಳು ಕಡಲ ಪಾಲಾಗಿದೆ.ಶಿರೂರು ವ್ಯಾಪ್ತಿಯಲ್ಲಿ ಒಟ್ಟು 10 ಲಕ್ಷಕ್ಕೂ ಅಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಶಿರೂರು ಗ್ರಾ.ಪಂ. ವ್ಯಾಪ್ತಿಯ ಹಡವಿನಕೋಣೆ ವಾಸುದೇವ ಮೇಸ್ತ ಅವರ ವಾಸದ ಮನೆ, ಚಂದ್ರಾವತಿ ಬಾಬು ಮೇಸ್ತ ವಾಸದ ಮನೆ, ತಿಮ್ಮಪ್ಪ ಮೊಗವೀರ ಅವರ ವಾಸದ ಮನೆಯ ಮೇಲೆ ಮರಬಿದ್ದು ಸಂಪೂರ್ಣ ಹಾನಿ ಸೇರಿದಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 16 ಮನೆಗಳು ಹಾನಿಗೀಡಾಗಿದೆ.

ನೆರೆ ಇಳಿಮುಖ:
ಚಂಡಮಾರುತದಿಂದಾಗಿ ಉಂಟಾದ ಕಡಲಿನ ರೌದ್ರ ನರ್ತನ ಭಾನುವಾರ ಕಡಿಮೆಯಾಗಿದ್ದು ಕಡಲು ಸ್ವಲ್ಪ ಶಾಂತಗೊಂಡ ಹಿನ್ನೆಲೆಯಲ್ಲಿ ನೆರೆ ಇಳಿಮುಖಗೊಂಡಿದೆ. ಭಾನುವಾರ ಬೆಳಿಗ್ಗೆ ಗಾಳಿ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಿತ್ತು.

ಇದನ್ನೂ ಓದಿ
► ಮರವಂತೆ ಕೊರೆತ ತಡೆಗೆ ಸುಸ್ಥಿರ ಯೋಜನೆಗೆ ಯತ್ನ: ಸಚಿವ ಕೋಟ, ದೊಂಬೆಯಲ್ಲಿ ಶಾಶ್ವತ ತಡೆಗೆ ಪ್ರಸ್ತಾವನೆ: ಶಾಸಕ ಬಿಎಂಎಸ್ – https://kundapraa.com/?p=48261 .
► ತೌಕ್ತೆ ಚಂಡಮಾರುತದಿಂದ ವಿವಿಧೆಡೆ ಹಾನಿ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭೇಟಿ – https://kundapraa.com/?p=48270 .

Leave a Reply

Your email address will not be published. Required fields are marked *

five × 2 =