ಸಂಭ್ರಮದಿ ಜರುಗಿದ ಪ್ರಸಿದ್ಧ ತಗ್ಗರ್ಸೆ ಕಂಬಳೋತ್ಸವ

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಶತಮಾನದ ಇತಿಹಾಸ ಹೊಂದಿರುವ ಸಾಂಪ್ರದಾಯಿಕ ತಗ್ಗರ್ಸೆ ಕಂಬಳವು ಕಂಠದಮನೆ ಕುಟುಂಬಸ್ಥರಿಗೆ ಸೇರಿದ ಕಂಬಳಗದ್ದೆಯಲ್ಲಿ ಪ್ರತಿವರ್ಷದಂತೆ ವಿಧಿವತ್ತಾಗಿ, ವಿಜೃಂಭಣೆಯಿಂದ ನಡೆಯಿತು. ಹಲವು ಜೊತೆ ಕೋಣಗಳು ಹರಕೆ ಹಾಗೂ ಸ್ವರ್ಧೆಯಲ್ಲಿ ಭಾಗವಹಿಸಿ ಕಂಬಳದ ಮೆರಗು ಹೆಚ್ಚಿಸಿದವು.

ಕಂಬಳದ ದಿನ ಬೆಳಿಗ್ಗೆ ಗದ್ದೆಯ ಅಲಂಕಾರ, ಪೂಜೆ ಕಾರ್ಯಾದಿಗಳು ನೆರವೇರಿದ ಬಳಿಕ ಮಧ್ಯಾಹ್ನ ಕಂಬಳಕ್ಕೆ ಬರುವ ಕೋಣಗಳನ್ನು ವೀಳ್ಯ, ತೆಂಗಿನಕಾಯಿ ನೀಡಿ ಬರಮಾಡಿಕೊಳ್ಳಲಾಯಿತು.ಕಂಬಳ ಗದ್ದೆಯನ್ನು ಖುರ್ಜು ನಿಲ್ಲಿಸಿ, ತೋರಣಗಳಿಂದ ಅಲಂಕರಿಸಲಾಗಿತ್ತು. ಊರಿನ ಒಂದು ನಿರ್ದಿಷ್ಟ ಕುಟುಂಬದ ಕೋಣಗಳನ್ನು ಗದ್ದೆಗೆ ಇಳಿಸಿದ ಬಳಿಕ ಕಂಬಳಕ್ಕೆ ಅಧಿಕೃತ ಚಾಲನೆ ದೊರೆಯಿತು.

ವಿಶೇಷ ವೇಷಭೂಷಣ, ವಾದ್ಯ ಮುಂತಾದವುಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿಬಂದ ನೂರಾರು ಜೊತೆ ಕೋಣಗಳ ಪೈಕಿ ಕೆಲವನ್ನು ಕಂಬಳ ಗದ್ದೆಯಲ್ಲಿ ಹರಕೆಯ ಸಲುವಾಗಿ ಕೋಣಗಳನ್ನು ಓಡಿಸಿದರೇ, ಉಳಿದ ಕೋಣಗಳು ಸ್ವರ್ಧೆಯಲ್ಲಿ ಪಾಲ್ಗೊಂಡವು.

ಕಂಠದಮನೆ ಕುಟುಂಬದ ನಾರಾಯಣ ಹೆಗ್ಡೆಯವರ ಸಾರಥ್ಯದಲ್ಲಿ ಸಾಂಪ್ರದಾಯಿಕ ಕಂಬಳ ಮುನ್ನಡೆಯುತ್ತಿದ್ದು ಊರಿನ ಜನ ಹಬ್ಬದಂತೆ ಸಂಭ್ರಮಿಸಿದರು. ವಿಶಾಲ ಗದ್ದೆಯ ಅಂಚುಗಳಲ್ಲಿ ನಿಂತು ಕಂಬಳದ ಸೊಬಗನ್ನು ಸವಿದವರು. ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬಿ.ಎಂ ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಂಕರ ಪೂಜಾರಿ, ಸುರೇಶ್ ಬಟವಾಡಿ, ಬಾಬು ಶೆಟ್ಟಿ ತಗ್ಗರ್ಸೆ, ಜಿಲ್ಲಾ ಕಂಬಳ ಸಮಿತಿಯ ಶಾಂತಾರಾಮ ಶೆಟ್ಟಿ, ಬೈಂದೂರು ವಲಯ ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಸೇರಿದಂತೆ ವಿವಿಧ ಗಣ್ಯರು ಕಂಬಳೋತ್ಸವ ವೀಕ್ಷಣೆಗೆ ಆಗಮಿಸಿದ್ದರು.

ಸ್ವರ್ಧೆಯಲ್ಲಿ ಭಾಗವಹಿಸಿ ಗೆದ್ದ ಮೂರು ಜೋಡಿ ಕೋಣಗಳಿಗೆ, ಉತ್ತಮವಾಗಿ ಕೋಣಗಳನ್ನು ಓಡಿಸಿದವರಿಗೆ ಕೊನೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

 

Leave a Reply

Your email address will not be published. Required fields are marked *

17 − five =